ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಶಾಸಕರು ಅನುದಾನಕ್ಕಾಗಿ ಬೇಡಿಕೆ ಇಟ್ಟರೂ ಗಂಗಾಕಲ್ಯಾಣ ಯೋಜನೆ, ಮನೆ ನಿರ್ಮಾಣ ಸೇರಿದಂತೆ ಮೂಲ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗಿಲ್ಲ. ಸರ್ಕಾರದಿಂದ ಹಣ ಸಿಗುತ್ತಿಲ್ಲ. ಶಾಸಕರು ತಮ್ಮ ಖರ್ಚಿನಲ್ಲಿ ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳೇ ಹೇಳಿದ್ದರೂ ವಾಸ್ತವದಲ್ಲಿ ಸಿದ್ದರಾಮಯ್ಯನವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಅವರನ್ನು ವಿದೇಶಕ್ಕೆ ಕಳಿಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ರೆಸಾರ್ಟ್ ಬುಕ್ ಮಾಡಿದ್ದಾರೆಂಬ ಪ್ರಶ್ನೆಗೆ ಲೇವಡಿ ಮಾಡಿದ ವಿಜಯೇಂದ್ರ, ಅವರಿಗೆ ಅನುಕೂಲವಾಗಲಿ ಅಂತ ಬಿಜೆಪಿಯಿಂದ ಬಡಿಗೆ ರೆಡಿ ಮಾಡಿಸಿದ್ದೇವೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಯಾರಿಗೆ ಹೇಳುತ್ತಾರೆ ಅವರಿಗೆ ಕೊಡುತ್ತೇವೆ. ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರ ವಿಫಲವಾಗಿದೆ. ಎಲ್ಲ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ರಾಜ್ಯದ ಹಿತಾಸಕ್ತಿಯನ್ನು ಬಲಿ ಕೊಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರ ಭ್ರಷ್ಟಾಚಾರ ಹಾಗೂ ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿದೆ. ಬಡವರು, ರೈತರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯಗಳು ಮೋಸ ಹೋಗಿದ್ದೇವೆ ಎಂಬ ಭಾವನೆ ಹೊಂದಿದ್ದಾರೆ. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಅಲ್ಪಸಂಖ್ಯಾತ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಇತರೆ ಸಮುದಾಯಗಳ ಬಡವರನ್ನೂ ಸಮಾನವಾಗಿ ಪರಿಗಣಿಸಬೇಕು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಒನ್‌ಟೈಮ್ ಸೆಟಲ್‌ಮೆಂಟ್ ಯೋಜನೆಯಡಿ ಬಡ್ಡಿ ಮನ್ನಾ ಮಾಡಿದಂತೆ ಇತರೆ ಸಮುದಾಯಗಳಿಗೂ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ಸುಮಾರು 1.41 ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಸಿಗುತ್ತಿಲ್ಲ. ಈ ಬಗ್ಗೆ ಸ್ವತಃ ಸಚಿವರೇ ಒಪ್ಪಿಕೊಂಡಿದ್ದಾರೆ. ಹಿಂದುಳಿದ ಸಮುದಾಯಗಳಿಗೆ ನ್ಯಾಯ ಕೊಡುತ್ತೇವೆ ಎಂಬ ಸರ್ಕಾರದ ಮಾತುಗಳು ಕೇವಲ ಭರವಸೆಗಳಾಗಿವೆ. ರಾಜ್ಯದಲ್ಲಿ ಯುವಜನತೆಗೆ ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರ ವಿಫಲವಾಗಿದೆ. ಸುಮಾರು 2.85 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಪ್ರಕ್ರಿಯೆ ಆರಂಭವಾಗಿಲ್ಲ. ಈ ಹುದ್ದೆಗಳಲ್ಲಿ 1.42 ಲಕ್ಷ ಉದ್ಯೋಗಗಳನ್ನು ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಯುವಕರಿಗೆ ನೀಡಬಹುದಿತ್ತು. ಆದರೆ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ಹೆಬ್ಬಾಳಕರ ಜೊತೆಗೆ ಯಾವುದೇ ಹೊಂದಾಣಿಕೆ ಇಲ್ಲ:
ತಮ್ಮ ಕುಟುಂಬ ಮತ್ತು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಹೊಂದಾಣಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಕುಟುಂಬಕ್ಕೆ ಅವರ ಜೊತೆಗೆ ಯಾವುದೇ ಸಂಬಂಧ ಇಲ್ಲ. ನಾನು ಪಕ್ಷದ ಅಧ್ಯಕ್ಷನಾಗಿ ಮುಡಾ ಹಗರಣ ಸೇರಿದಂತೆ ಹಲವು ವಿಷಯಗಳಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಹೋರಾಟ ನಡೆಸಿದ್ದೇನೆ. ನನ್ನ ಆದ್ಯತೆ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಬೀದಿಗೆ ತರುವುದಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ₹5 ಸಾವಿರ ಕೋಟಿ ಹಣದ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡುತ್ತಿಲ್ಲ. ಈ ಹಣ ಎಲ್ಲಿ ಹೋಗಿದೆ ಎಂಬುವುದರ ಬಗ್ಗೆ ಮುಖ್ಯಮಂತ್ರಿಗಳು ಉತ್ತರಿಸಬೇಕು. ಸಿಎಂಗೆ ಈ ಬಗ್ಗೆ ಗೊತ್ತಿಲ್ಲ ಎಂದರೆ ಅದು ಜಗತ್ತಿನ 8ನೇ ಅದ್ಭುತ ಎಂದು ಲೇವಡಿ ಮಾಡಿದರು.
ಪ್ರಾದೇಶಿಕ ಅಸಮಾನತೆ ನಿವಾರಣೆ ಸಮಿತಿ ವರದಿ ಉಲ್ಲೇಖಿಸಿ, ರಾಜ್ಯದಲ್ಲಿ ಅಸಮಾನತೆ ಶೇ.72ಕ್ಕೆ ಏರಿಕೆಯಾಗಿದೆ. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಅಭಿವೃದ್ಧಿ ಕೊರತೆ ಇದೆ. ಮುಖ್ಯಮಂತ್ರಿಗಳು ಮೈಸೂರು ಭಾಗದವರೋ ಅಥವಾ ಸಂಪೂರ್ಣ ರಾಜ್ಯದವರೋ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಪ್ರಶ್ನಿಸಿದರು.
ಅನುಗ್ರಹ ಯೋಜನೆಯಡಿ ಕುರಿ, ಮೇಕೆ ಸಾವುಗಳಿಗೆ ನೀಡಬೇಕಾದ ಸುಮಾರು ₹45 ಕೋಟಿ ಪರಿಹಾರ ಇನ್ನೂ ಬಾಕಿಯಿದೆ. 90 ಸಾವಿರ ಕುರಿ-ಮೇಕೆ ಸಾವುಗಳಲ್ಲಿ ಕೇವಲ 30 ಸಾವಿರಕ್ಕೆ ಮಾತ್ರ ಪರಿಹಾರ ನೀಡಲಾಗಿದೆ ಎಂದ ಅವರು, ಫೆ.19ರಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಜಿಪಂ-ತಾಪಂ ಚುನಾವಣೆ, ಗ್ರೇಟರ್ ಬೆಂಗಳೂರು, ವಿಧಾನ ಪರಿಷತ್ ಚುನಾವಣೆ, ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಸಮಾರೋಪ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ, ಮಹಾದೇವಪ್ಪ ಯಾದವಾಡ, ಅನಿಲ ಬೆನಕೆ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.