ಸ್ವಾತಂತ್ರ್ಯದ ಮೌಲ್ಯಗಳನ್ನು ಬೆಳೆಸಿ: ಡಾ.ಈ.ಸಿ.ನಿಂಗರಾಜ್‌ಗೌಡ

KannadaprabhaNewsNetwork |  
Published : Aug 17, 2026, 01:30 AM IST
೧೬ಕೆಎಂಎನ್‌ಡಿ-೧ಮಂಡ್ಯದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆಯಿಂದ ನಡೆದ ೮೦ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಕನ್ನಡ ಅಕ್ಷರ ಜಾತ್ರೆ ಉದ್ಘಾಟಿಸಿ ಬಿಜೆಪಿ ಸಹ ಉಸ್ತುವಾರಿ ಡಾ.ಈ.ಸಿ.ನಿಂಗರಾಜ್‌ಗೌಡ ಮಾತನಾಡಿದರು. | Kannada Prabha

ಸಾರಾಂಶ

ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡುವುದೇ ಸ್ವಾತಂತ್ರ್ಯ ದಿನಾಚರಣೆಯಲ್ಲ. ದೇಶಕ್ಕಾಗಿ ನಾವೇನು ಮಾಡಬೇಕು ಎಂಬುದನ್ನು ಆತ್ಮಾಲೋಕನ ಮಾಡಿಕೊಳ್ಳುವ ದಿನವೂ ಆಗಿದೆ. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ನಿಜ ಅರ್ಥದಲ್ಲಿ ದೇಶಭಕ್ತಿ ಸಾಕಾರಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತದ ಸ್ವಾತಂತ್ರ್ಯ ಹೋರಾಟ ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವಲ್ಲ. ಅದು ದೇಶದ ಗೌರವ, ಸ್ವಾಭಿಮಾನ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಭವಿಷ್ಯದ ಪೀಳಿಗೆಗಾಗಿ ನಡೆದ ಮಹಾನ್ ಜನಾಂದೋಲನ ಎಂದು ಬಿಜೆಪಿ ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜ್‌ಗೌಡ ಅಭಿಪ್ರಾಯಪಟ್ಟರು.ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ೮೦ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಕನ್ನಡ ಅಕ್ಷರ ಜಾತ್ರೆ, ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡುವುದೇ ಸ್ವಾತಂತ್ರ್ಯ ದಿನಾಚರಣೆಯಲ್ಲ. ದೇಶಕ್ಕಾಗಿ ನಾವೇನು ಮಾಡಬೇಕು ಎಂಬುದನ್ನು ಆತ್ಮಾಲೋಕನ ಮಾಡಿಕೊಳ್ಳುವ ದಿನವೂ ಆಗಿದೆ. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ನಿಜ ಅರ್ಥದಲ್ಲಿ ದೇಶಭಕ್ತಿ ಸಾಕಾರಗೊಳ್ಳಲಿದೆ ಎಂದರು.

ಇಂದಿನ ಯುವಜನರು ಶಿಕ್ಷಣದ ಜೊತೆಯಲ್ಲೇ ದೇಶದ ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ಸಂವಿಧಾನದ ಮೌಲ್ಯಗಳನ್ನು ತಿಳಿದುಕೊಳ್ಳಬೇಕು. ಜಾತಿ, ಧರ್ಮ, ಪ್ರಾದೇಶಿಕ ಬೇಧಗಳನ್ನು ಮೀರಿ ನಾವೆಲ್ಲರೂ ಭಾರತೀಯರು ಎಂಬ ರಾಷ್ಟ್ರೀಯ ಭಾವನೆಯೊಂದಿಗೆ ಸ್ವಾತಂತ್ರ್ಯದ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದರು.

ನಮ್ಮ ದೇಶದ ಭವಿಷ್ಯ ಇಂದಿನ ಯುವಜನರ ಕೈಯ್ಯಲ್ಲಿದೆ. ಉತ್ತಮ ಶಿಕ್ಷಣ, ಶಿಸ್ತು, ಪ್ರಾಮಾಣಿಕತೆ, ರಾಷ್ಟ್ರಭಕ್ತಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಜೀವನದ ಮೌಲ್ಯಗಳನ್ನಾಗಿ ಮಾಡಿಕೊಂಡು ಯುವಕರು ಮುನ್ನಡೆದರೆ ಭಾರತ ಮತ್ತಷ್ಟು ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳಲಿದೆ ಎಂದರು.

ದೇಶದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ವಿಕಸಿತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ನುಡಿದರು.

ಬೆಂಗಳೂರಿನ ಮನೋರೋಗ ತಜ್ಞೆ ಡಾ.ಅನರ್ವಿ ಕಾಂಚನ ಮಾತನಾಡಿ, ಮನಸ್ಸನ್ನು ಸದಾಕಾಲ ಉಲ್ಲಾಸದಿಂದ ಇರುವಂತೆ ನೋಡಿಕೊಳ್ಳಬೇಕು. ಸದಾ ಚಟುವಟಿಕೆಯಿಂದ ಇದ್ದಾಗ ಕ್ರಿಯಾಶೀಲತೆ ಬೆಳವಣಿಗೆ ಕಾಣುತ್ತದೆ. ಅದಕ್ಕಾಗಿ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಪ್ರೀತಿಯಿಂದ ಜೀವನ ಪ್ರೀತಿ ಹೆಚ್ಚುತ್ತದೆ. ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಕ್ರಿಯಾಶೀಲತೆಯನ್ನು ಕಳೆದುಕೊಂಡರೆ ಬದುಕನ್ನು ಜಿಗುಪ್ಸೆ ಆವರಿಸುತ್ತದೆ. ಅದಕ್ಕೆ ಅವಕಾಶ ನೀಡಬಾರದು ಎಂದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಕರ್ನಾಟಕ ಸೇವಾ ಭೂಷಣ, ರಾಜ್ಯಮಟ್ಟದ ಕನ್ನಡ ರತ್ನ, ರಾಜ್ಯಮಟ್ಟದ ಕಾಯಕಯೋಗಿ ಪ್ರಶಸ್ತಿ ನೀಡಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಡಾ.ಚಂದ್ರಶೇಖರ್, ಶಿಕ್ಷಕ ಆನಂದ್, ಪ್ರಗತಿಪರ ಕೃಷಿಕ ಎಸ್.ಬಸವರಾಜು, ಸಮಾಜಸೇವಕ ಮಲ್ಲೇಶ್, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ಎಸ್.ದೊಡ್ಡಯ್ಯ, ಹೊಸಹಳ್ಳಿ ರೂಪ, ನೇತ್ರಾವತಿ ಇದ್ದರು.

ಭಾರತಕ್ಕೆ ಒಳಗಿನ ಶತ್ರುಗಳೇ ಹೆಚ್ಚು: ಡಾ.ಚಂದ್ರಶೇಖರ್

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತಕ್ಕೆ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಹೆಚ್ಚಾಗಿದ್ದಾರೆ. ವಿವಿಧ ಜಾತಿ-ವರ್ಗಗಳ ಭಿನ್ನ ಆಲೋಚನೆಗಳು, ಚಿಂತನೆಗಳು, ತದ್ವಿರುದ್ಧನೋಭಾವದ ರಾಜಕೀಯ ಪಕ್ಷಗಳೇ ದೇಶದ ಬೆಳವಣಿಗೆಗೆ ಅಡ್ಡಿಯಾಗಿವೆ ಎಂದು ಖ್ಯಾತ ವೈದ್ಯ ಡಾ.ಕೆ.ಚಂದ್ರಶೇಖರ್ ಬೇಸರದಿಂದ ನುಡಿದರು.

ದೇಶದ ಸ್ವಾತಂತ್ರ್ಯವನ್ನು ಹೊರಗಿನವರು ಯಾರೂ ಕಿತ್ತುಕೊಳ್ಳಲಾಗದು. ಕಸಿದುಕೊಳ್ಳುವುದಕ್ಕೆ ನಮ್ಮೊಳಗಿನವರೇ ಕಾದು ಕುಳಿತಿದ್ದಾರೆ. ದೇಶದ ಇತಿಹಾಸವನ್ನು ಗಮನಿಸಿದರೆ ಡಚ್ಚರು, ಮುಸ್ಲಿಮರು, ಪೋರ್ಚುಗೀಸರು, ಬ್ರಿಟಿಷರೆಲ್ಲರೂ ನಮ್ಮನ್ನು ಗುಲಾಮರನ್ನಾಗಿಸಿಕೊಂಡು ಭಾರತವನ್ನು ಆಳುವುದಕ್ಕೆ ನಮ್ಮವರು ನೀಡಿದ ಸಹಕಾರವೇ ಕಾರಣ. ಆದರೂ ಇತಿಹಾಸದಿಂದ ನಾವು ಬುದ್ಧಿ ಕಲಿತಿಲ್ಲ. ಇಂದಿಗೂ ನಾವು ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇವೆಂಬ ಭಯದಲ್ಲೇ ಬದುಕುತ್ತಿದ್ದೇವೆ ಎಂದರು.

ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆಯೇ ವಿನಃ ಸಾಮಾಜಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಎಲ್ಲ ವರ್ಗದ ಜನರಿಗೆ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಸಿಕ್ಕಿದಾಗ ಮಾತ್ರ ಸಾಮಾಜಿಕ ಸ್ವಾತಂತ್ರ್ಯಕ್ಕೊಂದು ಅರ್ಥ ಬರಲಿದೆ ಎಂದು ನುಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಕಸಿತ ಭಾರತ ನಿರ್ಮಾಣಕ್ಕೆ ಯುವಜನತೆ ಪಾತ್ರ ಮುಖ್ಯ
ಗಾಂಧೀಜಿಯರ ಚಿಂತನೆಗಳ ಬೆಳಕಲ್ಲಿಯೇ ಸ್ವತಂತ್ರ ಭಾರತ ನಿರ್ಮಾಣ