ಉಪ್ಪಿನಂಗಡಿ: ಜಯ- ವಿಕ್ರಮ ಜೋಡುಕರೆ ಕಂಬಳದ ಕರೆ ಮಹೂರ್ತ

KannadaprabhaNewsNetwork | Published : Feb 6, 2024 1:33 AM

ಸಾರಾಂಶ

ಉಪ್ಪಿನಂಗಡಿಯ 38ನೇ ವರ್ಷದ ವಿಜಯ- ವಿಕ್ರಮ ಜೋಡುಕರೆ ಕಂಬಳಕ್ಕೆ ಹಳೆಗೇಟು ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿರುವ ಕಂಬಳ ಕರೆಯಲ್ಲಿ ಕರೆ ಮುಹೂರ್ತ ನಡೆಯಿತು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ಹರೀಶ ಉಪಾಧ್ಯಾಯರು ಧಾರ್ಮಿಕ ವಿಧಿ- ವಿಧಾನ ನೆರವೇರಿಸಿದರು. ಕಂಬಳ ಸಮಿತಿ ಅಧ್ಯಕ್ಷ, ಶಾಸಕರೂ ಆಗಿರುವ ಅಶೋಕ್ ಕುಮಾರ್ ರೈ ಸಹಿತ ಪ್ರಮುಖರು ಹಾಜರಿದ್ದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರ ಸಾರಥ್ಯದಲ್ಲಿ ನಡೆಯುವ 38ನೇ ವರ್ಷದ ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳಕ್ಕೆ ಹಳೆಗೇಟು ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿರುವ ಕಂಬಳ ಕರೆಯಲ್ಲಿ ಕರೆ ಮುಹೂರ್ತ ನಡೆಯಿತು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ ವೇ.ಮೂ. ಹರೀಶ ಉಪಾಧ್ಯಾಯರು ಧಾರ್ಮಿಕ ವಿಧಿ- ವಿಧಾನ ನೆರವೇರಿಸಿದರು.

ಕಂಬಳ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕಂಬಳ ಸಮಿತಿ ಅಧ್ಯಕ್ಷ, ಶಾಸಕರೂ ಆಗಿರುವ ಅಶೋಕ್ ಕುಮಾರ್ ರೈ, ನನ್ನ ಶಾಸಕತ್ವದ ಅವಧಿಯಲ್ಲಿ ಉಪ್ಪಿನಂಗಡಿಯಲ್ಲಿ ನಡೆಯುವ ಮೊದಲ ಕಂಬಳ ಇದಾಗಿದ್ದು, ಈ ಬಾರಿ ಈ ಜನಪದ ಕ್ರೀಡೆಯನ್ನು ಕಂಬಳೋತ್ಸವನ್ನಾಗಿ ವಿಜೃಂಭಣೆಯಿಂದ ಆಚರಿಸಬೇಕು. ಬೆಂಗಳೂರಿನಲ್ಲಿ ಕಂಬಳವು ಯಶಸ್ವಿಯಾಗಿ ಜರಗಿದ ಬಳಿಕ ಜನರಲ್ಲಿ ಕಂಬಳವೆಂದರೆ ನಿರೀಕ್ಷೆಗಳು ಹೆಚ್ಚಿವೆ. ಅದಕ್ಕೊಂದು ಉತ್ಸವದ ಮೆರುಗು ಬಂದಿದೆ. ಈ ಬಾರಿಯ ಉಪ್ಪಿನಂಗಡಿ ಕಂಬಳವು ಬರೇ ಕೋಣಗಳ ಓಟಕ್ಕಷ್ಟೇ ಸೀಮಿತವಾಗದೇ, ತುಳುನಾಡಿನ ಆಹಾರ ಶೈಲಿಯನ್ನು ಬಿಂಬಿಸುವ ಆಹಾರ ಮೇಳ, ಕೃಷಿ ಪದ್ಧತಿಗೆ ಪೂರಕವಾಗಿ ಕೃಷಿ ಯಂತ್ರೋಪಕರಣ ಸೇರಿದಂತೆ ಸಸ್ಯ ಮೇಳವನ್ನು ಆಯೋಜಿಸಬೇಕು ಎಂದರು.

ಉಪ್ಪಿನಂಗಡಿಯ ಸಂಗಮ ಕ್ಷೇತ್ರದಲ್ಲಿ ಅಣೆಕಟ್ಟಿನ ಪ್ರಸ್ತಾವನೆಯನ್ನು ನಾನೀಗಲೇ ಸಲ್ಲಿಸಿದ್ದು, ಶೀಘ್ರವೇ ಅನುದಾನ ಬರಲಿದೆ. ಅಲ್ಲಿ ಅಣೆಕಟ್ಟು ಆದ ಬಳಿಕ ಈ ಜಾಗದಲ್ಲಿ ಕಂಬಳ ನಡೆಸಲು ಸಾಧ್ಯವಾಗದ ಪರಿಸ್ಥಿತಿಯಿದೆ. ಆದರೆ ಯಾವುದೇ ಕಾರಣಕ್ಕೂ ಉಪ್ಪಿನಂಗಡಿ ಕಂಬಳ ನಿಲ್ಲಬಾರದು. ಕಂಬಳ ನಡೆಸಲು ಸೂಕ್ತವಾದ ಜಾಗಕ್ಕೆ ಈಗಿಂದಲೇ ಹುಡುಕಾಟ ನಡೆಯಬೇಕು ಎಂದು ತಿಳಿಸಿದರಲ್ಲದೆ, ಈ ಬಾರಿ ಕೂಡಾ ಕಂಬಳಕ್ಕೆ ಸಿನಿಮಾ ತಾರೆಯರು, ನಾಟಕ ಕಲಾವಿದರನ್ನು ಕರೆಸಬೇಕು. ಇವರಲ್ಲಿ ತುಳುನಾಡಿನವರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದರಲ್ಲದೆ, ಮುಂಬರುವ ಮಾ. 30 ಮತ್ತು 31ರಂದು ರಂದು ವಿಜಯ-ವಿಕ್ರಮ ಜೋಡುಕರೆ ಕಂಬಳ ನಡೆಯಲಿದ್ದು, ಕಂಬಳ ಆಯೋಜನೆಗೆ ಬೇಕಾದ ಕೆಲಸ ಕಾರ್ಯಗಳನ್ನು ನಾಳೆಯಿಂದಲೇ ಆರಂಭಿಸುವಂತೆ ತಿಳಿಸಿದರು.

ಈ ಸಂದರ್ಭ ಕಂಬಳ ಸಮಿತಿ ಗೌರವಾಧ್ಯಕ್ಷ ಉಮೇಶ್ ಶೆಣೈ ಎನ್., ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾದ ವಿದ್ಯಾಧರ ಜೈನ್ ಮತ್ತಿತರರು ಉಪಸ್ಥಿತರಿದ್ದರು.

ಹಣ ಹಿಂದುರಿಗಿಸಿ ಮಾನವೀಯತೆ

ಸಭೆ ನಡೆಯುತ್ತಿದ್ದ ಸ್ಥಳದಲ್ಲಿ ಸೋನು ಡಾಬದ ಸಿಬ್ಬಂದಿ ವಿಷ್ಣು ರೈ ಅವರಿಗೆ ಹಣದ ಕಟ್ಟೊಂದು ಬಿದ್ದು ಸಿಕ್ಕಿದ್ದು, ಅದನ್ನು ಅವರು ಕಂಬಳ ಸಮಿತಿಯವರಿಗೆ ಹಸ್ತಾಂತರಿಸಿದರು. ಬಿದ್ದು ಸಿಕ್ಕಿದ ಹಣವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವಿಷ್ಣು ರೈ ಅವರನ್ನು ಈ ಸಂದರ್ಭ ಅಭಿನಂದಿಸಲಾಯಿತು.

Share this article