ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಚಾಮರಾಜೇಶ್ವರ ದೇವಸ್ಥಾನದ ಉದ್ಯಾನವನದ ಮುಂಭಾಗದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು, ಮುಖಂಡರು, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಶಾಸಕ ಮಾಗಡಿ ಬಾಲಕೃಷ್ಣ ಪೋಟೋ ಹಿಡಿದು ಘೋಷಣೆ ಕೂಗುತ್ತಾ ಭುವನೇಶ್ವರಿ ವೃತ್ತ ತಲುಪಿದರು. ಕೆಲ ಕಾಲ ಪ್ರತಿಭಟನೆ ನಡೆಸಿ, ಬಳಿಕ ಭಾವಚಿತ್ರಗಳನ್ನು ಹರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಗೂಂಡಾ ಬಿ.ಕೆ. ಹರಿಪ್ರಸಾದ್ ವಜಾಗೊಳಿಸಿ, ಅನುಚಿತವಾಗಿ ವರ್ತಿಸಿದ ಶಾಸಕರನ್ನು ಅಮಾನತ್ತು ಮಾಡುವಂತೆ ಪ್ರತಿಭಟನಾಕಾರು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ವೃಷಬೇಂದ್ರಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಗೌರವನ್ವಿತ ರಾಜ್ಯಪಾಲರು ಭಾಷಣ ಮುಗಿಸಿ ಹೊರ ಬರುತ್ತಿದ್ದಂತೆ ಅವರನ್ನು ಅಡ್ಡಗಟ್ಟಿ ಅನುಚಿತವಾಗಿ ವರ್ತಿಸಿರುವ ಕಾಂಗ್ರೆಸ್ ಶಾಸಕರ ವಿರುದ್ಧ ಕ್ರಮವಾಗಬೇಕು. ಇದೊಂದು ಸಂವಿಧಾನ ವಿರೋಧಿ ನಡೆಯಾಗಿದ್ದು, ರಾಷ್ಟ್ರಪತಿಗಳು ಮಧ್ಯೆ ಪ್ರವೇಶ ಮಾಡಿ, ರಾಜ್ಯಪಾಲರದಿಂದ ವರದಿ ಪಡೆದು, ಸದನದ ಗೌರವ ಹಾಳು ಮಾಡಿದ ಶಾಸಕರ ವಿರುದ್ಧ ಶಿಸ್ತು ಕ್ರಮವಾಗಬೇಕು ಎಂದು ಆಗ್ರಹಿಸಿದರು.ಮತ್ತೋರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಮಾತನಾಡಿ, ಕಾಂಗ್ರೆಸ್ ನಾಯಕರು ಸಂವಿಧಾನ ಚಿಕ್ಕ ಪುಸ್ತಕವನ್ನು ಹಿಡಿದುಕೊಂಡು ಪ್ರದರ್ಶನ ಮಾಡುವುದು ಮುಖ್ಯವಲ್ಲ. ಸಂವಿಧಾನದ ಆಶಯಗಳನ್ನು ಗೌರವಿಸುವುದನ್ನು ಕಲಿಯಬೇಕು. ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಂಬೇಡ್ಕರ್ ಹೆಸರೇಳುತ್ತಿರುವ ಕಾಂಗ್ರೆಸ್ ನಾಯಕರು, ಸಂವಿಧಾನ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ರಾಜ್ಯಪಾಲರನ್ನು ಅಪಮಾನಿಸುವ ಮೂಲಕ ದೇಶಕ್ಕೆ ಒಂದು ಕೆಟ್ಟ ಸಂದೇಶವನ್ನು ರವಾನೆ ಮಾಡಿದ್ದಾರೆ. ಈ ಕೂಡಲೇ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೊನ್ನೂರು ಮಹದೇವಸ್ವಾಮಿ, ನಗರ ಮಂಡಲ ಅಧ್ಯಕ್ಷ ಶಿವರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಡಳ್ಳಿ ಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಆರ್ ಸುಂದರ್ ಚೂಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತ ಮೂರ್ತಿ, ಚಾಮುಲ್ ಮಾಜಿ ಅಧ್ಯಕ್ಷ ನಾಗೇಂದ್ರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯಕುಮಾರ್, ಜಿಲ್ಲಾ ಕಾರ್ಯದರ್ಶಿ ರವೀಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬೇಡರ ಪುರ ಬಸವಣ್ಣ, ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಮೋರ್ಚಾಗಳ ಪ್ರಧಾನ ಕಾರ್ಯದರ್ಶಿಗಳಾದ ಆನಂದ್ ಭಗಿರಥ, ಪುರು?ತ್ತಮ್, ರಾಮಸಮುದ್ರ ಶಿವಣ್ಣ, ನಲ್ಲೂರು ಪರಮೇಶ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಕೂಸಣ್ಣ, ಹರದನಹಳ್ಳಿ ರವಿ, ಮಾಧ್ಯಮ ಸಹ ವಕ್ತಾರ ಮಂಜುನಾಥ್, ವೀರೇಂದ್ರ, ಮುಖಂಡರಾದ ಕೆ. ವೀರಭದ್ರ ಸ್ವಾಮಿ, ಎಂಎಸ್ ಚಂದ್ರಶೇಖರ್, ಬುಲೆಟ್ ಚಂದ್ರು, ಗುರುಪ್ರಸಾದ್, ಭಾಸ್ಕರ್ ಇದ್ದರು.