ರಾಷ್ಟ್ರೀಯ ಹೆದ್ದಾರಿ ಹಳೇಗೇಟು ಸುಬ್ರಹ್ಮಣ್ಯ ಕ್ರಾಸ್ ಎಂಬಲ್ಲಿ ಹೆದ್ದಾರಿ ಸರ್ವೀಸ್ ರಸ್ತೆಯಿಂದ ಸುಬ್ರಹ್ಮಣ್ಯ ರಸ್ತೆಗೆ ಸಂಪರ್ಕ ಕಲ್ಪಿಸುವಲ್ಲಿ ಮೋರಿ ಅರೆಬರೆ ಕಾಮಗಾರಿ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಹಳೇಗೇಟು ಸುಬ್ರಹ್ಮಣ್ಯ ಕ್ರಾಸ್ ಎಂಬಲ್ಲಿ ಹೆದ್ದಾರಿ ಸರ್ವೀಸ್ ರಸ್ತೆಯಿಂದ ಸುಬ್ರಹ್ಮಣ್ಯ ರಸ್ತೆಗೆ ಸಂಪರ್ಕ ಕಲ್ಪಿಸುವಲ್ಲಿ ಮೋರಿ ಅರೆಬರೆ ಕಾಮಗಾರಿ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಅರ್ಧ ಗಂಟೆಯೊಳಗೆ ಗುತ್ತಿಗೆದಾರರು ಮೋರಿಯನ್ನು ಮುಚ್ಚಿಸಿದ್ದಾರೆ. ಸುಬ್ರಹ್ಮಣ್ಯ ಕ್ರಾಸ್‌ನಲ್ಲಿ ಸರ್ವೀಸ್ ರಸ್ತೆ ಕಾಮಗಾರಿ ಅರ್ಧದಲ್ಲಿಯೇ ಬಾಕಿಯಾಗಿತ್ತು. ಅಲ್ಲದೆ ಸುಬ್ರಹ್ಮಣ್ಯ ರಸ್ತೆಗೆ ತಿರುಗುವಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಿಸಿದರೂ ಅದರ ಮೇಲೆ ಸಿಮೆಂಟು ಸ್ಲ್ಯಾಬ್ ಹಾಕದೇ ಹಾಗೇಯೇ ಬಿಡಲಾಗಿತ್ತು. ಎರಡು ವಾಹನ ಮುಖಾಮುಖಿಯಾದಾಗ ಒಂದು ವಾಹನ ಚರಂಡಿಯ ಒಳಗಡೆ ಬೀಳುವ ಹಾಗಿತ್ತು. ಫೆ. ೧೦ರಂದು ಪಾದಚಾರಿಗೆ ಕಾರು ಡಿಕ್ಕಿ ಹೊಡೆದಿತ್ತು. ೪ ದಿನಗಳ ಹಿಂದೆ ಲಾರಿಯೊಂದು ಬಿದ್ದಿತ್ತು. ಅದಕ್ಕೂ ಮುನ್ನ ಹಲವು ಅಪಘಾತವೂ ಸಂಭವಿಸಿತ್ತು.
ಸ್ಥಳೀಯರಿಂದ ಪ್ರತಿಭಟನೆಯ ಎಚ್ಚರಿಕೆ: ಸ್ಥಳೀಯರು ಇಲ್ಲಿ ದಿನಂಪ್ರತಿ ನಡೆಯುತ್ತಿರುವ ಅಫಘಾತಗಳ ಬಗ್ಗೆ, ಅದನ್ನು ತಡೆಗಟ್ಟುವ ಸಲುವಾಗಿ ಚರಂಡಿ ಮೇಲೆ ಸ್ಲ್ಯಾಬ್, ಬ್ಯಾರಿಕೇಡ್ ಅಳವಡಿಸುವಂತೆಯೂ ಕೇಳಿಕೊಂಡಿದ್ದರು. ಇದ್ಯಾವುದಕ್ಕೂ ಯಾರಿಂದಲೂ ಸ್ಪಂದನೆ ದೊರೆತಿರಲಿಲ್ಲ. ಹೀಗಾಗಿ ಫೆ. ೧೧ರಂದು ಬೆಳಿಗ್ಗೆ ಸ್ಥಳೀಯರು ಜಮಾಯಿಸಿ, ಇಲ್ಲಿನ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು, ಇಲ್ಲದಿದ್ದಲ್ಲಿ ರಸ್ತೆ ತಡೆ, ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ನೇತೃತ್ವದಲ್ಲಿ ಸ್ಥಳೀಯರು ಜಮಾಯಿಸಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು. ಪಂಚಾಯಿತಿ ಸದಸ್ಯ ಅಬ್ದುಲ್ ರಶೀದ್ ಮಠ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಝಕರಿಯಾ ಮರುವೇಲ್, ಸ್ಥಳೀಯ ಸಂಘಟನೆ ಪದಾಧಿಕಾರಿಗಳಾದ ಅಶ್ರಫ್ ಶುಕ್ರಿಯಾ, ಇಸಾಕ್, ರಮೇಶ್, ಉಮರಬ್ಬ, ನಾಗೇಶ್ ಪ್ರಭು, ನವೀನ್ ಕಲ್ಲಾಟೆ ಮೊದಲಾದವರು ಭಾಗವಹಿಸಿದ್ದರು.
ತಾಸಿನೊಳಗೆ ಸ್ಲಾಬ್ ಅಳವಡಿಕೆ: ಸ್ಥಳೀಯರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಒಂದು ತಾಸಿನಲ್ಲಿಯೇ ಚರಂಡಿ ಸ್ಲ್ಯಾಬ್ ಹಾಕಿ ಮುಚ್ಚಲಾಗಿದೆ. ಆದರೆ ಸರ್ವೀಸ್ ರಸ್ತೆ ಮತ್ತು ಅಂಡರ್ ಪಾಸ್‌ನಿಂದ ಸುಮಾರು ೧೦೦ ಮೀಟರ್ ತನಕ ಹಾಗೂ ಮೋರಿಯ ಸುತ್ತಲೂ ಹೊಂಡ-ಗುಂಡಿಗಳು ಇದ್ದು, ಪೂರ್ಣ ಪ್ರಮಾಣದ ಕಾಮಗಾರಿ ಉಳಿದುಕೊಂಡಿದೆ. ಆದಷ್ಟು ಶೀಘ್ರವಾಗಿ ಈ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.