ಕನ್ನಡಪ್ರಭ ವಾರ್ತೆ ಮಂಡ್ಯ
ಕಾಂಗ್ರೆಸ್ ಸರ್ಕಾರವು ನಾಲೆಗಳಿಗೆ ಕೆಆರ್‌ಎಸ್ ಜಲಾಶಯದಿಂದ ತಕ್ಷಣ ನೀರು ಹರಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಬಿಜೆಪಿ ಜಿಲ್ಲಾ ಮುಖಂಡ ಚಂದಗಾಲು ಶಿವಣ್ಣ ಎಚ್ಚರಿಕೆ ನೀಡಿದ್ದಾರೆ.ವಾರದೊಳಗೆ ನೀರು ಬಿಡಬೇಕು. ಮಂಡ್ಯ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ ಇಲ್ಲಿನ ಶೇ.80 ರಷ್ಟು ಮಂದಿ ಕೃಷಿಯನ್ನೇ ಅವಲಂಭಿಸಿದ್ದು ಜೀವನ ನಡೆಸಲು ಬೇರೆ ಯಾವುದೇ ಮಾರ್ಗಗಲಿಲ್ಲ ಪ್ರಸ್ತುತ ರಾಜ್ಯದಲ್ಲಿ ಭೀಕರ ಬರಗಾಲ ತಾಂಡವಾಡುತ್ತಿದೆ. ಜನರ ಬದುಕು ಹೀನಾಯ ಸ್ಥಿತಿಗೆ ತಲುಪಿದೆ, ನೀರಿಲ್ಲದ ಕಾರಣದಿಂದ ಬಹುತೇಕ ಬೆಳೆಗಳು ಒಣಗಿ ಹೋಗಿದ್ದು ಜಮೀನಿನತ್ತ ತೆರಳಿದಾಗ ಕಣ್ಣಿನಲ್ಲಿ ರಕ್ತ ಬರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರಿಲ್ಲದ ಕಾರಣ ಇರುವ ಬೆಳೆಗಲನ್ನು ಉಳಿಸಿಕೊಳ್ಳುವ ಸಲುವಾಗಿ ಜಿಲ್ಲೆಯಾದ್ಯಂತ ರೈತರು ಚಿನ್ನಾಭರಣ ಸೇರಿದಂತೆ ಜಮೀನು ಅಡವಿಟ್ಟು ಬೊರ್‌ವೆಲ್ ಕೊರೆಸುತ್ತಿದ್ದಾರೆ, ಮಂಡ್ಯ ತಾಲೂಕು ಒಂದರಲ್ಲೇ 1,500 ಸಾವಿರ ಕೋಟಿ ರು.ಹಣವನ್ನು ಜನರು ಕೊಳವೆಬಾವಿ ನಿರ್ಮಾಣಕ್ಕೆ ಖರ್ಚು ಮಾಡಿದ್ದಾರೆ, ಬೇಸಿಗೆಯ ತಾಪಮಾನ ಇದೇ ರೀತಿ ಹೆಚ್ಚಿದಲ್ಲಿ ಬೋರ್‌ವೆಲ್‌ಗಳು ವಿಫಲವಾಗುತ್ತದೆ. ಆಗ ಸಾಲದ ಸುಳಿಗೆ ಸಿಲುಕುವ ರೈತರು ಆತ್ಮಹತ್ಯೆ ದಾರಿ ಹಿಡಿಯುವುದು ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಬೇಸಿಗೆ ಇನ್ನೂ ಎರಡು ತಿಂಗಳೂ ಇರುವುದರಿಂದ ತಕ್ಷಣ ನಾಲೆಗಳಿಗೆ ಕನಿಷ್ಠ ಒಂದು ವಾರ ನೀರು ಹರಿಸದಿದ್ದರೆ ಮಂಡ್ಯ ಜಿಲ್ಲೆಯ ಜನರ ಬದುಕು ಬರ್ಬರವಾಗಲಿದೆ. ಈ ಹಿಂದೆ ಕಟ್ಟೆಯಲ್ಲಿ 72 ಅಡಿ ನೀರಿದ್ದಾಗ ನಾಲೆಗಳಲ್ಲಿ ನೀರು ಹರಿಸಿರುವ ನಿದರ್ಶನಗಳಿವೆ, ಆದ್ದರಿಂದ ಶೀಘ್ರವಾಗಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಚರ್ಚಿಸಿ ವಾರದೊಳಗೆ ನಾಲೆಗಳಿಗೆ ಕನಿಷ್ಠ ಒಂದು ಕಟ್ಟು ನೀರು ಕೊಡಬೇಕು ಇಲ್ಲವಾದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
ನಾಳೆಯಿಂದ ತಾಪಂ ಕಚೇರಿ ಎದುರು ಅಹೋರಾತ್ರಿ ಚಳವಳಿ: ರೈತ ಸಂಘಕೆ.ಆರ್.ಪೇಟೆ:ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ 3 ವರ್ಷಗಳಿಂದ ತೋಟಗಾರಿಕಾ ಇಲಾಖೆ ಮೂಲಕ ನಿರ್ವಹಿಸಿರುವ ಕಾಮಗಾರಿಗಳಿಗೆ ಇದುವರೆಗೂ ನಯಾಪೈಸೆ ಬಿಲ್ ನೀಡದ ಅಧಿಕಾರಿಗಳ ಕಾರ್ಯವೈಖರಿ ವಿರೋಧಿಸಿ ಮಾ.28 ರಿಂದ ತಾಪಂ ಕಚೇರಿ ಎದುರು ಅನಿರ್ದಿಷ್ಟ ಕಾಲದ ಅಹೋರಾತ್ರಿ ಚಳವಳಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ತಿಳಿಸಿದ್ದಾರೆ.ಈ ಕುರಿತು ತಾಪಂ ಇಒಗೆ ನೀಡಿರುವ ಪೂರ್ವ ಸೂಚನಾ ಪತ್ರವನ್ನು ಬಿಡುಗಡೆ ಮಾಡಿರುವ ಅವರು, ತೋಟಗಾರಿಕಾ ಇಲಾಖೆ ಮೂಲಕ ತಾಲೂಕಿನ ಸುಮಾರು 1500ಕ್ಕೂ ಅಧಿಕ ರೈತರು ನರೇಗಾ ಯೋಜನೆಯಡಿ ಬಾಳೆ ಮುಂತಾದ ತೋಟಗಾರಿಕಾ ಬೆಳೆಗಳ ಪ್ರಗತಿ ಕಾಮಗಾರಿ ನಿರ್ವಹಿಸಿದ್ದಾರೆ.ತೋಟಗಾರಿಕಾ ಇಲಾಖೆ ಪೂರ್ವ ಸೂಚನೆಯಂತೆ ರೈತರು ಸಾಲಸೋಲ ಮಾಡಿ ಸಾವಿರಾರು ರು. ಕಾಮಗಾರಿ ನಿರ್ವಹಿಸಿದ್ದಾರೆ. ಕೇವಲ ಕಾರ್ಮಿಕರ ಕೂಲಿ ವೆಚ್ಚವನ್ನು ಮಾತ್ರ ನೀಡಿರುವ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದುವರೆಗೂ ಸಾಮಗ್ರಿ ವೆಚ್ಚವನ್ನು ರೈತರಿಗೆ ನೀಡದೆ ಸತಾಯಿಸುತ್ತಿದ್ದಾರೆ.ನಿರ್ವಹಣೆ ಮಾಡಿದ ಕಾಮಗಾರಿಗಳ ಸಾಮಗ್ರಿ ಬಿಲ್ (ಸಪ್ಲೆ ಬಿಲ್) ಪಾವತಿಸುವಂತೆ ತಾಲೂಕು ರೈತ ಸಂಘ ಈಗಾಗಲೇ ಹಲವು ಬಾರಿ ತಾಪಂ ಇಒ ಕಚೇರಿ ಎದುರು ಪ್ರತಿಭಟನೆ ಮಾಡಿ ಒತ್ತಾಯಿಸಿದಾಗ ಇಒ ಬಿ.ಎಸ್.ಸತೀಶ್ ಪೊಳ್ಳು ಆಶ್ವಾಸನೆ ನೀಡಿ ರೈತರನ್ನು ವಂಚಿಸುತ್ತಿದ್ದಾರೆ ಎಂದು ದೂರಿದ್ದಾರೆ.ತಾಲೂಕಿನಲ್ಲಿ ತೀವ್ರ ಬರಗಾಲವಿದೆ. ನೀರಿನ ಕೊರತೆಯಿಂದ ರೈತರ ಬೆಳೆಗಳು ಒಣಗುತ್ತಿವೆ. ತಾಲೂಕು ರೈತಸಂಘ ಸಪ್ಲೆ ಬಿಲ್ ಹಣ ರೈತರ ಖಾತೆಗೆ ಜಮೆಯಾಗುವವರೆಗೂ ಅಹೋರಾತ್ರಿ ಚಳವಳಿ ನಡೆಸಲಿದೆ. ಸಪ್ಲೆ ಬಿಲ್ ಮೊತ್ತ ತಕ್ಷಣವೇ ರೈತರ ಖಾತೆಗೆ ಜಮೆಯಾಗಬೇಕು ಎಂದು ಆಗ್ರಹಿಸಿದ್ದಾರೆ.ಕಳೆದ ಮೂರು ವರ್ಷಗಳಿಮದ ಸಪ್ಲೆ ಬಿಲ್ ಹಣವನ್ನು ರೈತರ ಖಾತೆಗೆ ಜಮೆ ಮಾಡದೆ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ಮೇಲೆ ಇಲಾಖಾ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರಕ್ಕೆ ಕರೆ ನೀಡಲಿದೆ ಎಂದು ಎಚ್ಚರಿಸಿದ್ದಾರೆ.