ಉಪ್ಪಿನಂಗಡಿ: ಇಲ್ಲಿನ ವಲಯ ಅರಣ್ಯ ವ್ಯಾಪ್ತಿಯಲ್ಲಿ ಅಖಿಲ ಭಾರತ ಹುಲಿ ಗಣತಿ–೨೦೨೬ ರ ಎರಡನೇ ಹಂತದ ಲೈನ್ ಟ್ರಾನ್ಸೆಕ್ಸ್ ಸಮೀಕ್ಷೆ ಸೋಮವಾರದಂದು ಆರಂಭಗೊಂಡಿದ್ದು, ಸಮೀಕ್ಷೆಯ ಮೊದಲ ದಿನವೇ ಮುಗ್ರು ಅರಣ್ಯ ಪ್ರದೇಶದಲ್ಲಿ ಬೆಳಗಿನ ವೇಳೆಯಲ್ಲಿ ಸಮೀಕ್ಷೆ ನಡೆಸುತ್ತಿದ್ದ ದಿನಗೂಲಿ ನೌಕರ ಶೇಷಪ್ಪ ಎಂಬವರಿಗೆ ಕಾಡು ಹಂದಿ ದಾಳಿ ನಡೆಸಿ ಗಾಯಗೊಳಿಸಿದೆ.
ಪ್ರಥಮ ಹಂತವೇ ಸವಾಲಿನ ನಡುವೆ ನಡೆದಿತ್ತು: ಜ.೫ ರಂದು ಪ್ರಥಮ ಹಂತ ಆರಂಭಗೊಂಡಾಗ ಸಿಬ್ಬಂದಿ ಕೊರತೆ, ಜೀವ ರಕ್ಷಕ ಸಾಧನಗಳ ಕೊರತೆ, ದಟ್ಟ ಅರಣ್ಯದ ಅಪಾಯ, ಸಂವಹನ ಸಾಧನಗಳ ಅಭಾವ ಇವೆಲ್ಲದಿಂದ ಸಮೀಕ್ಷೆ ಗಂಭೀರ ಸವಾಲಾಗಿ ಪರಿಣಮಿಸಿತ್ತು. ೧೮ ತಂಡಗಳನ್ನು ರಚಿಸಿ ಪ್ರತಿಯೊಂದು ತಂಡಕ್ಕೆ ಮೂವರು ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಬೆಳಿಗ್ಗೆ ೬ರಿಂದ ಮಧ್ಯಾಹ್ನವರೆಗೂ ೫ ಕಿಮೀಗೂ ಹೆಚ್ಚಿನ ದೂರ ಕಾಲ್ನಡಿಗೆಯಲ್ಲಿ ಸಂಚರಿಸಿ ಸಮೀಕ್ಷೆ ಕೈಗೊಳ್ಳಲಾಗಿತ್ತು. ರಾಜ್ಯಾದ್ಯಂತ ಮೂರು ದಿನ ನಡೆದ ಈ ಹಂತದಲ್ಲಿ ಹುಲಿ, ಚಿರತೆ, ಕಾಡು ನಾಯಿ, ನರಿ, ತೋಳ, ಆನೆ ಮತ್ತಿತರ ಕಾಡುಪ್ರಾಣಿಗಳ ಹೆಜ್ಜೆಗುರುತುಗಳು, ಲದ್ದಿ, ಸ್ಕ್ರಾಚ್ ಮಾರ್ಕ್ಗಳು ದಾಖಲಿಸಲ್ಪಟ್ಟಿದ್ದವು. ಕಾಡು ಹಂದಿ ದಾಳಿ–ಶೇಷಪ್ಪ ಗಾಯ: ಮುಗ್ರು ಅರಣ್ಯ ಬೀಟ್‌ನಲ್ಲಿ ಬೆಳಗಿನ ಪರಿಶೀಲನೆ ವೇಳೆ ದಟ್ಟ ಕಾಡಿನಲ್ಲಿ ಸಮೀಕ್ಷೆ ನಡೆಸುತ್ತಿರುವ ಸಂದರ್ಭದಲ್ಲಿ ಕಾಡು ಹಂದಿ ದಾಳಿ ನಡೆಸಿ ಅರಣ್ಯ ಇಲಾಖೆಯ ದಿನಕೂಲಿ ನೌಕರ ಶೇಷಪ್ಪ ಗಾಯಗೊಂಡಿದ್ದಾರೆ.
ಉಪ್ಪಿನಂಗಡಿ ವಲಯದ ಅರಣ್ಯ ವ್ಯಾಪ್ತಿಯಲ್ಲಿ ೧೮ ಕಡೆಗಳಲ್ಲಿ ಎರಡನೇ ಹಂತದ ಸಮೀಕ್ಷೆ ನಡೆಯುತ್ತಿದೆ. ಸಿಬ್ಬಂದಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರೀತಿಯ ತರಬೇತಿಯನ್ನು ನೀಡಲಾಗಿದೆ.ರಾಘವೇಂದ್ರ ಎಚ್.ಪಿ, ವಲಯ ಅರಣ್ಯಾಧಿಕಾರಿ, ಉಪ್ಪಿನಂಗಡಿ