ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಸಂಗಮ ಕ್ಷೇತ್ರ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯವನ್ನು ರಾಜ್ಯದ ಪ್ರಸಿದ್ಧ ಯಾತ್ರ‍್ರಾ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದಿಂದ ೩೫೨ ಕೋಟಿ ರು.ನ ಯೋಜನೆಗೆ ಮಂಜೂರಾತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟು ನಿರ್ಮಾಣ ಮತ್ತು ನದಿ ಗರ್ಭದಲ್ಲಿರುವ ಉದ್ಭವ ಲಿಂಗದ ಸರ್ವ ಕಾಲದ ದರ್ಶನಕ್ಕೆ ಕೂಡಲ ಸಂಗಮದಲ್ಲಿರುವಂತೆ ವ್ಯವಸ್ಥೆ ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರವಾಗಿ ಪರಿವರ್ತಿಸಲು ತ್ವರಿತ ಕಾರ್ಯಾರಂಭವಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.ಈ ಯೋಜನೆಗೆ ಸಂಬಂಧಿಸಿ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲು ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಎಂಜಿನಿಯರ್‌ಗಳು ಹಾಗೂ ಸರ್ಕಾರದ ಅಧಿಕಾರಿಗಳೊಂದಿಗೆ ದೇವಾಲಯದ ಬಳಿ ಸಮಾಲೋಚನೆ ಹಾಗೂ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.ನದಿಯ ಎರಡು ದಡಗಳಿಗೆ ಸಂಪರ್ಕ ರಸ್ತೆಯಿರುವ ಅಣೆಕಟ್ಟು ನಿರ್ಮಾಣ, ನದಿ ನೀರಿನಲ್ಲಿ ಮುಳುಗಿರುವ ಉದ್ಭವ ಲಿಂಗದ ದರ್ಶನಕ್ಕೆ ಕೂಡಲ ಸಂಗಮದಲ್ಲಿರುವಂತೆ ೮೦ ಮೀಟರ್ ವ್ಯಾಸದ ಗೋಳಾಕಾರದ ಮಂದಿರ ನಿರ್ಮಿಸಿ ಉದ್ಭವ ಲಿಂಗದ ಬಳಿ ತೆರಳಿ ಪೂಜೆ ಮಾಡಲು ಅವಕಾಶ ಕಲ್ಪಿಸುವುದು, ನದಿ ತಟದಲ್ಲಿ ಪಿಂಡ ಪ್ರದಾನಕ್ಕೆ ಸಭಾಂಗಣ ನಿರ್ಮಾಣ, ವಸತಿ ವ್ಯವಸ್ಥೆಗೆ ೬೦ ಕೊಠಡಿಗಳ ಕಟ್ಟಡ ನಿರ್ಮಾಣ, ಪಿಂಡ ಪ್ರದಾನಕ್ಕೆ ಬಂದವರಿಗೆ ಸ್ನಾನ ಮಾಡಲು ರ‍್ಯಾಂಪ್ ನಿರ್ಮಾಣ ಮಾಡಲಾಗುವುದು ಹಾಗೂ ದೇವಾಲಯದಿಂದ ಬಸ್ ನಿಲ್ದಾಣದ ವರೆಗೆ ನದಿ ಬದಿಯಲ್ಲಿ ತಡೆಗೋಡೆ ನಿರ್ಮಿಸಿ ನದಿ ಬದಿಯಲ್ಲಿ ೨೦ ಫೀಟ್‌ನ ರಸ್ತೆ ನಿರ್ಮಾಣ, ನದಿಯ ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ, ವಿಶೇಷ ವಿದ್ಯುತ್ ದೀಪಾಲಂಕಾರ, ಮ್ಯೂಸಿಕ್ ಕಾರಂಜಿ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಲಾಗುವುದು. ಒಟ್ಟಿನಲ್ಲಿ ಉಪ್ಪಿನಂಗಡಿಯನ್ನು ಧಾರ್ಮಿಕ ಟೂರಿಸಂಗೆ ಪೂರಕವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.ಎಂಜಿನಿಯರ್‌ಗಳು ಸಮಗ್ರ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಅದು ಮಂಜೂರಾತಿಗೊಂಡು ೩-೪ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಮಳೆಗಾಲದಲ್ಲಿ ನದಿಯಲ್ಲಿ ನೀರಿರುವ ಸಂದರ್ಭದಲ್ಲಿ ಈ ಕಾಮಗಾರಿ ನಡೆಸಲು ಕಷ್ಟಸಾಧ್ಯವಾದ್ದರಿಂದ ನೀರು ಕಡಿಮೆಯಾದ ಕೂಡಲೇ ಕಾಮಗಾರಿ ಆರಂಭಿಸಿ ಮುಂದಿನ ಮಳೆಗಾಲಕ್ಕೆ ಮೊದಲು ಕಾಮಗಾರಿ ಮುಗಿಸುವ ಯೋಜನೆಯಿದೆ ಎಂದರು.ಬೃಹತ್ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಪ್ರಮೋದ್ ಶೆಟ್ಟಿ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಇದರ ಕನ್ಸಲ್ಟೆಂಟ್ ಮುಖ್ಯಸ್ಥ ಸಂದೀಪ್ ನಾಡಿಗೇರ್ ಮತ್ತು ತಂಡದ ಸದಸ್ಯರಾದ ಕಿರಣ್, ದರ್ಶನ್, ಸೆಬಾಸ್ಟಿನ್, ಉಪತಹಸೀಲ್ದಾರ್ ಚೆನ್ನಪ್ಪ ಗೌಡ, ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃ಼ಷ್ಣ ನಾಯ್ಕ್, ಸದಸ್ಯರಾದ ಎ. ಕೃಷ್ಣ ರಾವ್ ಆರ್ತಿಲ, ದೇವದಾಸ್ ರೈ, ವೆಂಕಪ್ಪ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಮುರಳೀಧರ ರೈ ಮಠಂತಬೆಟ್ಟು, ಯು.ಟಿ. ತೌಸೀಫ್, ಆದಂ ಕೊಪ್ಪಳ, ದೇವಾಲಯದ ಸಿಬ್ಬಂದಿ ಕೃಷ್ಣಪ್ರಸಾದ್ ಬಡಿಲ, ದಿವಾಕರ ಗೌಡ, ಕೃಷ್ಣಪ್ರಸಾದ್ ದೇವಾಡಿಗ ಮತ್ತಿತರರು ಇದ್ದರು.