ರಾಮಕೃಷ್ಣ ದಾಸರಿ
ಕರ್ನಾಟಕ ಉಪ ಲೋಕಾಯುಕ್ತರಾದ ನ್ಯಾ.ಬಿ.ವೀರಪ್ಪ ಅವರು ಇದೇ ಆ.28 ರಿಂದ 30 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಇಲಾಖೆಗಳು ಹಾಗೂ ಸರ್ಕಾರಿ ಸೌಮ್ಯದ ಕಚೇರಿಗಳಲ್ಲಿ ಅಘೋಷಿತ ಹೈ ಅಲರ್ಟ್ ಜಾರಿಗೊಂಡಿದೆ. ಇದರ ಪರಿಣಾಮವಾಗಿ ಆಯಾ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗವು ವಾರದ ರಜೆಯನ್ನು ಲೆಕ್ಕಿಸದೇ ತ್ವರಿತಗತಿಯಲ್ಲಿ ಶುದ್ಧೀಕರಣ ಕಾರ್ಯವನ್ನು ಕೈಗೊಂಡಿದ್ದಾರೆ. ಸ್ವಚ್ಛತೆ, ದಾಖಲೆ, ಬಾಕಿ ಕೆಲಸ : ಮೂರು ದಿನಗಳ ಕಾಲ ಜಿಲ್ಲೆಯಲ್ಲಿಯೇ ಬೀಡುಬಿಡುತ್ತಿರುವ ಉಪ ಲೋಕಾಯುಕ್ತರ ಪ್ರವಾಸದಲ್ಲಿ ವಿವಿಧ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ, ಸಾರ್ವಜನಿಕರಿಂದ ದೂರು, ಅಹವಾಲು ಸ್ವೀಕಾರ ಸೇರಿ ಮೊದಲಾದ ಕಾರ್ಯಕ್ರಮಗಳು ನಿಗದಿಯಾಗಿರುವುದರಿಂದ ಜಿಲ್ಲಾಡಳಿತ, ಕಂದಾಯ, ಜಿಪಂ, ನ್ಯಾಯಾಲಯ ಸೇರಿದಂತೆ ಬಹುತೇಕ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಸ್ವಚ್ಛತೆಯ ಜೊತೆಗೆ ದಾಖಲೆಗಳ ಜೋಡಣೆ, ಬಾಕಿ ಉಳಿದಿರುವ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಅಷ್ಟೇ ಅಲ್ಲದೇ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ಶನಿವಾರ ಹಾಗೂ ಭಾನುವಾರದ ರಜೆಯನ್ನು ಸಹ ನೀಡದೇ ಬಾಕಿ ಉಳಿದ ಕೆಲಸ-ಕಾರ್ಯಗಳನ್ನು ನಡೆಸುತ್ತಿದ್ದು, ಬರಲಿರುವ ಗೌರಿ ಗಣೇಶ ಹಬ್ಬದ ದಿನವೂ ಪೂರ್ವ ಸಿದ್ಧತೆ ನಡೆಸಲು ಹಲವು ಇಲಾಖೆಗಳು ಮುಂದಾಗಿವೆ.
16 ಸಮಿತಿಗಳ ರಚನೆ: ಉಪಲೋಕಾಯುಕ್ತರ ಪ್ರವಾಸವು ಅಚ್ಚುಕಟ್ಟಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಸುವುದಕ್ಕಾಗಿ ಜಿಲ್ಲಾಡಳಿತದಿಂದ ವಿವಿಧ ರೀತಿಯ 16 ಸಮಿತಿಗಳನ್ನು ರಚನೆ ಮಾಡಲಾಗಿದೆ.ಉಪಲೋಕಾಯುಕ್ತರು ಸ್ಥಳೀಯ ಕೃಷಿ ವಿಶ್ವ ವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ವಿಚಾರಣೆ ನಡೆಸುವುದರ ಜೊತೆಗೆ ಜಿಲ್ಲೆಗೆ ಸಂಬಂಧಪಟ್ಟ ಈ ಮೊದಲು ಸ್ವೀಕೃತವಾದ ಅರ್ಜಿಗಳನ್ನು ವಿಚಾರಣೆ ಕೈಗೊಂಡು, ಆಯಾ ಅಧಿಕಾರಿಗಳನ್ನು ಕರೆಯಿಸಿ ವಿಲೇವಾರಿ ಕುರಿತು ಕ್ರಮ ಕೈಗೊಳ್ಳುತ್ತಿರುವುದರಿಂದ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಈ ಸಮಿತಿಗಳಿಗೆ ವಹಿಸಲಾಗಿದೆ.
ಉಪಲೋಕಾಯುಕ್ತರ ಪ್ರವಾಸದ ವಿವರ
ನಿತ್ಯ ವಿವಿಧ ಪ್ರದೇಶಗಳಿಗೆ ಅನಿರೀಕ್ಷಿತ ಭೇಟಿ ಪರಿಶೀಲನೆ ಹಾಗೂ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ಸಂಬಂಧಿಸಿದ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ, ಆರ್‌ಡಿಪಿಆರ್, ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಉಪನೋಂದಣಿ ಕಚೇರಿ, ಆರ್‌ಟಿಒ, ಬಿಇಒ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.