ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಎಪಿಎಂಸಿಗೆ ಭೇಟಿ ನೀಡಿ ಮೂಲಸೌಕರ್ಯ, ಆಡಳಿತಾತ್ಮಕ ವ್ಯವಸ್ಥೆ ಹಾಗೂ ರೈತರಿಗೆ ಒದಗಿಸಲಾಗುತ್ತಿರುವ ಸೇವೆಗಳ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಎಪಿಎಂಸಿಯಲ್ಲಿ 3 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಹಮಾಲನಿಗೆ ಇನ್ನೂ ಗುರುತಿನ ಚೀಟಿ ವಿತರಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಉಪ ಲೋಕಾಯುಕ್ತರು, ಅರ್ಹ ಹಮಾಲರೆಲ್ಲರಿಗೂ ಶೀಘ್ರ ಗುರುತಿನ ಚೀಟಿ ವಿತರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಾರುಕಟ್ಟೆಯಲ್ಲಿ ಕಮಿಷನ್ ಹೆಸರಿನಲ್ಲಿ ಅನಧಿಕೃತ ಹಣ ವಸೂಲಿ ಮಾಡಲಾಗುತ್ತಿದೆಯೇ ಎಂಬ ಕುರಿತು ಅಧಿಕಾರಿಗಳು, ವ್ಯಾಪಾರಿಗಳು ಹಾಗೂ ಹಮಾಲರಿಂದ ಮಾಹಿತಿ ಪಡೆದು ವಿಚಾರಣೆ ನಡೆಸಿದರು. ಸರ್ಕಾರ ನಿಗದಿಪಡಿಸಿರುವ ನಿಯಮಗಳಂತೆ ಮಾತ್ರ ವ್ಯವಹಾರ ನಡೆಯಬೇಕು. ರೈತರ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವ ಯಾವುದೇ ಅಕ್ರಮ ಅಥವಾ ಅನಧಿಕೃತ ವಸೂಲಿ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಸು-ಮೋಟೋ ಪ್ರಕರಣ ದಾಖಲು ಮಾಡಿದರು.ಸೀಮಿಕೇರಿ ಕ್ರಾಸ್ ಬಳಿಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ಅವರು, ಕುಡಿಯುವ ನೀರಿನ ಶುದ್ಧೀಕರಣ ಪ್ರಕ್ರಿಯೆ, ನೀರಿನ ಗುಣಮಟ್ಟ ಪರೀಕ್ಷೆ, ವಿತರಣಾ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.ಪ್ರತಿ ತಿಂಗಳು ನೀರಿನ ಪರೀಕ್ಷೆಗೆ ಒಳಪಡಿಸುವಂತೆ ತಿಳಿಸಿದರು. ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಕುಡಿಯುವ ನೀರನ್ನು ನಿರಂತರವಾಗಿ ಪೂರೈಸುವಂತೆ ಸೂಚಿಸಿದರು.
ನಗರಸಭೆ ಕಚೇರಿಗೆ ಭೇಟಿ ನೀಡಿ, ನಾಗರಿಕರಿಗೆ ನೀಡುವ ಸೇವೆಗಳು, ಸ್ವಚ್ಛತೆ, ಕುಡಿಯುವ ನೀರು, ತೆರಿಗೆ ಸಂಗ್ರಹ ಹಾಗೂ ಸಾರ್ವಜನಿಕ ದೂರುಗಳ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ಜನಸಾಮಾನ್ಯರ ಸಮಸ್ಯೆಗಳಿಗೆ ತ್ವರಿತ ಸ್ಪಂದಿಸಿ, ದೂರುಗಳನ್ನು ವಿಳಂಬವಿಲ್ಲದೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಧಿಕಾರಿಗಳ ಕಚೇರಿ ಬಾಗಿಲಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲವೆಂಬ ಬೋರ್ಡ್‌ನ್ನು ನೋಡಿ ತಕ್ಷಣ ತೆಗೆದು ಹಾಕಲು ತಿಳಿಸಿ, ಸಾರ್ವಜನಿಕರಿಗಾಗಿ ಕೆಲಸ ನಿರ್ವಹಿಸುವ ಅಧಿಕಾರಿ ಆಗಿರುವದರಿಂದ ಈ ರೀತಿ ಲೋಪ ಎಸಗಿದ ಅಧಿಕಾರಿಗಳ ಮೇಲೆ ಸು-ಮೋಟೋ ಪ್ರಕರಣ ದಾಖಸಿದರು.
ಭೇಟಿ ಸಮಯದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ, ಲೋಕಾಯುಕ್ತ ಎಸ್ಪಿ ನಂದಗಾವಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಲೋಕಾಯುಕ್ತ ಡಿವೈಎಸ್ಪಿ ಸುರೇಶ ರೆಡ್ಡಿ, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ತಹಸೀಲ್ದಾರ್ ವಾಸುದೇವ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಾಕ್ಸ್.....
ಬಾಗಲಕೋಟೆ ಉಪವಿಭಾಗಾಧಿಕಾರಿಗಳ ಕಚೇರಿಗೆ ಉಪ ಲೋಕಾಯುಕ್ತರು ಭೇಟಿ ವೇಳೆ ಕಚೇರಿಯ ಸಿಬ್ಬಂದಿ ರಂಜಿತಾ ಮಂಗಳೂರು ಎಂಬುವರ ಮೊಬೈಲ್ ಆಪ್ ಪರಿಶೀಲಿಸಿದಾಗ ಅವರ ಆದಾಯಕ್ಕಿಂತ ಹೆಚ್ಚಿನ ಆರ್ಥಿಕ ವಹಿವಾಟು ನಡೆದಿರುವುದು ಕಂಡುಬಂದಿತು. ಈ ಹಿನ್ನಲೆಯಲ್ಲಿ ಅವರ 2 ವರ್ಷಗಳ ಬ್ಯಾಂಕ್ ಖಾತೆಯ ಬಗ್ಗೆ ಮಾಹಿತಿ ನೀಡುವಂತೆ ಎಸಿಗೆ ಸೂಚಿಸಿದರು.