ಸಾರಾಂಶ
ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ 2000ರು. ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 2-3 ದಿನದಲ್ಲಿ ಪಾವತಿಯಾಗಲಿದೆ
ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ 2000ರು. ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 2-3 ದಿನದಲ್ಲಿ ಪಾವತಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ರಾಜ್ಯದ 1.24 ಕೋಟಿ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಯಾಗಲಿದೆ. ಇದರಿಂದಾಗಿ 4 ಮತ್ತು 5ನೇ ಕಂತಿನ ಹಣ ಇನ್ನೂ ಬಾಕಿ ಉಳಿದಂತಾಗಲಿದೆ. ಆಯಾ ತಾಪಂಗಳ ಕಾರ್ಯನಿರ್ವಾಹಕ ಅಧಿಕಾರಿಗಳ ಖಾತೆಗೆ ಹಣ ಸಂದಾಯವಾಗುತ್ತಿದೆ.
ನಂತರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ)ಗಳಿಂದ ಡಿಬಿಟಿ ಮೂಲಕ ಫಲಾನುಭವಿಗಳಿಗೆ ನೇರವಾಗಿ ಹಣ ಸಂದಾಯವಾಗಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ, ಬೆಳಗಾವಿಯಲ್ಲಿ 11,70,941 ಫಲಾನುಭವಿಗಳಿದ್ದರೆ, ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ 1,21,950 ಅರ್ಹರಿದ್ದಾರೆ ಎಂದು ಮೂಲಗಳು ತಿಳಿಸಿವೆ.