ಉಪ್ಪಿನಂಗಡಿ: ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದಕ್ಕಾಗಿ, ವಿಲೇವಾರಿಯಾಗದೆ ಉಳಿದ ಕಡತಗಳ ಶೀಘ್ರ ವಿಲೇವಾರಿಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಜಾಸೇವಾ ಇಲಾಖೆಯನ್ನು ರಚಿಸಿದ್ದು, ಈ ಮೂಲಕ ಸರ್ಕಾರವೇ ಜನರ ಮನೆಬಾಗಿಲಿಗೆ ಬಂದು ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಅಭಿವೃದ್ಧಿಗೆ ಬೇಕಾದಷ್ಟು ಅವಕಾಶಗಳಿದ್ದು, ಆದರೆ ಅದರ ಬಳಕೆ ಸರಿಯಾಗಿ ಆಗುತ್ತಿಲ್ಲ. ಆದ್ದರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದ.ಕ. ಜಿಲ್ಲೆಯಲ್ಲಿ ಕ್ಯಾಬಿನೆಟ್ ಸಭೆ ನಡೆಸಿ 32 ಸಾವಿರ ಕೋಟಿ ರು. ಅನುದಾನವನ್ನು ನೀಡಿದ್ದಾರೆ. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 250 ರಿಂದ 300 ಎಕರೆ ಜಾಗವನ್ನು ನಿವೇಶನಕ್ಕೆ ಕಾಯ್ದಿರಿಸಲಾಗಿದ್ದು, ನಿವೇಶನ ರಹಿತರಿಗೆ 2.45 ಸೆಂಟ್ಸ್ ಜಾಗ ಹಾಗೂ ಸರ್ಕಾರದಿಂದ 2 ಲಕ್ಷ ರು. ವನ್ನು ನೀಡಲಿದೆ. ಈ ಕೆಲಸವನ್ನು 4 -5 ತಿಂಗಳೊಳಗೆ ಮಾಡಿ ಮುಗಿಸಲಾಗುವುದು ಎಂದರು.
ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ತಹಸೀಲ್ದಾರ್ ಎಸ್.ಬಿ.ಕೂಡಲಗಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಕಿರಣ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರುದ್ರೇಗೌಡ ಇದ್ದರು.ಸಭೆಯಲ್ಲಿ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಹಿರೇಬಂಡಾಡಿ ಗ್ರಾ.ಪಂ. ಮಾಜಿ ಸದಸ್ಯರಾದ ಸತೀಶ್ ಶೆಟ್ಟಿ ಹೆನ್ನಾಳ, ಗೀತಾ ದಾಸರಮೂಲೆ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ದೇವಿದಾಸ್ ರೈ, ಹಿರೇಬಂಡಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ರವಿ ಪಟಾರ್ತಿ ಮತ್ತಿತರರು ಉಪಸ್ಥಿತರಿದ್ದರು.