ಕೊಪ್ಪಳ: ಸಂತ ಕವಿ ಎನಿಸಿದ ಸರ್ವಜ್ಞರ ವಚನಗಳು ಜೀವನದ ಆದರ್ಶ, ಮೌಲ್ಯ ಒಳಗೊಂಡಿದ್ದು, ಅವುಗಳನ್ನು ಅಧ್ಯಯನ ಮಾಡುವುದರ ಮೂಲಕ ನಾವೆಲ್ಲರೂ ಅವರ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದು ಕೊಪ್ಪಳ ತಹಸೀಲ್ದಾರ್ ವಿಠ್ಠಲ್ ಚೌಗಲಾ ಹೇಳಿದರು.
ಸಂತ ಕವಿ ಸರ್ವಜ್ಞರು ಸಮಾಜಕ್ಕೆ ತಮ್ಮ ತ್ರಿಪದಿಗಳ ಮೂಲಕ ಅಮೋಘ ಕೊಡುಗೆ ನೀಡಿದ್ದಾರೆ. ಜಾತಿ ರಹಿತ, ಕಾಯಕ ಶ್ರದ್ಧೆ, ಮೌಲಿಕ ಶಿಕ್ಷಣ, ಸಂಬಂಧಗಳ ಮೌಲ್ಯ ಮುಂತಾದವುಗಳನ್ನು ತಮ್ಮ ಮೂರು ಸಾಲಿನ ತ್ರಿಪದಿಗಳ ಮೂಲಕ ವಿಡಂಬನಾತ್ಮಕವಾಗಿ ವ್ಯಕ್ತಪಡಿಸಿದರು. ಪ್ರಸ್ತುತ ದಿನಗಳಲ್ಲಿ ನಾವೆಲ್ಲರೂ ಅವರ ತ್ರಿಪದಿಗಳಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಗುರು-ಹಿರಿಯರು, ಹೆತ್ತವರನ್ನು ಗೌರವಿಸಿ, ನಮ್ಮ ಕಾಯಕಗಳಲ್ಲಿ ಶ್ರದ್ಧೆ ತೋರುತ್ತಾ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಮಿಸಿದ್ದ ಕೊಪ್ಪಳ ಶ್ರೀಗವಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಸಿದ್ದಲಿಂಗಪ್ಪ ಕೊಟ್ನೇಕಲ್ ಮಾತನಾಡಿ, ಸರ್ವಜ್ಞರು 16 ನೇ ಶತಮಾನದವರಾಗಿದ್ದರೂ, ಅವರ ವಚನಗಳು ಇಂದಿಗೂ ಪ್ರಸ್ತುತ ಎನಿಸಿವೆ. ಅಂದಿನ ಕಾಲದಲ್ಲೇ ಮುಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ ಬೆಳೆಯುವ ಪರಿ ಊಹಿಸಿದ್ದರು. ತಮ್ಮ ವಚನಗಳಲ್ಲಿ ರೈಲ್ವೇ, ದೂರವಾಣಿಗಳ ಬಗ್ಗೆ ಉಲ್ಲೇಖಿಸಿದ್ದರು. ಮನುಷ್ಯ ಬಡತನ ಹಾಗೂ ಶ್ರೀಮಂತಿಕೆ ಬಂದಾಗ ಹೇಗೆ ವರ್ತಿಸಬೇಕು, ಗುರು-ಹಿರಿಯರು, ತಂದೆ-ತಾಯಿಯನ್ನು ಗೌರವಿಸುವುದು, ಮಾನವೀಯ ಸಂಬಂಧ ಕಾಪಾಡಿಕೊಳ್ಳುವುದು, ಸ್ನೇಹ, ಸಹವಾಸಗಳಿಂದ ಬದುಕಿನಲ್ಲಾಗುವ ಪರಿಣಾಮ ಮುಂತಾದವುಗಳ ಬಗ್ಗೆ ತಮ್ಮ ವಚನಗಳಲ್ಲಿ ವಿಮರ್ಶಾತ್ಮಕವಾಗಿ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.ವಿಶ್ವ ವಿದ್ಯಾಲಯಗಳಲ್ಲಿನ ಅಧ್ಯಯನ ಪೀಠಗಳಲ್ಲಿ ಸರ್ವಜ್ಞರ ಕುರಿತು ಹೆಚ್ಚಿನ ಅಧ್ಯಯನಕ್ಕೆ ಒತ್ತು ನೀಡಬೇಕು. ಇನ್ನಷ್ಟು ಅಧ್ಯಯನದ ಮೂಲಕ ಸರ್ವಜ್ಞರ ವಚನ ಬೆಳಕಿಗೆ, ದಿನ ನಿತ್ಯದ ಬಳಕೆಗೆ ತರಬೇಕು. ವಿದ್ಯಾರ್ಥಿಗಳಲ್ಲಿ ವಚನಗಳ ಅಧ್ಯಯನದ ಬಗ್ಗೆ ಆಸಕ್ತಿ ಹೆಚ್ಚಿಸಬೇಕು. ಬದುಕಿನ ಮೌಲ್ಯ ತಿಳಿಸುವ ಶರಣರ, ಸಂತರ ವಚನಗಳು ನಮ್ಮ ದಿನನಿತ್ಯದ ಜೀವನದ ಭಾಗವಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಸುರೇಶ ಕುಂಬಾರ ನಿರೂಪಿಸಿದರು, ಶ್ರೀಅಭಿನವ ಸುಗಮ ಸಂಗೀತ ಕಲಾತಂಡ ಹಾಗೂ ಭಾಷಾ ಹಿರೇಮನಿ ಹಾಗೂ ತಂಡದವರು ಸುಗಮ ಸಂಗೀತ ಮತ್ತು ನಾಡಗೀತೆ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಸಮಾಜದ ಜಿಲ್ಲಾಧ್ಯಕ್ಷ ಕಳಕಪ್ಪ ಕುಂಬಾರ, ತಾಲೂಕು ಕುಂಬಾರ ಸಂಘದ ಅಧ್ಯಕ್ಷ ಅಂದಪ್ಪ ಕುಂಬಾರ, ಗುರುರಾಜ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.
ಸಂತ ಕವಿ ಸರ್ವಜ್ಞ ಜಯಂತಿ ಅಂಗವಾಗಿ ವೇದಿಕೆ ಕಾರ್ಯಕ್ರಮದ ನಂತರ ನಗರದ ಸಾಹಿತ್ಯ ಭವನದಿಂದ ಅಶೋಕವೃತ್ತ, ಆಜಾದ್ ವೃತ್ತ ಮಾರ್ಗವಾಗಿ ಪ್ಯಾಟಿ ಈಶ್ವರ ದೇವಸ್ಥಾನದವರೆಗೂ ಸರ್ವಜ್ಞರ ಭಾವಚಿತ್ರದ ಮೆರವಣಿಗೆ ನಡೆಯಿತು.