ಸಾರಾಂಶ
ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಸಿ) ಬಿ.ಎನ್.ಜಗದೀಶ್ ಅವರ ‘ಕನ್ನಡಪ್ರಭ’ ಜೊತೆಗೆ ಮುಖಾಮುಖಿ ಸಂದರ್ಶನ
ವೆಂಕಟೇಶ್ ಕಲಿಪಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮೊಮ್ಮಗ ಮತ್ತು ಹಾಲಿ ಶಾಸಕ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ಲೈಂಗಿಕ ವಿಡಿಯೋಗಳು ಹೊರಬಂದಾಗ ಇಡೀ ದೇಶ ದಿಗ್ಭ್ರಮೆಗೊಂಡಿತ್ತು. ಅತ್ಯಂತ ಪ್ರಭಾವಿ ಕುಟುಂಬದ ವ್ಯಕ್ತಿ ವಿರುದ್ಧದ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲುತ್ತಾ?, ಬಲವಾದ ಸಾಕ್ಷ್ಯ ಇದೆಯೇ, ಯಾರಾದರೂ ಸಾಕ್ಷಿ ಹೇಳಲು ಮುಂದೆ ಬರುತ್ತಾರೆಯೇ? ಒತ್ತಡ, ಪ್ರಭಾವಗಳು ಕೆಲಸ ಮಾಡುತ್ತವೆಯೇ ಎಂಬ ನೂರಾರು ಪ್ರಶ್ನೆಗಳು ಆ ಸಂದರ್ಭದಲ್ಲಿ ಶ್ರೀಸಾಮಾನ್ಯರಲ್ಲಿ ಓಡಾಡಿದ್ದು ಸುಳ್ಳಲ್ಲ.
ಇಂತಹ ವಿಶೇಷ ಪ್ರಕರಣದಲ್ಲಿ ಆರೋಪಿ ಶಿಕ್ಷೆ ವಿಧಿಸಲು ಕಾನೂನಾತ್ಮಕ, ತಾಂತ್ರಿಕ, ವೈಜ್ಞಾನಿಕ ಅಂಶಗಳು ಎಷ್ಟರ ಮಟ್ಟಿಗೆ ಕಾರಣವಾದವು? ಎದುರಿಸಿದ ಸವಾಲುಗಳು ಏನು ಎಂಬ ಬಗ್ಗೆ ಪ್ರಾಸಿಕ್ಯೂಷನ್‌ನ ಸಾರಥ್ಯ ವಹಿಸಿದವರ ಪೈಕಿ ಒಬ್ಬರಾದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಸಿ) ಬಿ.ಎನ್.ಜಗದೀಶ್ ಅವರು ‘ಕನ್ನಡಪ್ರಭ’ ಜೊತೆಗೆ ಮುಖಾಮುಖಿಯಾಗಿ ಉತ್ತರಿಸಿದ್ದಾರೆ.
* ಎಸ್‌ಪಿಪಿಯಾಗಿ ನೇಮಕಗೊಂಡ ಕ್ಷಣ ನಿಮ್ಮ ಮನದಲ್ಲಿ ಮೂಡಿದ ಭಾವನೆ ಏನು?
ಭಯ, ಸಂತೋಷ ಎರಡೂ ಮನೆ ಮಾಡಿತು. ಆರೋಪಿ ಪ್ರಜ್ವಲ್ ರಾಜ್ಯದ ಪವರ್ ಫುಲ್ ಕುಟುಂಬದ ಕುಡಿ. ಪ್ರಕರಣ ದಾಖಲಾದಾಗ ಆತ ಸಂಸದನಾಗಿದ್ದ. ಪ್ರಭಾವಿ ವಿರುದ್ಧದ ಅಪರಾಧ ಪ್ರಕರಣದಲ್ಲಿ ವಾದ ಸುಲಭವಲ್ಲ. ಅಭಿಯೋಜಕನಾಗಿ ನಾನು ತೆಗೆದುಕೊಳ್ಳುವ ನಿರ್ಧಾರವನ್ನು ಇಡೀ ದೇಶ ಗಮನಿಸುತ್ತದೆ ಎಂಬ ವಿಷಯ ಅರಿವಿಗೆ ಬಂದು ಭಯ ಆವರಿಸಿತ್ತು. ಮತ್ತೊಂದೆಡೆ ಸವಾಲಿನ ಪ್ರಕರಣವಾಗಿದ್ದರಿಂದ ಸಂತೋಷ ಸಹ ಉಂಟಾಯಿತು.
* ಪ್ರಜ್ವಲ್ ವಿರುದ್ಧ ನೀಡಿರುವ ತೀರ್ಪಿನ ಸಂದೇಶವೇನು?
ವಿಚಾರಣೆ ವೇಳೆ ಪ್ರಜ್ವಲ್ ಅವರು, ನಾನು ಹಾಸನವನ್ನು ರೂಲ್ (ಆಳ್ವಿಕೆ) ಮಾಡುತ್ತಿದ್ದೆ. ನನ್ನ ವಿರುದ್ಧ ದೂರು ನೀಡುವ ಧೈರ್ಯ ಯಾರಿಗೂ ಇಲ್ಲ ಎಂದು ದರ್ಪದಿಂದ ನುಡಿದಿದ್ದರು. ಆತ ಜನರಿಂದ ಆಯ್ಕೆಯಾದ ಮತ್ತು ಜನರಿಗಾಗಿ ಕೆಲಸ ಮಾಡಬೇಕಾಗಿದ್ದ ಪ್ರತಿನಿಧಿ. ಅಂಥವರು ಹಾಸನವನ್ನು ರೂಲ್ ಮಾಡುತ್ತಿದ್ದೆ ಎನ್ನುತ್ತಾರೆ. ಅಂದರೆ ನಾವು ಯಾವ ಶತಮಾನದಲ್ಲಿ ಬದುಕುತ್ತಿದ್ದೇವೆ ಎಂದು ಯೋಚಿಸಬೇಕಾಯಿತು. ಅವರ ದರ್ಪಕ್ಕೆ ಕಾರಣ ಅಧಿಕಾರ ಮತ್ತು ಹಣ. ಆ ಎರಡರಿಂದಲೂ ನ್ಯಾಯಾಂಗ ವ್ಯವಸ್ಥೆಯನ್ನು ಖರೀದಿಸಲು ಸಾಧ್ಯವಿಲ್ಲ. ಅಧಿಕಾರ ಇದೆ ಎಂಬ ಮಾತ್ರಕ್ಕೆ ಏನೂ ಬೇಕಾದರೂ ಮಾಡಬಹುದು; ನಮ್ಮನ್ನು ಪ್ರಶ್ನಿಸುವವರೇ ಇಲ್ಲ ಎಂದು ಬೀಗುವ ಹೈ ಪ್ರೋಫೈಲ್, ವೈಟ್ ಕಾಲರ್ ಕ್ರಿಮಿನಲ್‌ಗಳಿಗೆ ಈ ತೀರ್ಪು ಕಠಿಣ ಸಂದೇಶ ರವಾನಿಸಿದೆ.
* ಪ್ರಜ್ವಲ್ ಚಿತ್ರೀಕರಿಸಿಕೊಂಡಿದ್ದ ವಿಡಿಯೋ ಇಲ್ಲದಿದ್ದರೆ ತೀರ್ಪು ಬೇರೆ ಆಗಿರುತ್ತಿತ್ತೇ?
ಇಂತಹ ತೀರ್ಪು ಹೊರಬರಲು ನಿರ್ಣಾಯಕ ಪಾತ್ರ ವಹಿಸಿರುವುದು ಅದೇ ವಿಡಿಯೋ. ವಿಡಿಯೋ ಇರದಿದ್ದರೆ ತನಿಖೆ ನಡೆಸುವುದೇ ಕ್ಲಿಷ್ಟಕರವಾಗಿರುತ್ತಿತ್ತು. ಪ್ರಜ್ವಲ್ ವಿರುದ್ಧ ರಾಜಕೀಯ ದ್ವೇಷದಿಂದ ಕೇಸ್ ದಾಖಲಿಸಲಾಗಿದೆ ಎನ್ನುತ್ತಿದ್ದರು. ವಿಡಿಯೋ ಇದ್ದ ಕಾರಣ ಸಂತ್ರಸ್ತೆ ಹಾಗೂ ಘಟನೆ ವೇಳೆ ಆಕೆ ಧರಿಸಿದ್ದ ಸೀರೆಯನ್ನು ಗುರುತಿಸಲಾಯಿತು. ವಾಸ್ತವವಾಗಿ ಸೀರೆ ಎಲ್ಲಿದೆ ಎಂದು ತನಿಖಾಧಿಕಾರಿ ಕೇಳಿದಾಗ, ಗನ್ನಿಕಡ ತೋಟದ ಮನೆಯಲ್ಲಿದೆ. ಅದನ್ನು ವಾಪಸ್ ಪಡೆಯಲು ಆರೋಪಿಗಳು ಬಿಡಲಿಲ್ಲ ಎಂದು ಸಂತ್ರಸ್ತೆ ಹೇಳಿದ್ದಳು. ನಂತರ ತೋಟದ ಮನೆಗೆ ತನಿಖಾಧಿಕಾರಿಗಳು ತೆರಳಿ, ಸೀರೆ ಜಪ್ತಿ ಮಾಡಿದರು.
* ಅತ್ಯಾಧುನಿಕ, ತಾಂತ್ರಿಕ, ವೈಜ್ಞಾನಿಕ ಮತ್ತು ವೈದ್ಯಕೀಯ ವಿಧಾನದಲ್ಲಿ ನಡೆದ ತನಿಖೆಯೆಂದು ಕೋರ್ಟ್ ಶ್ಲಾಘಿಸಲು ಕಾರಣವೇನು?
ವಿಡಿಯೋ ಕಾರಣದಿಂದಲೇ ಸೀರೆ ಜಪ್ತಿ ಮಾಡಲಾಯಿತು. ಸೀರೆಯಲ್ಲಿ ಪ್ರಜ್ವಲ್ ವೀರ್ಯ ದೊರೆತು ಎಫ್‌ಎಸ್‌ಎಲ್‌ನಿಂದ ಮ್ಯಾಪಿಂಗ್ ನಡೆಯಿತು. ಆ ಮೂಲಕ ತಾಂತ್ರಿಕ ಮತ್ತು ವೈಜ್ಞಾನಿಕವಾಗಿ ಸಮಗ್ರ-ವಸ್ತುನಿಷ್ಠ ತನಿಖೆ ನಡೆಸಿದ್ದು ಕೋರ್ಟ್ ಮೆಚ್ಚುಗೆಗೂ ಪಾತ್ರವಾಯಿತು.
* ತಾಂತ್ರಿಕ/ವೈಜ್ಞಾನಿಕ ಸಾಕ್ಷ್ಯಗಳನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ಎದುರಿಸಿದ ಸವಾಲು ಏನು?
ಖಂಡಿತವಾಗಿಯೂ ಈ ಪ್ರಕರಣ ಪ್ರಾಸಿಕ್ಯೂಷನ್‌ಗೂ ಕ್ಲಿಷ್ಟಕರವಾಗಿತ್ತು. ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ದೇಹದ ಕೆಲ ಭಾಗವಷ್ಟೇ ಕಾಣಿಸುತ್ತಿತ್ತು. ಮುಖ ಸಹ ಕಾಣುವುದಿಲ್ಲ. ವೈದ್ಯಕೀಯ ಪರೀಕ್ಷೆ ವೇಳೆ ತೆಗೆದುಕೊಂಡು ಪ್ರಜ್ವಲ್ ದೇಹದ ಫೋಟೋಗಳನ್ನು ಎಸ್‌ಎಫ್‌ಎಲ್‌ಗೆ ಕಳುಹಿಸಿ, ಮ್ಯಾಪಿಂಗ್ ಮಾಡಲಾಯಿತು. ನಂತರ ತನಿಖಾಧಿಕಾರಿಗಳು, ಎಸ್‌ಎಫ್‌ಎಲ್ ಅಧಿಕಾರಿಗಳ ಜೊತೆಗೆ ಕುಳಿತು, ಪೋಟೋ, ವಿಡಿಯೋಗಳ ಮ್ಯಾಪಿಂಗ್ ಬಗ್ಗೆ ಚರ್ಚಿಸಿ, ಅದರಲ್ಲಿನ ಅಂಶ ಗ್ರಹಿಸಿ, ಅರ್ಥಮಾಡಿಕೊಂಡು ಕೋರ್ಟ್‌ಗೆ ಮನವರಿಕೆ ಮಾಡಿಕೊಡಲಾಯಿತು.
* ಕೇವಲ 14 ತಿಂಗಳಲ್ಲಿ ತೀರ್ಪು ಬಂದಿರುವುದು ವಿಶೇಷ. ನಿಮಗೆ ಏನು ಅನಿಸುತ್ತದೆ?
14 ತಿಂಗಳಲ್ಲಿ ತೀರ್ಪು ಹೊರಬಂದಿರುವುದು ನಿಜ. ಇದರಿಂದ ತ್ವರಿತಗತಿಯಲ್ಲಿ ವಿಚಾರಣೆ ಪೂರ್ಣಗೊಂಡಿದೆ ಎಂದೇ ಜನ ಭಾವಿಸಿದ್ದಾರೆ. ಆದರೆ, ನನ್ನ ಪ್ರಕಾರ ಈ ಪ್ರಕರಣದ ವಿಲೇವಾರಿ ಎಂಟು ತಿಂಗಳು ವಿಳಂಬವಾಗಿದೆ. 2024ರ ಮೇ ನಲ್ಲಿ ಎಫ್‌ಐಆರ್ ದಾಖಲಾದ ಏಳು ತಿಂಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಯಿತು. ಕಳೆದ ಡಿಸೆಂಬರ್‌ನಲ್ಲಿ ಸೆಷನ್ಸ್ ಕೋರ್ಟ್‌ಗೆ ಪ್ರಕರಣ ವರ್ಗಾವಣೆಯಾಗಿದೆ. ಆ.1ರಂದು ತೀರ್ಪು ಬಂದಿದೆ. ಸಿಆರ್‌ಪಿಸಿ ಸೆಕ್ಷನ್ 309ರ ಪ್ರಕಾರ ಅತ್ಯಾ*ಚಾರ ಪ್ರಕರಣದ ತನಿಖೆ ಎರಡು ತಿಂಗಳಲ್ಲಿ ಪೂರ್ಣಗೊಳ್ಳಬೇಕು. ದಿನವಹಿ ವಿಚಾರಣೆ ನಡೆದು ಎರಡು ತಿಂಗಳಲ್ಲಿ ಪೂರ್ಣಗೊಳ್ಳಬೇಕು.
* ತೀರ್ಪು ತಡವಾಗಲು ಆರೋಪಿ ಕಡೆಯವರು ವಿಚಾರಣೆಯ ವಿಳಂಬದ ತಂತ್ರಗಳನ್ನು ಅನುಸರಿಸಿದ್ದು ಕಾರಣವಾಯಿತೇ?
ಹೌದು, ಪ್ರಜ್ವಲ್ ಅವರನ್ನು ಪಾರು ಮಾಡಲು, ವಿಚಾರಣೆ ವಿಳಂಬ ಮಾಡಲು ತಂದೆ-ತಾಯಿ ಮತ್ತು ವಕೀಲರು ಹಲವು ತಂತ್ರ ಅನುಸರಿಸಿದರು. ಮೊದಲಿಗೆ ಈ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಲಾಯಿತು. ಪೊಲೀಸರು ಆಕೆಯನ್ನು ಪತ್ತೆ ಹಚ್ಚಿದರು. ನಂತರವೇ ಸಂತ್ರಸ್ತೆ ದೂರು ದಾಖಲಿಸಿದರು. ಒಂದೆಡೆ ಪ್ರಜ್ವಲ್ ಅಪರಾಧ ಸಾಬೀತುಪಡಿಸುವುದು ಒಂದು ಸವಾಲಾಗಿದ್ದರೆ, ಮತ್ತೊಂದೆಡೆ ವಿಚಾರಣೆ ವಿಳಂಬದ ತಂತ್ರವನ್ನು ಮೆಟ್ಟಿನಿಲ್ಲುವುದು ಸಹ ಪ್ರಾಸಿಕ್ಯೂಷನ್‌ಗೆ ಸವಾಲಾಗಿತ್ತು.
* ಪ್ರಾಸಿಕ್ಯೂಷನ್‌ಗೆ ಎಸ್‌ಐಟಿ ಅಧಿಕಾರಿಗಳು ಹೇಗೆ ನೆರವಾದರು?
ವಾಸ್ತವವಾಗಿ ಕೋರ್ಟ್ ಮುಂದೆ ಪ್ರಜ್ವಲ್ ಕೃತ್ಯ ಸಾಬೀತುಪಡಿಸಲು ನಮಗೆ (ಪ್ರಾಸಿಕ್ಯೂಷನ್‌ಗೆ) ಎಸ್‌ಐಟಿ ಅಧಿಕಾರಿಗಳೇ ಬಹಳಷ್ಟು ಸಲಹೆ-ಸೂಚನೆ ನೀಡಿದರು. ನೂರಾರು ಪುಟಗಳ ದಾಖಲೆಗಳಲ್ಲಿನ ಅಂಶ, ತಾಂತ್ರಿಕ-ವೈಜ್ಞಾನಿಕ ವಿಧಾನದಲ್ಲಿ ಕಲೆ ಹಾಕಿದ ಸಾಕ್ಷಾಧಾರಗಳನ್ನು ನಮಗೆ ಸುಲಭವಾಗಿ ಅರ್ಥ ಮಾಡಿಸಿದರು. ಅವರ ದಕ್ಷ-ಸಮಗ್ರ ತನಿಖೆಯೇ ಈ ತೀರ್ಪಿಗೆ ತಳಹಳದಿ.
* ಆರೋಪಿ ಪ್ರಭಾವಿ, ಸರ್ಕಾರಕ್ಕೂ ಪ್ರತಿಷ್ಠೆ ಪ್ರಕರಣ. ಹೀಗಾಗಿ, ನಿಮಗೆ ಒತ್ತಡ ಬಂದಿರಬೇಕಲ್ಲವೇ?
ಸರ್ಕಾರ, ಎಸ್‌ಐಟಿ, ಆರೋಪಿ ಅಥವಾ ಮತ್ಯಾರಿಂದಲೂ ನನಗೆ ಯಾವುದೇ ಬಾಹ್ಯ ಒತ್ತಡ ಬಂದಿಲ್ಲ. ಆದರೆ, ಎಸ್‌ಎಸ್‌ಪಿಯಾದ ಕಾರಣ ನನ್ನ ಮೇಲೆ ನಾನೇ ಒತ್ತಡ ಹಾಕಿಕೊಂಡಿದ್ದೆ. ಅದಕ್ಕೆ ಕಾರಣ, ನನಗೆ ನೀಡಿರುವುದು ಹೈಪ್ರೊಫೈಲ್ ಕೇಸ್. ಇಡೀ ದೇಶ ನನ್ನನ್ನು ನೋಡುತ್ತಿದೆ. ಸರ್ಕಾರ ನನ್ನ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕು. ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂಬ ಒತ್ತಡ ನಾನು ಹೇರಿಕೊಂಡಿದ್ದೆ.
* ಈ ಐತಿಹಾಸಿಕ ತೀರ್ಪು ಬರುವ ನಿರೀಕ್ಷೆ ನಿಮ್ಮಲ್ಲಿತ್ತೇ?
ದೋಷಾರೋಪ ಪಟ್ಟಿ ಓದಿದಾಗ, ಕೋರ್ಟ್‌ನಲ್ಲಿ ಸಾಕ್ಷಿಗಳು ಸಾಕ್ಷ್ಯ ನುಡಿದ ನಂತರ ಖಂಡಿತವಾಗಿಯೂ ಪ್ರಜ್ವಲ್‌ಗೆ ಶಿಕ್ಷೆಯಾಗುತ್ತದೆ ಎಂಬ ದೃಢ ವಿಶ್ವಾಸ ನನ್ನಲ್ಲಿ ಮೂಡಿತ್ತು. ಆದರೆ, ನ್ಯಾಯಾಲಯ ಪ್ರಜ್ವಲ್‌ಗೆ ಗರಿಷ್ಠ ಶಿಕ್ಷೆ ವಿಧಿಸುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾತ್ರ ಸ್ವಲ್ಪ ಅನುಮಾನವಿತ್ತು.
* ಏಕೆ ಆ ಅನುಮಾನ ಕಾಡಿತು?
ನೋಡಿ, ಅಗ್ರಿಗೇಟಿವ್ (ಶಿಕ್ಷೆ ಗರಿಷ್ಠಗೊಳಿಸುವ) ಮತ್ತು ಮಿಟಿಗೇಟಿಂಗ್ (ಶಿಕ್ಷೆ ಕಡಿಮೆ ಮಾಡುವ) ಸಂದರ್ಭ/ಸನ್ನಿವೇಶಗಳು ಆಧಾರದಲ್ಲಿ ಆರೋಪಿಗೆ ಕೋರ್ಟ್ ಶಿಕ್ಷೆ ನಿಗದಿಪಡಿಸುತ್ತದೆ. ಶಿಕ್ಷೆ ಗರಿಷ್ಠ ವಿಧಿಸಲು ಕಾರಣ ತೋರಿಸುವುದು ಪ್ರಾಸಿಕ್ಯೂಷನ್ ಕೆಲಸ. ಕಡಿಮೆ ಶಿಕ್ಷೆ ನಿಗದಿಪಡಿಸಲು ಇರುವ ಸನ್ನಿವೇಶ ಮನವರಿಕೆ ಮಾಡಿಕೊಡುವುದು ಆರೋಪಿ ಕಡೆಯವರ ಕೆಲಸ. ಮಿಟಿಗೇಟಿಂಗ್ ಸನ್ನಿವೇಶಗಳ ಬಗ್ಗೆ ಪ್ರಾಸಿಕ್ಯೂಷನ್‌ಗೆ ಮಾಹಿತಿ ಇರುವುದಿಲ್ಲ. ಆದ ಕಾರಣ ಪ್ರಜ್ವಲ್‌ಗೆ ಗರಿಷ್ಠ ಶಿಕ್ಷೆಯಾಗುವ ಬಗ್ಗೆ ನನ್ನಲ್ಲಿ ಸ್ವಲ್ಪ ಅನುಮಾನವಿತ್ತು.
* ಗರಿಷ್ಠ ಶಿಕ್ಷೆಯೇ ವಿಧಿಸಬೇಕೆಂದು ಕೋರಿದ್ದೇಕೆ?
ವಿಡಿಯೋ ನೋಡಿದಾಗ, ಸಂತ್ರಸ್ತೆ ಕೈ ಮುಗಿದು ಕೇಳಿಕೊಳ್ಳುತ್ತಿದ್ದರೂ ಬಿಡದೆ ಪ್ರಜ್ವಲ್ ಅತ್ಯಾ*ಚಾರ ಎಸಗಿದ್ದಾರೆ. ಇದು ಕ್ರೌರ್ಯವಲ್ಲದೆ ಮತ್ತೇನೂ ಅಲ್ಲ. ಆ ಕ್ರೌರ್ಯ ನನ್ನ ಮನ ಕಲುಕಿತು. ಇದರಿಂದ ಗರಿಷ್ಠ ಶಿಕ್ಷೆ ವಿಧಿಸಲು ಕೋರಿದೆ.
* ಪ್ರಜ್ವಲ್‌ಗೆ ಜೀವನ ಪರ್ಯಂತ ಜೈಲು ವಿಧಿಸುವ ಅವಶ್ಯತೆ ಇರಲಿಲ್ಲ ಎನ್ನುತ್ತಾರೆ ಕಾನೂನು ಪಂಡಿತರು?
ಆರೋಪಿ ವ್ಯಕ್ತಿಯ ಅಂತಸ್ತು, ಹುದ್ದೆ, ಸ್ಥಾನಮಾನ, ಅಧಿಕಾರ ನೋಡಿ ಕೋರ್ಟ್ ಶಿಕ್ಷೆ ವಿಧಿಸುವುದಿಲ್ಲ. ಬದಲಾಗಿ ಪ್ರಕರಣದ ವಾಸ್ತವಾಂಶ, ಕೃತ್ಯದ ಗಂಭೀರತೆ, ಸ್ವರೂಪ, ಮಿಟಿಗೇಟಿಂಗ್ ಮತ್ತು ಅಗ್ರಿಗೇಟಿವ್ ಸನ್ನಿವೇಶಗಳ ಆಧಾರದ ಮೇಲೆ. ಅದನ್ನು ವಿಶ್ಲೇಷಿಸದೆ ಸಾಮಾನ್ಯವಾಗಿ ಆಡುವ ಮಾತಿಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲ. ನನ್ನ ಪ್ರಕಾರ ನ್ಯಾಯಾಲಯ ಗರಿಷ್ಠ ಶಿಕ್ಷೆ ವಿಧಿಸಿರುವುದು ನ್ಯಾಯಯುತ ಮತ್ತು ಸಮಂಜಸವಾಗಿದೆ.
* ಪ್ರಜ್ವಲ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ. ಜೀವನ ಪರ್ಯಂತ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿಯುವುದೇ?
ಸೆಷನ್ಸ್ ನ್ಯಾಯಾಲಯದಲ್ಲಿ ಮಿಟಿಗೇಟಿಂಗ್ ಸನ್ನಿವೇಶ ತೋರಿಸದೆ ಇರುವುದರಿಂದ ಪ್ರಜ್ವಲ್‌ಗೆ ಗರಿಷ್ಠ ಜೀವನ ಪರ್ಯಂತ ಶಿಕ್ಷೆಯಾಯಿತು. ಇನ್ನೂ ಕೆಟ್ಟ ಸನ್ನಿವೇಶ ಎಂದರೆ, ಘಟನೆಯಿಂದ ಸಂತ್ರಸ್ತೆಗೆ ಯಾವುದೇ ಯಾತನೆ ಉಂಟಾಗಿಲ್ಲ. ಆಕೆ ಮದುವೆಯಾಗಿದ್ದು, ಪತಿ/ಮಕ್ಕಳೊಂದಿಗೆ ಆರಾಮದ ಜೀವನ ನಡೆಸುತ್ತಿದ್ದಾಳೆ. ಈ ಕಾರಣ ಆಧರಿಸಿ ಕಡಿಮೆ ಶಿಕ್ಷೆ ವಿಧಿಸಬೇಕೆಂದು ಪ್ರಜ್ವಲ್ ವಕೀಲರು ಕೋರಿದರು. ಇಷ್ಟು ಕೆಟ್ಟ ವಾದನ್ನು ನಾನೂ ಎಲ್ಲೂ ಕೇಳಿರಲಿಲ್ಲ. ಏಕೆಂದರೆ ಯಾತನೆ ಏನೆಂಬುದು ಅತ್ಯಾಚಾರಕ್ಕೆ ಒಳಗಾದ ಮಹಿಳೆಗಷ್ಟೇ ತಿಳಿದಿರುತ್ತದೆ. ಸಂತ್ರಸ್ತೆ ಆರಾಮದಾಯಕವಾಗಿದ್ದಾಳೆ ಎಂದು ಹೇಳುವ ನೈತಿಕತೆ ಯಾರಿಗೂ ಇಲ್ಲ. ಈ ವಾದ ಮಂಡನೆ ಮೂಲಕ ಮತ್ತೆ ಸಂತ್ರಸ್ತೆಗೆ ಅವಮಾನಿಸಲಾಗಿದೆ ಎಂದು ನಾನು ಕೋರ್ಟ್‌ಗೆ ತಿಳಿಸಿದೆ. ಮಿಟಿಗೇಟಿಂಗ್ ಸನ್ನಿವೇಶ ತೋರಿಸದಿದ್ದರೆ ಹೈಕೋರ್ಟ್‌ನಲ್ಲೂ ಗರಿಷ್ಠ ಶಿಕ್ಷೆಯಾಗಬಹುದು.
* ಹೈಕೋರ್ಟ್‌ನಲ್ಲಿ ಶಿಕ್ಷೆ ಇಳಿಕೆಯಾಗುವ ಸಾಧ್ಯತೆಯೇ ಇಲ್ಲವೇ?
ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದು ಆರೋಪಿಯ ಹಕ್ಕು. ಸೆಷನ್ಸ್ ನ್ಯಾಯಾಧೀಶರು ಹಲವು ಸುಪ್ರಿಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಯಾವ ಕಾರಣಕ್ಕಾಗಿ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ ಎಂದು ವಿಸ್ತಾರವಾಗಿ ಹೇಳಿದ್ದಾರೆ. ಆ ತೀರ್ಪು ಬದಲಾಗಲಿದೆ ಎಂಬ ನಿರೀಕ್ಷೆ ನನ್ನಲ್ಲಿ ಇಲ್ಲ.
* ಪ್ರಜ್ವಲ್ ಮೇಲಿನ ಉಳಿದ ಮೂರು ಪ್ರಕರಣಗಳ ತೀರ್ಪು ಯಾವಾಗ?
ಒಂದು ಪ್ರಕರಣದಲ್ಲಿ ವಿಚಾರಣೆ ಆರಂಭವಾಗಿದೆ. ಉಳಿದೆರಡ ಕೇಸ್‌ಗಳ ವಿಚಾರಣೆಯೂ ಶೀಘ್ರ ಮುಗಿಯುವ ಸಾಧ್ಯತೆಯಿದೆ. ಈ ಪ್ರಕರಗಳ ತೀರ್ಪು ಏನಾಗಲಿದೆ ಎಂಬುದನ್ನು ಸಾಕ್ಷಿಗಳ ವಿಚಾರಣೆ ಪೂರ್ಣಗೊಳ್ಳುವರೆಗೂ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಪ್ರಾಸಿಕ್ಯೂಷನ್ ಸಕರಾತ್ಮಕವಾಗಿದೆ.
* ಪ್ರಜ್ವಲ್‌ದು ಅತಿ ಅಪರೂಪದ ಪ್ರಕರಣವೇ?
ಖಂಡಿತ ಇದು ಅತಿ ಅಪರೂಪದ ಪ್ರಕರಣವಲ್ಲ. ಅಂತಹ ಪ್ರಕರಣವಾಗಿದ್ದರೆ ಪ್ರಜ್ವಲ್‌ಗೆ ಗಲ್ಲು ಶಿಕ್ಷೆಯಾಗಿರುತ್ತಿತ್ತು.
* ಪ್ರಜ್ವಲ್ ಪ್ರಕರಣದ ತೀರ್ಪಿನಿಂದ ತನಿಖಾಧಿಕಾರಿ/ಪ್ರಾಸಿಕ್ಯೂಟರ್‌ಗಳು ಏನು ಕಲಿಯುವಂತಿದೆ?
ಯಾವುದೇ ಅಪರಾಧ ಪ್ರಕರಣವಾದರೂ ತನಿಖಾ ತಂಡ, ಪ್ರಾಸಿಕ್ಯೂಟರ್‌ಗಳು ಪರಸ್ಪರ ಸಹಕಾರ, ಶ್ರದ್ಧೆಯಿಂದ ಕೆಲಸ ಮಾಡಿದರೆ ಸಂತ್ರಸ್ತರಿಗೆ ನ್ಯಾಯಕೊಡಿಸಲು ಸಾಧ್ಯವಾಗುತ್ತದೆ. ವೈಜ್ಞಾನಿಕ, ತಾಂತ್ರಿಕ, ಅತ್ಯಾಧುನಿಕ ಮತ್ತು ವೈದ್ಯಕೀಯ ವಿಧಾನಗಳನ್ನು ಅನುಸರಿಸಿದರೆ ಉತ್ತಮ ತನಿಖೆ ನಡೆಯಲು ಸಾಧ್ಯವಾಗುತ್ತದೆ ಎಂಬುದನ್ನು ಈ ತೀರ್ಪು ತೋರಿಸಿದೆ