ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಜಿಲ್ಲಾ ಹಾಗೂ ಟಿ.ನರಸೀಪುರ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಶ್ರೀಶಿವಕುಮಾರ ಸ್ವಾಮಿಗಳವರ ಸೇವಾ ಟ್ರಸ್ಟ್, ಶ್ರೀಜಗಜ್ಯೋತಿ ಬಸವೇಶ್ವರ ಯುವಕರ ಸಂಘ, ಮುಖಂಡರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಡಣಾಯಕನಪುರದಲ್ಲಿ ಏರ್ಪಡಿಸಿದ್ದ ಶ್ರೀ ಬಸವೇಶ್ವರ ಜಯಂತಿ ಹಾಗೂ ಶರಣ ಸಾಹಿತ್ಯೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಬಸವ ಜಯಂತಿ ಮೆರವಣಿಗೆ, ದಾಸೋಹಕ್ಕೆ ಸೀಮಿತವಾಗಬಾರದು. ಹನ್ನೇರಡನೆ ಶತಮಾನದಲ್ಲಿ ಬಸವಾದಿ ಶರಣರು ಹೇಳಿದ ಮಾತುಗಳು ಇಂದಿಗೂ ಪ್ರಸ್ತುತವಾಗಿದೆ. ಆದ್ದರಿಂದ ಅವುಗಳ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.
ಈಗಾಗಲೇ ವಾಟಾಳುಪುರ ಗ್ರಾಮದಲ್ಲಿ ವಚನ ಗ್ರಾಮ ಕಾರ್ಯಕ್ರಮ ನಡೆಸಲಾಗಿದೆ. ಬೇರೆ ಬೇರೆ ಗ್ರಾಮಗಳಲ್ಲೂ ಈ ಕಾರ್ಯಕ್ರಮ ನಡೆಸುವ ಮೂಲಕ ಮನೆ ಮನೆಗೆ ವಚನ ಸಾಹಿತ್ಯ ಪುಸ್ತಕ ತಲುಪಿಸಲಾಗುತ್ತದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಬಸವಣ್ಣ ಸೇರಿದಂತೆ ಬಸವಾದಿ ಶರಣರು ಜನರ ಮಧ್ಯೆಯಿಂದ ಬಂದವರು. ಜನರ ಕಷ್ಟ-ಸುಖಗಳನ್ನು ಅರಿತು, ಅನುಭವದ ಆಧಾರದ ಮೇರೆಗೆ ವಚನಗಳನ್ನು ರಚಿಸಿದರು. ಇದರಿಂದಾಗಿಯೇ ವಚನ ಸಾಹಿತ್ಯ ಜೀವನ ವಿಧಾನವಾಗಿದೆ. ಇವತ್ತಿಗೂ ಪ್ರಸ್ತುತವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ತಮಿಳುನಾಡಿನಲ್ಲಿ ಪೆರಿಯಾರ್‌ರಿಂದ ಆಗಿರುವ ಪ್ರಭಾವ ಕರ್ನಾಟಕದಲ್ಲಿ ಬಸವಣ್ಣ ಅವರಿಂದ ಯಾಕೆ ಆಗಿಲ್ಲ? ಎಂಬುದನ್ನು ವಿಚಾರ ಮಾಡಬೇಕು. ತಮಿಳುನಾಡಿನಲ್ಲಿ ಇವತ್ತಿಗೂ ದ್ರಾವಿಡ ಸಿದ್ಧಾಂತವಿರುವ ಪಕ್ಷಗಳನ್ನು ಹೊರತುಪಡಿಸಿದರೆ ಬೇರೆಯವರು ಅಧಿಕಾರಕ್ಕೆ ಬರಲು ಆಗಿಲ್ಲ. ನಮ್ಮಲ್ಲಿ ಈ ರೀತಿ ಯಾಕೆ ಆಗಲಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಬಸವಣ್ಣನವರ ಕೊಟ್ಟ ಕಾಯಕವೇ ಕೈಲಾಸ ಎಂಬುದು ಕಾರ್ಲ್ ಮಾರ್ಕ್ಸ್‌ಗಿಂತ ಅತ್ಯುತ್ತಮವಾದ ಸಿದ್ಧಾಂತ. ಆದರೆ ಬಸವಣ್ಣನವರಿಗೆ ಅಷ್ಟೊಂದು ವ್ಯಾಪಕತೆ ಸಿಗಲಿಲ್ಲ. ಇದರಿಂದಾಗಿಯೇ ಎಲ್ಲೆಡೆ ಬಸವ ತತ್ವಗಳನ್ನು ಪ್ರಚುರಪಡಿಸಲು ಮುಂದಾಗಿದ್ದೇವೆ ಎಂದರು.
ಪ್ರತಿಯೊಬ್ಬರ ಮನೆಯಲ್ಲಿ ಶರಣ ಸಾಹಿತ್ಯ ಸಂಪುಟ ಇರಬೇಕು ಎಂದರು.
ಕೊಳ್ಳೇಗಾಲ ತಾ.ಮುಡಿಗುಂಡ ಮಠದ ಶ್ರೀಕಂಠ ಸ್ವಾಮೀಜಿ, ಸಾಂಸ್ಕೃತಿಕ ನಾಯಕ ಬಸವಣ್ಣ ಕುರಿತು ಉಪನ್ಯಾಸ ನೀಡಿದರು. ಬಸವಣ್ಣನವರು ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ವಿಶ್ವಕ್ಕೆ ಸಾಂಸ್ಕೃತಿಕ ನಾಯಕರು ಎಂದು ಬಣ್ಣಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯ.ಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ತಾ. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರಪ್ಪ ಕೆಬ್ಬೇಹುಂಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾ. ಅಧ್ಯಕ್ಷ ಸಿ.ಎಂ. ಪ್ರಕಾಶ್, ಶ್ರೀ ಶಿವಕುಮಾರಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಬಜ್ಜಿ ನಿಂಗಪ್ಪ, ತಾ. ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ರವಿ ಎಂ. ತೊಟ್ಟವಾಡಿ ಉಪಸ್ಥಿತರಿದ್ದರು.
ಟಿ.ನರಸೀಪುರ ತಾಲೂಕಿನಲ್ಲಿ ಸುಮಾರು 45 ಮಠಗಳಿದ್ದು, ಡಣಾಯನಕಪುರದಲ್ಲಿ ನಡೆದ ಬಸವೇಶ್ವರ ಜಯಂತಿಯಲ್ಲಿ 25ಕ್ಕೂ ಹೆಚ್ಚು ಮಂದಿ ಒಂದೇ ವೇದಿಕೆಯ್ಲಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದ ನಂತರ ಗ್ರಾಮದ ಯುವಕರು ವಿವಿಧ ಜಾನಪದ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಿದರು.