ಕನ್ನಡಪ್ರಭ ವಾರ್ತೆ ಸವದತ್ತಿ
ಮುಂಬರುವ ೨೦೨೬ಕ್ಕೆ ಸವದತ್ತಿ ಯಲ್ಲಮ್ಮಾ ಪುರಸಭೆಗೆ ೧೫೦ ವರ್ಷಗಳು ಪೂರ್ಣಗೊಳ್ಳಲಿದ್ದು, ಅಷ್ಟರೊಳಗೆ ಈಗಿರುವ ಪುರಸಭೆಯನ್ನು ಮೇಲ್ದರ್ಜೆಗೇರಿಸಿ ನಗರಸಭೆಯನ್ನಾಗಿ ಮಾಡಿ ೧೫೦ನೇ ವರ್ಷಾಚರಣೆಯ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಸ್ಥಳೀಯ ಪುರಸಭೆ ಸಭಾಭವನದಲ್ಲಿ ನಡೆದ ಸವದತ್ತಿ ಯಲ್ಲಮ್ಮಾ ಪುರಸಭೆಯ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ 27 ವಾರ್ಡ್‌ಗಳಲ್ಲಿ ₹124 ಕೋಟಿಗಳಲ್ಲಿ ಒಳ ಚರಂಡಿ ಯೋಜನೆಯನ್ನು ಅಳವಡಿಸಲಾಗುತ್ತಿದೆ. ಸದ್ಯದಲ್ಲಿಯೇ ₹41 ಕೋಟಿಗಳಲ್ಲಿ ೧೪ ವಾರ್ಡ್‌ಗಳಲ್ಲಿ ಒಳಚರಂಡಿ ಯೋಜನೆಯ ಕಾಮಗಾರಿ ಆರಂಭಿಸಲಾಗುತ್ತಿದೆ. ನಗರದ ಲಂಡೇನ ನಾಲಾದ ತಡೆಗೋಡೆಯನ್ನು ಅಭಿವೃದ್ಧಿಗೊಳಿಸಲು ₹೫ ಕೋಟಿಗಳನ್ನು ಮೀಸಲಿಡಲಾಗಿದ್ದು, ₹೧೬ ಕೋಟಿಗಳಲ್ಲಿ ಎಪಿಎಂಸಿಯಿಂದ ಕೊಪ್ಪದ ಹನಮಂತದೇವರ ದೇವಸ್ಥಾನದವರೆಗೆ ಅಗಲೀಕರಣಗೊಳಿಸಿದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.ಈಗಾಗಲೇ ಪಟ್ಟಣದಲ್ಲಿರುವ ಎರಡು ಸ್ಮಶಾನಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು, ಇಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಬೇಕಿರುವುದರಿಂದ ಹೆಚ್ಚುವರಿಯಾಗಿ ಇನ್ನೂ ₹2 ಕೋಟಿಗಳಲ್ಲಿ ಸ್ಮಶಾನಗಳ ಅಭಿವೃದ್ಧಿಯನ್ನು ಮಾಡಲು ಯೋಜನೆ ರೂಪಿಸಲಾಗಿದೆ. ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ಮೂರು ಕಡೆಯಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಮೂರು ಕಡೆಗೆ ಬೃಹದಾಕಾರದ ದ್ವಾರಬಾಗಿಲುಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.ಸಭೆಯಲ್ಲಿ ಕೆಲವು ಸದಸ್ಯರು ನಮ್ಮ ಅಧಿಕಾರದವಧಿ ಮುಗಿಯುತ್ತಾ ಬಂದಿದ್ದು, ಇರುವ ಅವಧಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಮ್ಮ ವಾರ್ಡ್‌ನಲ್ಲಿ ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಬೇಕು. ಅಲ್ಲದೆ ಸಾರ್ವಜನಿಕರ ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಪ್ರತಿ ತಿಂಗಳು ಒಂದು ಸಭೆ ಕರೆಯುವ ಮೂಲಕ ಅಧಿಕಾರಿಗಳು ಎಲ್ಲ ಸದಸ್ಯರಿಗೆ ಸಹಕಾರ ನೀಡಬೇಕು ಎಂದರು.ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ ಮಾತನಾಡಿ, ಪುರಸಭೆಯ 27 ವಾರ್ಡ್‌ಗಳಲ್ಲಿನ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎಲ್ಲ ಸದಸ್ಯರು ಸಹಕಾರ ಅತ್ಯವಶ್ಯ ಎಂದರು.
ಸಭೆಯಲ್ಲಿ ಡಿಸೆಬಿಲಿಟೀಜ್ ಹಾಗೂ ಉಮೆನ್ಸ್ ಎಂಪ್ಲಾಯಮೆಂಟ್ ಸೊಸೈಟಿ ಮತ್ತು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಗಳಿಗೆ ನಾಗರೀಕ ಸೌಲಭ್ಯ ಜಾಗವನ್ನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲು ತೀರ್ಮಾನಿಸಲಾಯಿತು. ಪಟ್ಟಣದಲ್ಲಿ ಬೀದಿ ನಾಯಿಗಳು ಮತ್ತು ಹಂದಿಗಳ ಉಪಟಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ಹಿಡಿದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು. ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ಉಪಾಧ್ಯಕ್ಷೆ ಕೌಶಲ್ಯ ಮೋಟೇಕರ, ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ಮುನವಳ್ಳಿ, ಸದಸ್ಯರಾದ ಶಿವಾನಂದ ಹೂಗಾರ, ರಾಜಶೇಖರ ಕಾರದಗಿ, ಸಂಗಮೇಶ ಹಾದಿಮನಿ, ಬಾಪು ಚೂರಿಖಾನ, ಅರ್ಜುನ ಅಮ್ಮೋಜಿ, ವೀರೇಶ ಪ್ರಭುನವರ, ಗಂಗಾ ಪಟ್ಟಣಶೆಟ್ಟಿ, ಪುಷ್ಪಲತಾ ಮೊಖಾಶಿ ಇತರರು ಉಪಸ್ಥಿತರಿದ್ದರು.