ಕನ್ನಡಪ್ರಭ ವಾರ್ತೆ ಬೆಳಗಾವಿ
ಸವದತ್ತಿಯ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು 90 ದಿನಗಳ ಮಧ್ಯಸ್ಥಿಕೆ ಅಭಿಯಾನ ಆರಂಭಿಸಲಾಗಿದೆ. ಮಧ್ಯಸ್ಥಿಕೆ ಮೂಲಕ ರಾಜೀ ಮಾಡಿಕೊಂಡ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗುವುದು. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿದ್ದರಾಮ ಹೇಳಿದರು.ಸವದತ್ತಿಯ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿಯ ಕಾಯಂ ಜನತಾ ನ್ಯಾಯಾಲಯದ ಕಾರ್ಯ ವಿಧಾನದ ಹಾಗೂ ವೈಶಿಷ್ಟ್ಯ ಬಗ್ಗೆ ಮಾತನಾಡಿದ ಅವರು, ಪ್ರಕರಣವೊಂದರ ಎರಡು ಪಕ್ಷದವರು ರಾಜೀ ಸಂಧಾನ ಮಾಡಿಕೊಳ್ಳುವಲ್ಲಿ ಅಧ್ಯಕ್ಷರು ಹಾಗೂ ಇತರ ಇಬ್ಬರು ಸದಸ್ಯರು ಅವರುಗಳಿಗೆ ಮಾರ್ಗದರ್ಶನ ನೀಡುತ್ತಾರೆ. ಅವರು ಪರಸ್ಪರ ರಾಜೀ ಮಾಡುಕೊಳ್ಳುವಲ್ಲಿ ಯಶಸ್ವಿಯಾದಲ್ಲಿ ರಾಜೀ ಸಂಧಾನದ ಷರತ್ತುಗಳನ್ವಯವಾಗಿ ಪ್ರಕರಣವನ್ನು ಇತ್ಯರ್ಥಗೊಳಿಸಿ ತೀರ್ಪನ್ನು ನೀಡುತ್ತಾರೆ. ರಾಜೀ ಸಂಧಾನ ವಿಫಲವಾದಲ್ಲಿ ಹಾಗೂ ಆ ಪ್ರಕರಣ ಯಾವುದೇ ಅಪರಾಧಕ್ಕೆ ಸಂಬಂಧಿಸಿರದಿದ್ದಲ್ಲಿ ಅದರ ಎರಡೂ ಪಕ್ಷದವರು ಸಾದರಪಡಿಸಿದ ಹೇಳಿಕೆ, ಸಾಕ್ಷ್ಯ, ದಾಖಲಾತಿ ಇವುಗಳ ಆಧಾರದ ಮೇಲೆ ಅಧ್ಯಕ್ಷ ಹಾಗೂ ಇತರ ಇಬ್ಬರು ಸದಸ್ಯರ ಸರ್ವಾನುಮತ ಅಥವಾ ಬಹುಮತದ ತೀರ್ಪನ್ನು ನೀಡಲಾಗುತ್ತದೆ. ಇಲ್ಲಿ ನ್ಯಾಯಾಲಯ ಶುಲ್ಕ ಪಾವತಿಸಬೇಕಿಲ್ಲವಾದ್ದರಿಂದ ಖರ್ಚು ಅತ್ಯಂತ ಕಡಿಮೆ ಮತ್ತು ವಿಚಾರಣಾ ಪ್ರಕ್ರಿಯೆ ಬಹಳ ಸರಳವಾಗಿರುವುದರಿಂದ ಪ್ರಕರಣಗಳ ಇತ್ಯರ್ಥ ತ್ವರಿತವಾಗಿ ಆಗುತ್ತದೆ ಎಂದರು.ಪ್ರಧಾದ ಸಿವಿಲ್ ಹಾಗೂ ಜೆಎಂಎಪ್‌ಸಿ ನ್ಯಾಯಾಧೀಶ ಸಿದ್ರಾಮ ರೆಡ್ಡಿ ಅವರು ರಾಷ್ಟ್ರೀಯ ಲೋಕ್ ಅದಾಲತ್ ಬಗ್ಗೆ ಮಾತನಾಡಿ, ನ್ಯಾಯಾಲಯಗಳಲ್ಲಿ ಉಭಯ ಪಕ್ಷಕಾರರು ರಾಜೀ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ಮಾಡಲಾಗುವುದು. ಇಬ್ಬರಿಗೂ ಒಪ್ಪಿಯಾಗುವಂತೆ ಪ್ರಕರಣವು ತೀರ್ಮಾನವಾಗುವುದರಿಂದ ಬಾಂಧವ್ಯವು ಉಳಿದು ವಿವಾದವು ತೀರ್ಮಾನವಾಗುತ್ತದೆ. ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ಪ್ರಕರಣಗಳನ್ನು ಸಹ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಲಯದ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು. ಕಡಿಮೆ ಖರ್ಚಿನಲ್ಲಿ ಶೀಘ್ರ ತೀರ್ಮಾನಕ್ಕಾಗಿ ಇದೊಂದು ವಿಶೇಷ ಅವಕಾಶವಾಗಿದೆ. ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ಪಡೆದುಕೊಳ್ಳಲು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಂ.ಎಸ್.ಹುಬ್ಬಳ್ಳಿ, ಕಾರ್ಯದರ್ಶಿಯಾದ ಎಸ್.ಎಸ್.ಕಾಳಪ್ಪನವರ, ಸಹ ಕಾರ್ಯದರ್ಶಿ ಆರ್.ಬಿ.ಹುಂಬಿ, ಮಧ್ಯಸ್ಥಿಕೆಗಾರರಾದ ಎಸ್.ಎಚ್.ಜಾಲಿಕೊಪ್ಫ ಎಲ್.ಟಿ.ಹೊಸಮನಿ, ನ್ಯಾಯವಾದಿಗಳಾದ ಬಿ.ಕೆ.ಕಡಕೊಳ ಇತರರು ಉಪಸ್ಥಿತರಿದ್ದರು.