ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಒಡೆತನಕ್ಕೆ ಸೇರಿದ್ದ ೨೯ ಸೆಂಟ್ಸ್ ಭೂಮಿಯನ್ನು ಅದರ ಅನುಭೋಗದಾರ ಸ್ವ ಇಚ್ಚೆಯಿಂದ ಪುತ್ತೂರು ಶಾಸಕರ ಸಮ್ಮುಖದಲ್ಲಿ ಭಾನುವಾರ ದೇವಾಲಯಕ್ಕೆ ಹಸ್ತಾಂತರಿಸಲಾಯಿತು.ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ದೇವಾಲಯದ ಭೂಮಿಯನ್ನು ಯಾರೆಲ್ಲಾ ಸ್ವಾಧೀನ ಹೊಂದಿದ್ದಾರೆಯೋ ಅವರೆಲ್ಲಾ ದೇವಾಲಯದ ಅಭಿವೃದ್ಧಿಗೆ ಪೂರಕವಾಗಿ ದೇವಾಲಯದ ಭೂಮಿ ದೇವಾಲಯಕ್ಕೆ ಹಿಂತಿರುಗಿಸಬೇಕೆಂದು ವಿನಂತಿಸಿದ್ದರು. ಈ ಪ್ರಕಾರ ಉಪ್ಪಿನಂಗಡಿಯ ಹೃದಯ ಭಾಗದಲ್ಲಿ ಸುಮಾರು ೨೯ ಸೆಂಟ್ಸ್ ಭೂಮಿಯನ್ನು ಸ್ಥಳ ಬಾಡಿಗೆಯ ನೆಲೆಯಲ್ಲಿ ಅನುಭೋಗದಾರರಾಗಿದ್ದ ವೈದ್ಯ ಕೆ ಶೀನಪ್ಪ ಶೆಟ್ಟಿ ಆಶಯದಂತೆ ಅವರ ಮಕ್ಕಳು ಭೂಮಿಯನ್ನು ದೇವಾಲಯಕ್ಕೆ ಹಿಂತಿರುಗಿಸಿದ್ದು, ಶಾಸಕ ಅಶೋಕ್ ಕುಮಾರ್ ರೈ ಸಮ್ಮುಖದಲ್ಲಿ ಶ್ರೀ ದೇವರ ಮುಂದೆ ಪ್ರಸಾದ ನೀಡುವ ಮೂಲಕ ಭೂಮಿ ಹಸ್ತಾಂತರ ಪ್ರಕ್ರಿಯೆ ನೆರವೇರಿತು.
ಈ ಸಂದರ್ಭ ಶಾಸಕ ಅಶೋಕ್ಕ್ ರೈ ಮಾತನಾಡಿ, ಪೇಟೆಯ ಹೃದಯಭಾಗದಲ್ಲಿರುವ ಬೆಲೆಬಾಳುವ ಭೂಮಿಯನ್ನು ಯಾವುದೇ ಬೇಡಿಕೆ ಮುಂದಿರಿಸದೆ ಸ್ವ ಇಚ್ಛೆಯಿಂದ ದೇವಾಲಯಕ್ಕೆ ಹಿಂತಿರುಗಿಸುವ ಮೂಲಕ ಮಾದರಿಯಾಗಿದ್ದಾರೆ. ಇನ್ನು ಬಾಕಿ ಉಳಿದಿರುವ ೪ ಸೆಂಟ್ಸ್ ಭೂಮಿಯ ಅನುಭೋಗದಾರರಲ್ಲಿಯೂ ವಿನಂತಿಸಲಾಗಿದೆ. ಅವರು ಸಹಕಾರ ನೀಡಿದರೂ ನೀಡದಿದ್ದರೂ ಭೂಮಿಯನ್ನು ಸ್ವಾಧೀನಪಡಿಸುವ ಕಾರ್ಯ ಮುಂದಕ್ಕೆ ನಡೆಯಲಿದೆ ಎಂದರು. ಪುತ್ತೂರಿನ ಮಹಾಲಿಂಗೇಶ್ವರ ದೇವರ ೧೫ ಎಕ್ರೆ ಭೂಮಿಯನ್ನು ಅದರಲ್ಲಿ ಅನುಭೋಗದಾರರಲ್ಲಿ ದೇವಾಲಯಕ್ಕೆ ಹಿಂತಿರುಗಿಸಲು ಮನವಿ ಮಾಡಲಾಗಿದೆ. ಸೂಕ್ತ ಸಮಯಾವಕಾಶ ನೀಡಿದ ಬಳಿಕ ಆ ಎಲ್ಲಾ ಭೂಮಿಯ ಸ್ವಾಧೀನ ಪ್ರಕ್ರಿಯೆ ನಡೆಯಲಿದೆ ಎಂದರು.ಭೂಮಿ ಹಿಂತಿರುಗಿಸಿದ ವೈದ್ಯ ಕೆ ಎಸ್ ಶೆಟ್ಟಿ ಅವರ ಮಕ್ಕಳಾದ ಡಾ ಯತೀಶ್ ಕುಮಾರ್ ಶೆಟ್ಟಿ ಹಾಗೂ ಕೆ ಜಗದೀಶ್ ಶೆಟ್ಟಿ ಮಾತನಾಡಿ, ಸುಮಾರು ೫೫ ವರ್ಷಗಳಿಂದ ನಮ್ಮ ಸ್ವಾಧೀನದಲ್ಲಿದ್ದ ಭೂಮಿಯನ್ನು ದೇವಾಲಯದ ಅಭಿವೃದ್ಧಿಯ ಉದ್ದೇಶಕ್ಕಾಗಿ ತುಂಬಾ ಸಂತೋಷದಿಂದ ದೇವಾಲಯಕ್ಕೆ ಹಿಂತಿರುಗಿಸುತ್ತಿದ್ದೇವೆ . ದೇವಾಲಯದ ಆಡಳಿತದ ವಿನಂತಿಯ ಮೊದಲೇ ನಾವು ಭೂಮಿಯನ್ನು ಹಿಂತಿರುಗಿಸಲು ತೀರ್ಮಾನಿಸಿದ್ದೆವು ಎಂದು ತಿಳಿಸಿದ್ದಾರೆ.
ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ ರಾಧಾಕೃಷ್ಣ ನಾಯ್ಕ್, ಸಮಿತಿ ಸದಸ್ಯರಾದ ದೇವಿದಾಸ್ ರೈ , ಡಾ ರಮ್ಯ ರಾಜಾರಾಮ್, ವೆಂಕಪ್ಪ ಪೂಜಾರಿ, ಸೋಮನಾಥ , ಪುತ್ತೂರು ಮಹಾಲಿಂಗೇಶ್ವ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ್ ಭಟ್, ಸದಸ್ಯರಾದ ವಿನಯ ಸುವರ್ಣ, ಪ್ರಮುಖರಾದ ಕರುಣಾಕರ ಸುವರ್ಣ, ಡಾ. ರಘು, ಡಾ ರಾಜಾರಾಮ್ ಕೆ ಬಿ, ಯು ರಾಮ, ಸುಜೀರ್ ಗಣಪತಿ ನಾಯಕ್, ದೇವಿದಾಸ್ ಶೆಟ್ಟಿ, ಸುದರ್ಶನ್, ವಿನಯ್ ಕುಮಾರ್, ಸ್ವರ್ಣೇಶ್ ಗಾಣಿಗ, ಸತೀಶ್ ಹೆನ್ನಾಳ, ಅಲಿಮಾರ್ ರೂಪೇಶ್ ರೈ, ಯೋಗೀಶ್ ಸಾಮಾನಿ, ರವೀಂದ್ರ ಗೌಡ ಪಟಾರ್ತಿ, ವೆಂಕಟೇಶ್ ರಾವ್, ಪದ್ಮನಾಭ ಕುಲಾಲ್, ದಿವಾಕರ ಗೌಡ, ಜನಾರ್ಧನ ಪೂಜಾರಿ ಮತ್ತಿತರರು ಇದ್ದರು.ಇದೇ ಸಂಧರ್ಭದಲ್ಲಿ ದೇವಾಲಯದ ನಾಲ್ಕು ಸೆಂಟ್ಸ್ ಭೂಮಿಯಲ್ಲಿ ವಾಸ್ತವ್ಯದ ಮನೆ ಹೊಂದಿರುವ ಸುಂದರ ಗೌಡ ಅವರೊಂದಿಗೆ ಶಾಸಕರು ಮಾತುಕತೆ ನಡೆಸಿದ್ದು, ನೀಡಲಾದ ಕಾಲಾವಕಾಶದೊಳಗೆ ಮನೆ ತೆರವುಗೊಳಿಸಲು ಸೂಚಿಸಿದರು.
ದೇವಾಲಯದ ಈ ಹಿಂದಿನ ಸುಂದರೇಶ್ ಅತ್ತಾಜೆ ನೇತೃತ್ವದ ಆಡಳಿತದ ಒಪ್ಪಿಗೆ ಪಡೆದು ಸದ್ರಿ ಸ್ಥಳದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಸ ಮನೆ ನಿರ್ಮಿಸಲಾಗಿದೆ. ಒಪ್ಪಿಗೆ ಪಡೆಯುವ ವೇಳೆ ಅಂದಿನ ಆಡಳಿತ ಬಯಸಿದಂತೆ ದೇವಾಲಯ ಅಭಿವೃದ್ಧಿಗೆ ೬೦ ಸಾವಿರ ಮೊತ್ತ ಪಾವತಿಸಿದ್ದೇವೆ. ಇದೀಗ ಹೊಸ ಆಡಳಿತದಿಂದ ಮನೆಯನ್ನು ತೆರವು ಮಾಡಿ ಎಂದು ಸೂಚನೆ ನೀಡಿರುವುದು ನೋವು ತಂದಿದೆ. ನಮ್ಮ ಪ್ರಕರಣವನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿ ತೆರವು ಪ್ರಕ್ರಿಯೆಯಿಂದ ನಮಗೆ ವಿನಾಯಿತಿ ನೀಡಬೇಕೆಂದು ಸುಂದರ ಗೌಡ ವಿನಂತಿಸಿದ್ದಾರೆ.ವೈದ್ಯ ಕೆ ಎಸ್ ಶೆಟ್ಟಿ ಮಕ್ಕಳು ಹಿಂತಿರುಗಿಸಿದ ಭೂಮಿಯ ಹಸ್ತಾಂತರ ಪ್ರಕ್ರಿಯೆ ಮುಗಿದಾಕ್ಷಣ ಮೊದಲೇ ತಂದಿರಿಸಲಾಗಿದ್ದ ಜೆಸಿಬಿ ಯಂತ್ರದಿಂದ ಭೂಮಿ ಸಮತಟ್ಟುಗೊಳೀಸುವ ಕಾರ್ಯಾಚರಣೆ ನಡೆಸಲಾಯಿತು. ಈ ಸಂಧರ್ಭ ಬೆಲೆಬಾಳುವ ಮರಗಳನ್ನು ಮತ್ತು ತೆಂಗಿನ ಮರಗಳನ್ನು ಉಳಿಸುವಂತೆ ಶಾಸಕರು ನಿರ್ದೇಶನ ನೀಡಿದರು.