ಉಲುಕ್ ಉಪ್ಪಿನಂಗಡಿ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಅದು ೧೯೭೪ನೇ ಇಸವಿ ಜುಲೈ ತಿಂಗಳ ೨೬ನೇ ತಾರೀಕು. ಉಪ್ಪಿನಂಗಡಿಯೂ ಸೇರಿ ದ.ಕ. ಜಿಲ್ಲೆಯ ನೇತ್ರಾವತಿ ನದಿ ಪಾತ್ರದ ಜನತೆ ನೆರೆಗೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡು, ಪ್ರಕೃತಿಯ ಮುನಿಸಿಗೆ ಸಾವಿರಾರು ಜನರು ನಿರ್ಗತಿಕರಾಗಿ ಭೀಕರ ದಿನಗಳನ್ನು ಕಳೆದು ಇಂದಿಗೆ ಐವತ್ತು ವರ್ಷ.
ವ್ಯವಹಾರಿಕವಾಗಿ ಪ್ರಧಾನ ಕೇಂದ್ರವಾಗಿದ್ದ ಉಪ್ಪಿನಂಗಡಿಯು ನೇತ್ರಾವತಿ- ಕುಮಾರಧಾರಾ ನದಿಗಳ ಸಂಗಮ ತಾಣವಾಗಿ ದಕ್ಷಿಣಕಾಶಿ ಎಂದು ಗಮನ ಸೆಳೆದಿತ್ತು. ಇಂತಹ ಪ್ರದೇಶದಲ್ಲಿ ಎರಡೂ ನದಿಗಳು ಉಕ್ಕಿ ಹರಿದು, ಹಲವಾರು ಮನೆಗಳನ್ನು ಅಂಗಡಿ ಮುಂಗಟ್ಟುಗಳನ್ನು ನೋಡ ನೋಡುತ್ತಿದ್ದಂತೆಯೇ ಆಪೋಷನ ಪಡೆಯುತ್ತಿದ್ದ ನೆರೆಯ ಭೀಕರತೆ ಜನತೆಯ ಮನದಲ್ಲಿ ಇಂದೂ ಅಚ್ಚಳಿಯದೆ ಉಳಿದಿದೆ. ಅದೃಷ್ಟವಶಾತ್ ಈ ೫೦ ವರ್ಷಗಳಲ್ಲಿ ಅಂತಹ ಭೀಕರ ನೆರೆ ಕಾಡಿಲ್ಲ.ಲಭ್ಯ ದಾಖಲೆಗಳ ಪ್ರಕಾರ ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಾಡಿದ ಅಂದಿನ ನೆರೆಗೆ ಬಲಿಯಾದವರ ಸಂಖ್ಯೆ ೬. ಬಲಿಯಾದ ಜಾನುವಾರುಗಳ ಸಂಖ್ಯೆ ೧೭೨. ಸಂಪೂರ್ಣ ನಾಶಗೊಂಡ ಮನೆಗಳ ಸಂಖ್ಯೆ ೫೦೦೦. ಭಾಗಶಃ ಹಾನಿಗೀಡಾದ ಮನೆಗಳ ಸಂಖ್ಯೆ ೪೦೦೦. ಮನೆ ಮಠ ಕಳೆದುಕೊಂಡು ನಿರ್ಗತಿಕರಾದವರ ಒಟ್ಟು ಸಂಖ್ಯೆ ೧೧೦೦೦. ೩೫೦೦ ಎಕರೆ ಪ್ರದೇಶದಲ್ಲಿ ಬೆಳೆಯಲಾದ ಭತ್ತದ ಗದ್ದೆಗಳು ನೆರೆಯಲ್ಲಿ ಕೊಚ್ಚಿ ಹೋಗಿದ್ದವು. ಒಟ್ಟು ೨,೭೨,೨೯,೨೧೩ ರುಪಾಯಿ ನಷ್ಟವಾಗಿರುವುದು ದಾಖಲಾಗಿದೆ. ರಾತ್ರೋರಾತ್ರಿ ಉಕ್ಕೇರಿದ ನದಿಗಳು: ಸತತವಾಗಿ ಸುರಿಯುತ್ತಿದ್ದ ಮಳೆಯಿಂದ ನದಿಗಳು ಮೈತುಂಬಿ ಹರಿಯುತ್ತಿದ್ದಲು. ಎಂದಿನಂತೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಮುಂದೆ ನದಿಗಳು ಸಂಗಮಿಸಿ ಗಂಗಾ ಪೂಜೆ ನರವೇರಿಸಲಟ್ಟಿತ್ತು. ಭಕ್ತಾದಿಗಳು ಸಂಗಮ ಸ್ನಾನವನ್ನೂ ಮಾಡಿ ಪುನೀತರಾಗಿದ್ದರು. ಸಾಮಾನ್ಯವಾಗಿ ಗಂಗಾ ಪೂಜೆ ನೆರವೇರಿಸಲ್ಪಟ್ಟ ಬಳಿಕ ನದಿಯ ನೆರೆಯು ಇಳಿಯುವುದು ವಾಡಿಕೆ. ಪೂಜಾ ಸಮಯದಲ್ಲಿ ಸಲ್ಲಿಸುವ ಪ್ರಾರ್ಥನೆಗೆ ಗಂಗಾ ಮಾತೆ ಒಲಿದು ತನ್ನ ಉಕ್ಕೇರಿ ಬರುವ ನಡೆಯನ್ನು ಬದಲಾಯಿಸುತ್ತಾಳೆಂಬ ಭಾವನೆ ಭಕ್ತ ಜನತೆಯದ್ದು. ಈ ಹಿಂದೆಲ್ಲಾ ಅದು ನಿಜವಾಗಿತ್ತು. 1974ರ ಜು.೨೫ ರಂದು ದೇವಾಲಯದ ಮುಂಭಾಗದಲ್ಲಿ ಸಂಗಮಿಸಿ ಯಥಾಸ್ಥಿತಿಯನ್ನು ಕಾಯ್ದುಕೊಂಡ ನದಿಗಳು ರಾತ್ರಿಯಾಗುತ್ತಿದ್ದಂತೆ ಪೇಟೆಯನ್ನಾವರಿಸಿಕೊಂಡು ಹರಿಯಲಾರಂಭಿಸಿತು. ನಸುಕಿನ ವೇಳೆಯಿಂದ ಮುಂಜಾನೆಯವರೆಗೆ ತನ್ನ ಕರಾಳ ಮುಖವನ್ನು ತೋರಿಸಿದ ನದಿಗಳು ಉಪ್ಪಿನಂಗಡಿಯ ಸ್ಮಶಾನದ ಭಾಗದಿಂದ ಪೇಟೆಗೆ ನುಗ್ಗಿ ವೇಗವಾಗಿ ಹರಿಯುತ್ತಾ ಮಣ್ಣಿನ ಗೋಡೆಗಳಿಂದ ನಿರ್ಮಿತವಾಗಿದ್ದ ಕಟ್ಟಡಗಳನ್ನೆಲ್ಲಾ ನೋಡ ನೋಡುತ್ತಿದ್ದಂತೆಯೇ ಧರೆಗುರುಳಿಸಿದ್ದವು. ನೂರಾರು ಮಂದಿಯನ್ನು ನಿರ್ಗತಿಕರನ್ನಾಗಿಸಿದ ಮಹಾನೆರೆಯು ಜು.೨೬ರಂದು ಸಾಯಂಕಾಲದಿಂದ ಇಳಿಮುಖ ಕಂಡಿತು. ಕಣ್ಣೇದುರೇ ಮನೆ ನಿರ್ನಾಮ: ಇಳಂತಿಲದ ಅರ್ಬಿ ಎಂಬಲ್ಲಿನ ತಿಮ್ಮಪ್ಪ ಗೌಡ ಎಂಬವರ ಅವಿಭಕ್ತ ಕುಟುಂಬದ ಮನೆಯಲ್ಲಿ ಇದ್ದವರು ೫೦ ಮಂದಿ. ಇವರೆಲ್ಲರೂ ನೆರೆ ನೀರು ಏರುತ್ತಿದ್ದಂತೆ ಮನೆಯಿಂದ ಹೊರಗೆ ಬಂದು ಪಾರಾಗಿದ್ದರು. ಕುಮಾರಧಾರಾ ನದಿ ಪಾರ್ಶ್ವದ ಬಳಿ ಮನೆಯನ್ನು ಹೊಂದಿದ್ದ ಪ್ರಸಕ್ತ ಜವುಳಿ ಉದ್ಯಮಿ ಚಂದ್ರಶೇಖರ್ ಅವರ ಮನೆಯೂ ನೆರೆಗೆ ನಿರ್ನಾಮವಾಗಿತ್ತು. ಕಡವಿನ ಬಾಗಿಲು ಎಂಬಲ್ಲಿ ಆನಂದ ನಾಯ್ಕ್ ಎಂಬವರ ಮನೆಯೂ ನೆರೆ ನೀರಿಗೆ ಕುಸಿದು ಬಿದ್ದಿತ್ತು. ನೆರೆ ಪೀಡಿತರೆಲ್ಲರೂ ಉಪ್ಪಿನಂಗಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ತೆರೆಯಲಾಗಿದ್ದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು.
ಎಲ್ಲ ಮನೆ ಮಠಗಳನ್ನು ಕೊಚ್ಚಿಕೊಂಡೊಯ್ದ ನೆರೆಯು ನದಿ ಸಂಗಮ ತಟದಲ್ಲಿದ್ದು, ನೆರೆ ಜಲದಲ್ಲಿ ಮುಳುಗಿದ್ದ ಮಹಾಕಾಳಿ ಅಮ್ಮನವರ ಗುಡಿಯನ್ನು ಮಾತ್ರ ಹಾನಿಗೊಳಿಸದೆ ಉಳಿಸಿದ್ದು, ದೈವೀ ಶಕ್ತಿಯ ಪವಾಡದಂತಿತ್ತು.ಮುಂದೇನಾಗುವುದೋ ಎಂದು ಕಂಗೆಟ್ಟ ಕಣ್ಣುಗಳಿಂದ ನೋಡುತ್ತಿದ್ದೆವು...ಅಂದು ಉಪ್ಪಿನಂಗಡಿಯ ಕೆಳಗಿನ ಪೇಟೆ ನರೆಯಲ್ಲಿ ಮುಳುಗಿ ಸಂಪೂರ್ಣ ನಲುಗಿತ್ತು. ಕೆಳಗಿನ ಪೇಟೆಯಲ್ಲಿ ಮನೆಗಳು ನೆರೆ ನೀರಿಗೆ ಕುಸಿದು ಬೀಳುತ್ತಿರುವ ವಿವರಗಳು ಮನೆಯಲ್ಲಿ ಪ್ರಸ್ತಾಪಿಸಲ್ಪಡುತ್ತಿದ್ದಾಗ ನೆರೆ ಇನ್ನು ನಮ್ಮ ಮನೆ ತನಕವೂ ಬಂದು ನಮ್ಮನ್ನೂ ಮುಳುಗಿಸುತ್ತದೆ ಎಂದು ನಾವೆಲ್ಲಾ ಭಾವಿಸಿ ಭೀತಿಗೆ ಒಳಗಾಗಿದ್ದೆವು. ದಿನ ಬೆಳಗಾದರೆ ಜನ ಮನೆ ಮಠ ಕಳೆದುಕೊಳ್ಳುವ, ಮುಂದೇನು ಎಂದು ಕಂಗೆಟ್ಟ ಕಣ್ಣುಗಳಿಂದ ಎಲ್ಲರನ್ನೂ ನೋಡುವ ಆ ದಯನೀಯ ಸ್ಥಿತಿ ಇಂದಿಗೂ ಮನಸ್ಸನ್ನು ಕಲಕುತ್ತಿದೆ ಎಂದು ಹಿರಿಯ ರಾಜಕೀಯ ಧುರೀಣ ಅಶ್ರಫ್ ಬಸ್ತಿಕಾರ್ ೭೪ ರ ನೆರೆಯ ಅನುಭವವನ್ನು ಹಂಚಿಕೊಂಡರು.
ನೆರವಿಗೆ ಧಾವಿಸಿದ ಆರ್‌ಎಸ್‌ಎಸ್ ಸ್ವಯಂಸೇವರುಮನೆಗಳು, ಅಂಗಡಿ ಮುಂಗಟ್ಟುಗಳನ್ನು ಕಳೆದುಕೊಂಡವರು, ದಿಕ್ಕು ತೋಚದೆ ಒದ್ದಾಡುತ್ತಿದ್ದಾಗ ಅಂದಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ನೆರವಿಗೆ ಧಾವಿಸಿದ್ದರು. ಅದೆಷ್ಟೇ ಸಹಾಯ ಮಾಡುತ್ತಿದ್ದರೂ ನೆರೆ ನೀರಿನ ರೌದ್ರತೆಗೆ ಸಂಕಷ್ಟಕ್ಕೀಡಾದ ಅಪಾರ ಸಂಖ್ಯೆಯ ರೋಧನವನ್ನು ಶಮನ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಸಕ್ತ ಹೂವಿನ ವ್ಯಾಪಾರ ಮಾಡುತ್ತಿರುವ ಯು. ಕೃಷ್ಣ ತಿಳಿಸುತ್ತಾರೆ.