ಸಾರಾಂಶ
ಜೀವನ ಪರ್ಯಂತ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಭಾನುವಾರ ಬೆಳಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾ ಕೈದಿ ಸಂಖ್ಯೆ 15528 ನೀಡಲಾಗಿದೆ.
ಬೆಂಗಳೂರು : ಕೆ.ಆರ್.ನಗರ ಮೂಲದ ಮನೆಗೆಲಸದ ಮಹಿಳೆ ಮೇಲಿನ ಅತ್ಯಾಚಾ# ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಭಾನುವಾರ ಬೆಳಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜಾ ಕೈದಿ ಸಂಖ್ಯೆ 15528 ನೀಡಲಾಗಿದೆ.
ಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವನ ಪರ್ಯಂತ ಸೆರೆವಾಸದ ತೀರ್ಪು ನೀಡಿದ ಬಳಿಕ ಇಷ್ಟು ದಿನ ವಿಚಾರಣಾಧೀನ ಕೈದಿಯಾಗಿದ್ದ ಪ್ರಜ್ವಲ್ ಈಗ ಸಜಾ ಬಂಧಿಯಾಗಿದ್ದಾರೆ.
ಭಾನುವಾರ ಬೆಳಗ್ಗೆ ಜೈಲು ಅಧಿಕಾರಿಗಳು ನಿಯಮಾನುಸಾರ ಪ್ರಜ್ವಲ್‌ಗೆ ಸಜಾಕೈದಿ ಸಂಖ್ಯೆ ಹಾಗೂ ಬಿಳಿ ಸಮವಸ್ತ್ರ ನೀಡಿದ್ದಾರೆ. ಭದ್ರತೆ ದೃಷ್ಟಿಯಿಂದ ಜೈಲಿನ ಹೈ ಸೆಕ್ಯುರಿಟಿ ಸೆಲ್‌ನಲ್ಲೇ ಪ್ರಜ್ವಲ್‌ರನ್ನು ಇರಿಸಲಾಗಿದೆ. ಮಾಜಿ ಪ್ರಧಾನಿ ಮೊಮ್ಮಗನಾದ ಅಪರಾಧಿ ಪ್ರಜ್ವಲ್ ಇನ್ನು ಮುಂದೆ ಜೈಲು ನಿಯಮಾವಳಿ ಪ್ರಕಾರ ಜೈಲು ಅಧಿಕಾರಿಗಳು ನೀಡುವ ಕೆಲಸ ಮಾಡಿಕೊಂಡು ದಿನ ದೂಡಬೇಕು.
ತಡರಾತ್ರಿವರೆಗೂ ನಿದ್ದೆ ಮಾಡದ ಪ್ರಜ್ವಲ್:
ಶನಿವಾರ ಸಂಜೆ ನ್ಯಾಯಾಲಯವು ಶಿಕ್ಷೆ ಪ್ರಮಾಣ ಪ್ರಕಟಿಸಿದ ಬಳಿಕ ಜೈಲು ಅಧಿಕಾರಿಗಳು ಪ್ರಜ್ವಲ್‌ರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು. ನ್ಯಾಯಾಲಯದಿಂದ ಕಾರಾಗೃಹದವರೆಗೆ ಕರೆದೊಯ್ಯುವ ಮಾರ್ಗದುದ್ದಕ್ಕೂ ಪ್ರಜ್ವಲ್ ಕಣ್ಣೀರು ಸುರಿಸಿದ್ದಾರೆ. ರಾತ್ರಿ ಜೈಲಿನಲ್ಲಿ ಸಹ ಸರಿಯಾಗಿ ಊಟ ಮಾಡದೆ ಮೌನಕ್ಕೆ ಶರಣಾಗಿದ್ದ ಪ್ರಜ್ವಲ್ ತಡರಾತ್ರಿಯಾದರೂ ನಿದ್ದೆ ಮಾಡದೆ ಚಡಪಡಿಸಿದ್ದಾರೆ.
ಭಾನುವಾರ ಬೆಳಗ್ಗೆ ಸುಮಾರು 6.30ಕ್ಕೆ ಎಚ್ಚರಗೊಂಡ ಪ್ರಜ್ವಲ್, ನಿತ್ಯ ಕರ್ಮ ಮುಗಿಸಿ ಯಾರೊಂದಿಗೂ ಮಾತನಾಡದೆ ಮೌನಕ್ಕೆ ಜಾರಿದ್ದರು. ಬಳಿಕ ಜೈಲು ಸಿಬ್ಬಂದಿ ನೀಡಿದ ಅವಲಕ್ಕಿ ಉಪ್ಪಿಟ್ಟು ಸೇವಿಸಿದರು ಎಂದು ಮೂಲಗಳು ತಿಳಿಸಿವೆ. ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಜಾಮೀನು ಸಿಗದ ಹಿನ್ನೆಲೆಯಲ್ಲಿ ಕಳೆದ 14 ತಿಂಗಳಿಂದಲೂ ವಿಚಾರಣಾಧೀನ ಕೈದಿಯಾಗಿ ಸೆರೆವಾಸದಲ್ಲಿದ್ದರು. ಇದೀಗ ಜೀವನ ಪರ್ಯಂತ ಜೈಲು ಶಿಕ್ಷೆಗೆ ಗುರಿಯಾದ ಹಿನ್ನೆಲೆಯಲ್ಲಿ ಸಜಾ ಬಂಧಿಯಾಗಿ ಪ್ರಜ್ವಲ್‌ಗೆ ಜೈಲುವಾಸ ಕಾಯಂ ಆಗಿದೆ.
ಎಂಟು ತಾಸು ಕೆಲಸಕ್ಕೆ 525 ರು. ಕೂಲಿ
ಜೈಲು ನಿಯಮದ ಪ್ರಕಾರ ಸಜಾ ಬಂಧಿಗಳು ದಿನಕ್ಕೆ 8 ತಾಸು ಕೆಲಸ ಮಾಡಬೇಕು. ಬೇಕರಿ, ಗಾರ್ಡನ್, ತರಕಾರಿ ಬೆಳೆಯುವುದು, ಕರಕುಶಲ ವಸ್ತುಗಳ ತಯಾರಿಕೆ, ಮರಗೆಲಸ ಸೇರಿ ಇತರೆ ಕೆಲಸಗಳ ಪೈಕಿ ತಮಗೆ ಸೂಕ್ತ ಕೆಲಸ ಆಯ್ಕೆ ಮಾಡಿಕೊಂಡು ನಿರ್ವಹಿಸಬೇಕು ಅಥವಾ ಜೈಲು ಅಧಿಕಾರಿಗಳು ನಿಗದಿಪಡಿಸಿದ ಕೆಲಸ ಮಾಡಬೇಕು. ಆದರೆ, ತಿಂಗಳು ಪೂರ್ತಿ ಕೆಲಸ ಇರುವುದಿಲ್ಲ. ತಿಂಗಳಲ್ಲಿ ಕನಿಷ್ಠ 10-15 ದಿನ ಕೆಲಸ ಇರುತ್ತದೆ. ಕೆಲಸ ಇದ್ದಾಗ ದಿನಕ್ಕೆ 8 ತಾಸು ಕೆಲಸ ಮಾಡಬೇಕು. ಜೈಲು ನಿಯಮದ ಪ್ರಕಾರ ಒಂದು ದಿನದ ಕೆಲಸಕ್ಕೆ 525 ರು. ಕೂಲಿ ನೀಡಲಾಗುತ್ತದೆ. ಶ್ರೀಮಂತರ ಕುಟುಂಬದಲ್ಲಿ ಹುಟ್ಟಿ, ಚಿಕ್ಕ ವಯಸ್ಸಿನಲ್ಲೇ ಸಂಸದನಾಗಿ ಕೆಲಸ ಮಾಡಿದ್ದ ಅಪರಾಧಿ ಪ್ರಜ್ವಲ್ ಇನ್ನು ಮುಂದೆ ಬಿಳಿ ಸಮವಸ್ತ್ರ ಧರಿಸಿಕೊಂಡು ಇಂಥ ಕೆಲಸ ಮಾಡುವುದು ಅನಿವಾರ್ಯ.