ದೇವದತ್ತ ಜೋಶಿ
ಉತ್ತರ ಪ್ರದೇಶದಲ್ಲಿ ಕಳೆದ 7 ವರ್ಷದಲ್ಲಿ ಶೈಕ್ಷಣಿಕ ರಂಗದಲ್ಲಿ ಕ್ರಾಂತಿಕಾರಕ ಪರಿವರ್ತನೆ ತರಲಾಗಿದೆ. ಈ ಹಿಂದೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ರಾಜ್ಯದ ವಿವಿಗಳು ಸ್ಥಾನ ಪಡೆಯಲು ಪರದಾಡುತ್ತಿದ್ದವು. ಆದರೆ ಈಗ ಹಾಗಿಲ್ಲ. ಮೊದಲ ಬಾರಿ ಇತ್ತೀಚಿನ ಕ್ಯುಎಸ್ ವಿಶ್ವ ರ್‍ಯಾಂಕಿಂಗ್‌ನಲ್ಲಿ 7 ವಿವಿಗಳು ಸ್ಥಾನ ಪಡೆದಿದ್ದೇ ಇದಕ್ಕೆ ಸಾಕ್ಷಿ ಎಂದು ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹೇಳಿದರು.
ತಮ್ಮನ್ನು ಭೇಟಿ ಮಾಡಿದ ಕರ್ನಾಟಕ ಹಾಗೂ ತ್ರಿಪುರಾ ಪತ್ರಕರ್ತರ ಜತೆ ಲಖನೌ ಜನಭವನದಲ್ಲಿ ಸಂವಾದ ನಡೆಸಿದ ಅವರು, ‘ನಾನು ರಾಜ್ಯಪಾಲೆ ಆಗಿ ಅಧಿಕಾರಕ್ಕೆ ಬಂದ ನಂತರ ಉನ್ನತ ಶಿಕ್ಷಣದ ಉನ್ನತೀಕರಣಕ್ಕೆ ಗಮನ ಹರಿಸಿದ್ದೇನೆ. ಕರೋನಾ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳು ಬಂದ್ ಇದ್ದರೂ ನಾವು ಸುಮ್ಮನೆ ಕೂರಲಿಲ್ಲ. ವಿವಿಗಳ ಮೂಲಸೌಕರ್ಯ ಬಲಪಡಿಸಿದೆವು. ಇತ್ತೀಚೆಗೆ ಯಾವುದೇ ವ್ಯಾಜ್ಯ ಇಲ್ಲದಂತೆ ಪಾರದರ್ಶಕವಾಗಿ ತಿಂಗಳೊಪ್ಪತ್ತಿನಲ್ಲಿ 15,000 ವಿವಿ ನೇಮಕಾತಿ ಮಾಡಲಾಗಿದೆ. ಯಾವುದೇ ವಿವಿಗಳ ಕುಲಪತಿ ಹುದ್ದೆ ಖಾಲಿ ಇರದಂತೆ ನೋಡಿಕೊಳ್ಳಲಾಗಿದೆ. ಇಂತಹ ಕ್ರಮ ಹಾಗೂ ಶ್ರಮದ ಪರಿಣಾಮ ಮೊದಲ ಸಲ ಕ್ಯುಎಸ್ ರ್‍ಯಾಂಕಿಂಗ್‌ನಲ್ಲಿ ರಾಜ್ಯದ 7 ವಿವಿಗಳು ಸ್ಥಾನ ಪಡೆದವು. ನ್ಯಾಕ್ ಸರ್ಟಿಫಿಕೇಶನ್‌ನಲ್ಲಿ 17 ವಿವಿಗಳು ಎ, 9 ವಿವಿಗಳು ಎ+, 5 ವಿವಿಗಳು ಎ++ ಮಾನ್ಯತೆ ಗಿಟ್ಟಿಸಿದವು. ರಾಜ್ಯದ ವಿವಿಗಳು ಇಂದು ಇಷ್ಟು ಉನ್ನತ ಶ್ರೇಣಿಗೆ ಏರಿದ್ದು ಇದೇ ಮೊದಲು’ ಎಂದು ಹರ್ಷಿಸಿದರು.ಈ ಹಿಂದೆ ಗುಜರಾತ್‌ನಲ್ಲಿ ಶಿಕ್ಷಕಿ ಆಗಿದ್ದ ಅವರು ಗುಜರಾತ್ ಶಿಕ್ಷಣ ಸಚಿವೆ ಕೂಡ ಆಗಿದ್ದರು. ಹಾಲಿ ಉ.ಪ್ರ. ವಿವಿಗಳ ಕುಲಾಧಿಪತಿಯೂ ಹೌದು. ಈ ಬಗ್ಗೆ ಮಾತನಾಡಿದ ಅವರು, ‘ನಾನು ಶಿಕ್ಷಣ ಸಚಿವೆ ಆಗಿದ್ದಾಗ ಕೈಗೊಂಡ ಕ್ರಮಗಳ ಅನುಭವ ಧಾರೆ ಎರೆದು ಉತ್ತರ ಪ್ರದೇಶದ ಉನ್ನತ ಶಿಕ್ಷಣದ ಏಳ್ಗೆಗೆ ಶ್ರಮಿಸುತ್ತಿದ್ದೇನೆ'''' ಎಂದು ಹೇಳಿದರು. ಶಿಕ್ಷಣ ಕ್ಷೇತ್ರದಲ್ಲಿ ಕೆಜಿ ಟು ಪಿಜಿ ಪರಿಕಲ್ಪನೆಯನ್ನು ಒತ್ತಿ ಹೇಳಿದ ಅವರು, ಅಂಗನವಾಡಿಗಳಲ್ಲಿ 3 ವರ್ಷದ ಮಕ್ಕಳು ಮತ್ತು 1ನೇ ತರಗತಿಯಲ್ಲಿ ಎಲ್ಲಾ 6 ವರ್ಷದ ಮಕ್ಕಳ 100% ದಾಖಲಾತಿ ಖಚಿತಪಡಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಪರಿಣಾಮಕಾರಿ ಜಾರಿ ಮೂಲಕ ಮಾತೃಭಾಷಾ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಡಿ.ಲಿಟ್. ಪದವಿಗಳನ್ನು ಕುಶಲಕರ್ಮಿಗಳಂಥ ತಳಮಟ್ಟದ ಸಾಧಕರಿಗೆ ನೀಡುವ ಪರಿಪಾಠವನ್ನು ಮೊದಲ ಬಾರಿ ಆರಂಭಿಸಲಾಗಿದೆ. ರಾಜ್ಯದಲ್ಲಿ 84 ವಿವಿಗಳಿದ್ದು, ವಿವಿಗಳು ಸಮಾಜಸೇವೆ ಮಾಡಬೇಕು ಎಂದು ಸೂಚಿಸಲಾಗಿದೆ. ಆ ಪ್ರಕಾರ ಅವು ಕನಿಷ್ಠ 5 ಗ್ರಾಮ ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುತ್ತಿವೆ. ವಿವಿಗಳು ಆರ್ಥಿಕ ಸ್ವಾವಲಂಬಿ ಆಗುವಂತೆ ಕ್ರಮ ವಹಿಸಲಾಗಿದೆ ಎಂದರು.
ಗರ್ಭಕಂಠ ಕ್ಯಾನ್ಸರ್ ಲಸಿಕಾಕರಣದಲ್ಲೂ ಮೊದಲು:ಗರ್ಭಕಂಠ ಕ್ಯಾನ್ಸರ್ ಉಚಿತ ಲಸಿಕಾಕರಣ ಇತ್ತೀಚೆಗೆ ದೇಶಾದ್ಯಂತ ಆರಂಭವಾಗಿದ್ದರೂ ಉತ್ತರ ಪ್ರದೇಶ ಜನಭವನ ಇದಕ್ಕೂ ಮುನ್ನವೇ ಆರಂಭಿಸಿತ್ತು. 3 ಲಕ್ಣ ಡೋಸ್ ಉಚಿತ ಲಸಿಕೆ ನೀಡಿದ್ದೆವು ಎಂದು ಆನಂದಿಬೆನ್ ಹೇಳಿದರು.ಈ ವೇಳೆ ಜನಭವನ ಅಧಿಕಾರಿಗಳು, ಪಿಐಬಿ ಗುವಾಹಟಿಯ ಎಡಿಜಿ ಕೃಪಾ ಶಂಕರ್ ಯಾದವ್, ಪಿಐಬಿ ಲಖನೌ ನಿರ್ದೇಶಕ ದಿಲೀಪ್ ಕುಮಾರ್ ಶುಕ್ಲಾ, ಪಿಐಬಿ ಬೆಂಗಳೂರಿನ ಸಹಾಯಕ ನಿರ್ದೇಶಕಿ ಕರಿಷ್ಮಾ ಪಂತ್ ಇದ್ದರು.
ಸಿಎಂ ಜತೆ ಸಮನ್ವಯ: ರಾಜ್ಯಪಾಲೆಲಖನೌ: ಸಿಎಂ-ರಾಜ್ಯಪಾಲರ ನಡುವೆ ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಬಿಕ್ಕಟ್ಟು ಉಂಟಾದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯ ಸರ್ಕಾರದ ಜತೆ ಸಹಯೋಗದಿಂದ ಕಾರ್ಯನಿರ್ವಹಿಸುತ್ತೇವೆ. ಅವರಿಗೆ (ಸಿಎಂ) ಸೂಚನೆ ನೀಡುತ್ತೇವೆ. ಕೆಲಸಗಳು ನಡೆಯುತ್ತವೆ. ಯಾವುದೇ ಸಮಸ್ಯೆ ಆಗುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.