ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಭಾರಿ ಹೆಚ್ಚಳ ಮಾಡಿದ್ದನ್ನು ಖಂಡಿಸಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಸಾಮಾನ್ಯ ಸಭೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದು, ಪರಿಣಾಮವಾಗಿ ಮೇಯರ್ ಸಭೆಯನ್ನೇ ಮೊಟಕುಗೊಳಿಸಿದ ಪ್ರಸಂಗ ಗುರುವಾರ ನಡೆಯಿತು.ಸಾಮಾನ್ಯ ಸಭೆಯ ಆರಂಭದಲ್ಲಿ ಹಿಂದಿನ ಸಭೆಯ ನಿರ್ಣಯಗಳನ್ನು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸ್ಥಿರೀಕರಣಗೊಳಿಸುವ ಸಂದರ್ಭ ಆಡಳಿತ ಸದಸ್ಯೆ ಸಂಗೀತ ಆರ್. ನಾಯಕ್ ಆಸ್ತಿ ತೆರಿಗೆ ವಿಚಾರ ಪ್ರಸ್ತಾಪಿಸಿದರು. ಈ ವೇಳೆ ಆಸ್ತಿ ತೆರಿಗೆ ಹೆಚ್ಚಳ ವಿರೋಧಿಸಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಪ್ಲೆಕಾರ್ಡ್‌ಗಳನ್ನು ಹಿಡಿದು ಸದನದ ಬಾವಿಗಿಳಿದು, ಮೇಯರ್ ಪೀಠದೆದುರು ಭಾರೀ ಪ್ರತಿಭಟನೆ ನಡೆಸಿದರು. ಸಭೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಮೇಯರ್ ತಮ್ಮ ಪೀಠದಿಂದ ಎದ್ದು ಹೊರನಡೆದರು. ಆಡಳಿತ ಪಕ್ಷದ ಸದಸ್ಯರೂ ಹೊರನಡೆದರು.ಮತ್ತೆ ಪ್ರತಿಭಟನೆ: ಕೆಲ ಸಮಯದ ಬಳಿಕ ಮತ್ತೆ ಸಭೆ ಆರಂಭವಾಯಿತಾದರೂ ಕಾಂಗ್ರೆಸ್ ಸದಸ್ಯರು ಪಟ್ಟು ಬಿಡಲಿಲ್ಲ. ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಆರಂಭಿಸಿದರು. ಆಡಳಿತ- ವಿಪಕ್ಷ ಸದಸ್ಯರ ನಡುವೆ ತೀವ್ರ ಗದ್ದಲ ಶುರುವಾಯಿತು. ಇತ್ತ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರೆ ಅತ್ತ ಬಿಜೆಪಿ ಸದಸ್ಯರು ಕೂಡ ಬಾವಿಗಿಳಿದು ಭಿತ್ತಿಪತ್ರಗಳನ್ನು ಹಿಡಿದು ಧಿಕ್ಕಾರ ಕೂಗತೊಡಗಿದರು. ಸಭೆ ನಿಯಂತ್ರಿಸಲಾಗದೆ ಮೇಯರ್ ಮತ್ತೆ ಸಭೆ ಮೊಟಕುಗೊಳಿಸಿ ಹೊರನಡೆದರು.ಮೇಯರ್ ನಡೆಗೆ ಅಸಮಾಧಾನ: ಅಧಿಕಾರಿಗಳು ಹಾಗೂ ವಿಪಕ್ಷದ ಸದಸ್ಯರು ಸದನದಲ್ಲಿಯೇ ಕಾದು ಕುಳಿದಿದ್ದರು. 12.30ರ ವೇಳೆಗೆ ಅಧಿಕಾರಿಯೊಬ್ಬರು ಒಳಬಂದು ಸಭೆ ರದ್ದು ಮಾಡಲಾಗಿದೆ ಎಂದು ಹೇಳಿದಾಗ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಮೇಯರ್ ಅವರು ಸಭೆ ರದ್ದುಪಡಿಸುವ ಅಥವಾ ಮುಂದೂಡುವ ಬಗ್ಗೆ ಏನೂ ಹೇಳದೆ ಹೊರಹೋಗುವ ಮೂಲಕ ಸನದಕ್ಕೆ ಅಗೌರವ ತೋರಿಸಿದ್ದಾರೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಕೆಲ ಹೊತ್ತಿನಲ್ಲಿ ಸದನದ ವಿದ್ಯುದ್ದೀಪಗಳನ್ನು ಆರಿಸಲಾಯಿತು. ಬಿಜೆಪಿಯ ವಿರುದ್ಧ ಘೋಷಣೆ ಕೂಗುತ್ತಾ ವಿಪಕ್ಷ ಸದಸ್ಯರು ಹೊರನಡೆಯುವುದರೊಂದಿಗೆ ಸಭೆಯೇ ನಡೆಯದೆ ಮೊಟಕುಗೊಂಡಿತು.ಹೊರಗೆ ಮತ್ತೆ ಪ್ರತಿಭಟನೆ: ಸದನದಿಂದ ಹೊರಬಂದ ವಿಪಕ್ಷ ಸದಸ್ಯರು ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ ನೇತೃತ್ವದಲ್ಲಿ ಪಾಲಿಕೆಯ ಪ್ರವೇಶ ದ್ವಾರದ ಬಳಿ ಭಿತ್ತಿಪತ್ರ ಹಿಡಿದು ಮೇಯರ್ ಸದನಕ್ಕೆ ಅಗೌರವ ತೋರಿಸಿದ್ದಾರೆ ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
ಮೇಯರ್ ಸ್ಪಷ್ಟನೆ: 2024-25ನೇ ಸಾಲಿನ ಆಸ್ತಿ ತೆರಿಗೆಯನ್ನು ಪರಿಷ್ಕೃತ ಮಾರುಕಟ್ಟೆ ದರಗಳ ಬದಲಿಗೆ ಈ ಹಿಂದೆ ಇದ್ದ ಆಸ್ತಿ ತೆರಿಗೆಗೆ ಶೇ.3ರಷ್ಟು ಹೆಚ್ಚಿಸಿ ಪರಿಷ್ಕರಣೆಗೊಳಿಸಲು ಕಳೆದ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಪಾಲಿಕೆ ಆಯುಕ್ತರು ಸರ್ಕಾರದ ಆದೇಶದಂತೆ ಪರಿಷ್ಕೃತ ಮಾರುಕಟ್ಟೆ ದರದ ಮೇಲೆ ಆಸ್ತಿ ತೆರಿಗೆ ವಸೂಲು ಮಾಡಲು ಆದೇಶ ನೀಡಿದ್ದಾರೆ. ಕಳೆದ ಸಾಮಾನ್ಯ ಸಭೆಯ ನಿರ್ಧಾರವನ್ನು ಆಯುಕ್ತರು ಪಾಲನೆ ಮಾಡಬೇಕಿತ್ತು. ಆದರೆ ಸರ್ಕಾರದ ಒತ್ತಡದಿಂದ 2023ರ ಪರಿಷ್ಕೃತ ಮಾರುಕಟ್ಟೆ ದರಗಳ ಮೇಲೆ ಆಸ್ತಿ ತೆರಿಗೆ ವಿಧಿಸುವ ಕೆಲಸ ಮಾಡಿದ್ದಾರೆ ಎಂದು ಮೇಯರ್ ಹೇಳಿದ್ದಾರೆ.ಖಾಲಿ ಜಾಗಕ್ಕೂ ತೆರಿಗೆ ಬಿಜೆಪಿ ಕೊಡುಗೆ: ವಿಪಕ್ಷ ನಾಯಕಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಐದು ವರ್ಷ ಸ್ವಯಂ ಘೋಷಿತ ಆಸ್ತಿ ತೆರಿಗೆ ಹಾಕಿರಲಿಲ್ಲ. 2021ರ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಖಾಲಿ ಜಾಗಕ್ಕೂ ತೆರಿಗೆ ಅನ್ವಯ ಮಾಡಲಾಗಿದೆ. ಕೇಂದ್ರ ಸರ್ಕಾರ ಈ ಆದೇಶ ಮಾಡಿದಾಗ ಬಿಜೆಪಿಯ ಯಾರೊಬ್ಬ ಜನಪ್ರತಿನಿಧಿಯೂ ಚಕಾರ ಎತ್ತಿಲ್ಲ. ಈಗ ತೆರಿಗೆ ಕೇವಲ ಮನೆ ಮೇಲೆ ಮಾತ್ರ ಅಲ್ಲ, ಅಂಗಳಕ್ಕೂ ಹಾಕಲಾಗಿದೆ. 10 ಸಾವಿರ ರು. ತೆರಿಗೆ ಕಟ್ಟಬೇಕಿದ್ದವರು 50 ಸಾವಿರ ರು.ಗಿಂತ ಹೆಚ್ಚು ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ ಎಂದು ಪಾಲಿಕೆಯ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಹೇಳಿದ್ದಾರೆ.