ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರ್ಹ ಹಾಗೂ ಸಂಘಟನಾ ಸಾಮರ್ಥ್ಯ ಹೊಂದಿರುವ ಮುಖಂಡರನ್ನು ಆಯ್ಕೆ ಮಾಡಬೇಕು ಎಂಬ ಉದ್ದೇಶದಿಂದ ಸಭೆ ಕರೆಯಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿ ವಿವಿಧ ಮುಖಂಡರ ಹೆಸರು ಪ್ರಸ್ತಾಪವಾದ ಸಂದರ್ಭದಲ್ಲಿ ಕಾರ್ಯಕರ್ತರು ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಅಭಿಪ್ರಾಯ ಮಂಡಿಸಿದರು.
ಕೆಲವರು ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರೆ, ಮತ್ತೊಂದು ಗುಂಪು ಜನ ಸಂಪರ್ಕ, ಸಂಘಟನಾ ಸಾಮರ್ಥ್ಯ ಹಾಗೂ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ನಾಯಕತ್ವ ಹೊಂದಿರುವವರಿಗೆ ಜವಾಬ್ದಾರಿ ನೀಡಬೇಕು ಎಂದು ಆಗ್ರಹಿಸಿತು.ಒಂದೇ ವೇಳೆ ಹಲವು ಕಾರ್ಯಕರ್ತರು ಮಾತನಾಡಲು ಮುಂದಾದ ಕಾರಣ ಸಭೆಯಲ್ಲಿ ಗೊಂದಲ ಹೆಚ್ಚಾಯಿತು. ತಮ್ಮ ಬೆಂಬಲಿತ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಕೆಲವರು ಜೋರಾಗಿ ಒತ್ತಾಯಿಸಿದ ಪರಿಣಾಮ ಸಭೆಯಲ್ಲಿ ವಾತಾವರಣ ಬಿಸಿಯೇರಿತು. ಮುಖಂಡರು ಕಾರ್ಯಕರ್ತರನ್ನು ಸಮಾಧಾನಪಡಿಸಿ ಶಾಂತಿಯುತವಾಗಿ ಅಭಿಪ್ರಾಯ ದಾಖಲಿಸುವಂತೆ ಮನವಿ ಮಾಡಿದರೂ ಕೆಲಕಾಲ ಗದ್ದಲ ಮುಂದುವರಿಯಿತು.
ಅಭಿಪ್ರಾಯ ಸಂಗ್ರಹದ ವೇಳೆ ಮಾಜಿ ಶಾಸಕ ರಮೇಶ ಕುಡಚಿ ಪಕ್ಷದ ಕಾರ್ಯವೈಖರಿ ಹಾಗೂ ಕೆಲವು ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಮಾತಿಗೆ ಮಾತು ಬೆಳೆದು ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿದರು. ಮಾಜಿ ಶಾಸಕ ರಮೇಶ ಕುಡಚಿ ಅವರ ಆಪ್ತ ಹೇಮಂತ ಲೇಂಗಡೆ ಎಂಬುವವರ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಾರ್ಕೆಟ್ ಠಾಣೆ ಪೊಲೀಸರು ಕಾಂಗ್ರೆಸ್ ಭವನಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕಾರ್ಯಕರ್ತರನ್ನು ಚದುರಿಸಿ, ಸಭೆಯಲ್ಲಿ ಶಾಂತಿ ಕಾಪಾಡುವಂತೆ ಸೂಚಿಸಿದರು.
ಬಾಕ್ಸ್
ಕಾಂಗ್ರೆಸ್ ಸಭೆಯಲ್ಲಿ ಗಲಾಟೆ ನಡೆದಿದೆ ಎಂಬ ವರದಿಗಳನ್ನು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ತಳ್ಳಿ ಹಾಕಿದರು. ಈ ಬಗ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಯಾವುದೇ ಗಲಾಟೆ ನಡೆದಿಲ್ಲ. ಅಧ್ಯಕ್ಷರ ಆಯ್ಕೆ ವಿಚಾರವಾಗಿ ಪ್ರತಿಯೊಬ್ಬರಿಗೂ ಒಂದೊಂದು ಅಭಿಪ್ರಾಯ ಇರುತ್ತದೆ. ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ. ಕೆಲವರು ಜೋರಾಗಿ ಮಾತನಾಡಿದ ಮಾತ್ರಕ್ಕೆ ಅದನ್ನು ಗಲಾಟೆ ಎಂದು ಬಿಂಬಿಸುವುದು ಸರಿಯಲ್ಲ ಎಂದರು.
ಸಭೆಯಲ್ಲಿ ಕೆಲವರು ಏಕಕಾಲದಲ್ಲಿ ಮಾತನಾಡಿದ್ದರಿಂದ ಗೊಂದಲ ಉಂಟಾಗಿದೆ. ಎಲ್ಲ ಕಾರ್ಯಕರ್ತರ ಅಭಿಪ್ರಾಯಗಳಿಗೆ ಗೌರವ ನೀಡಲಾಗುವುದು. ಅಗತ್ಯವಿದ್ದರೆ ಸಭೆಯ ಬಳಿಕ ಪ್ರತಿಯೊಬ್ಬ ಕಾರ್ಯಕರ್ತರೊಂದಿಗೆ ಪ್ರತ್ಯೇಕ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.------------