ಉಪ್ಪಿನಂಗಡಿ: ಕಣ್ಣಿನಂತೆ ಕಿವಿಯೂ ನಮ್ಮ ಬಹು ಮುಖ್ಯ ಅಂಗ. ಆದರೆ ನಾವು ಕಣ್ಣಿಗೆ ಕೊಟ್ಟಷ್ಟು ಪ್ರಾಮುಖ್ಯತೆ ಕಿವಿಗೆ ಕೊಡುವುದಿಲ್ಲ. ಕಿವಿಯ ಯಾವುದೇ ಭಾಗದಲ್ಲಿ ಸಮಸ್ಯೆಯುಂಟಾದರೂ ಶ್ರವಣ ದೋಷ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಕಿವಿಯ ಸಮಸ್ಯೆಯನ್ನು ಕಡೆಗಣಿಸಬಾರದು ಎಂದು ಶ್ರವಣ ತಜ್ಞ ಡಾ. ಪವನ್ ಕುಮಾರ್ ಹೇಳಿದರು.ರೋಟರಿ ಕ್ಲಬ್ ಉಪ್ಪಿನಂಗಡಿ, ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆಯ ಸಹಯೋಗದೊಂದಿಗೆ ಇಲ್ಲಿನ ರೋಟರಿ ಭವನದಲ್ಲಿ ನಡೆದ ಕಿವಿಯ ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಕಾರ್ಯಕ್ರಮ ಹಾಗೂ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಿವಿಯ ನರಗಳಿಗೆ ದೋಷವುಂಟಾದರೆ ಅದನ್ನು ಔಷಧಿಯಿಂದ ಗುಣಪಡಿಸಲು ಸಾಧ್ಯವಿಲ್ಲ. ಅಂತವರಿಗೆ ಶ್ರವಣ ಯಂತ್ರ ಅಳವಡಿಸಲೇ ಬೇಕು. ಶ್ರವಣಯಂತ್ರಗಳಲ್ಲಿ ಅನ್‌ಲಾಗ್ ಮತ್ತು ಡಿಜಿಟಲ್ ಎಂಬ ಎರಡು ವಿಧಗಳಿದ್ದು, ಅನ್‌ಲಾಗ್ ಅಳವಡಿಸಿದರೆ ಮುಂದಕ್ಕೆ ಇನ್ನಷ್ಟು ಸಮಸ್ಯೆಗಳು ಉದ್ಭವವಾಗಬಹುದು. ಶ್ರವಣದೋಷವಿರುವವರಿಗೆ ಡಿಜಿಟಲ್ ಯಂತ್ರವೇ ಸೂಕ್ತ ಎಂದರು.ಟೀಂ ಈಶ್ವರ್ ಮಲ್ಪೆಯ ಸಂಚಾಲಕ ಲವಕುಮಾರ್ ಮಾತನಾಡಿ, ನಮ್ಮ ತಂಡದಿಂದ ಸಮಾಜಕ್ಕೆ ಏನಾದರೂ ಕೊಡುಗೆ ಸಲ್ಲಿಸಬೇಕೆಂಬ ಆಶಯದಲ್ಲಿ ಕಿವಿಯ ಉಚಿತ ಶ್ರವಣ ತಪಾಸಣೆ ಹಾಗೂ ಶ್ರವಣ ಯಂತ್ರಗಳ ವಿತರಣೆ ಶಿಬಿರಗಳನ್ನು ಆಯೋಜಿಸಿದ್ದೇವೆ. ಇಂದಿಗೆ ನಮ್ಮದು ೧೫೫ನೇ ಶಿಬಿರವಾಗಿದ್ದು, ನೂರಾರು ಜನರು ಇದರ ಮೂಲಕ ಹೊಸ ಬದುಕನ್ನು ಕಂಡುಕೊಂಡಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್‌ನ ಅಧ್ಯಕ್ಷ ಕೇಶವ ಪಿ.ಎಂ., ಶ್ರವಣ ದೋಷಕ್ಕೆ ಸಂಬAಧಿಸಿದ ಶಿಬಿರವನ್ನು ಕಳೆದ ಎರಡು ವರ್ಷದಿಂದ ಟೀಂ ಈಶ್ವರ ಮಲ್ಪೆ ಸಹಯೋಗದಲ್ಲಿ ಉಪ್ಪಿನಂಗಡಿ ರೋಟರಿ ಕ್ಲಬ್ ಆಯೋಜಿಸಿದ್ದು, ಇದು ಮೂರನೇ ಶಿಬಿರವಾಗಿದೆ ಎಂದರು.ರೋಟರಿ ಕ್ಲಬ್‌ನ ವಲಯ ಸೇನಾನಿ ಅನುರಾಧ ಶೆಟ್ಟಿ , ರೋಟರಿ ಕ್ಲಬ್‌ನ ನಿಕಟಪೂರ್ವಾಧ್ಯಕ್ಷ ಜಾನ್ ಕೆನ್ಯೂಟ್ ಮಸ್ಕರೇನಸ್, ರೋಟರಿ ಕ್ಲಬ್‌ನ ಕಾರ್ಯದರ್ಶಿ ರಾಜೇಶ್ ದಿಂಡಿಗಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಚಂದಪ್ಪ ಮೂಲ್ಯ, ಸದಸ್ಯರಾದ ಶ್ರೀಕಾಂತ್ ಪಟೇಲ್, ಭವಾನಿ ಶಂಕರ್, ಮೋಹನ್, ಹರೀಶ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ಶಿಬಿರದಲ್ಲಿ ೨೦ ಜನರು ಶ್ರವಣ ತಪಾಸಣೆ ನಡೆಸಿದರು. ಅಗತ್ಯವುಳ್ಳ ಆರು ಜನರಿಗೆ ಈ ಸಂದರ್ಭ ಶ್ರವಣ ಸಾಧನಗಳನ್ನು ಅಳವಡಿಸಲಾಯಿತು. ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಯುನಿಕ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.