ಮಾದಕ ವಸ್ತು ಮಾರಾಟ ಬೇರು ಸಹಿತ ಕಿತ್ತು ಹಾಕಿ: ಜಿಲ್ಲಾಧಿಕಾರಿ ಡಾ.ವೆಂಕಟೇಶ

KannadaprabhaNewsNetwork |  
Published : Feb 28, 2024, 02:32 AM IST
27ಕೆಡಿವಿಜಿ1-ದಾವಣಗೆರೆ ಡಿಸಿ ಕಚೇರಿಯಲ್ಲಿ ಮಂಗಳವಾರ ಮಾದಕ ವಸ್ತು ತಡೆ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ. | Kannada Prabha

ಸಾರಾಂಶ

ಮಾದಕ ವಸ್ತುಗಳ ವ್ಯಾಮೋಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಅದರಲ್ಲೂ ಇಂಜಿನಿಯರಿಂಗ್‌, ವೈದ್ಯಕೀಯ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ವಿರುದ್ಧ ಜಾಗೃತರಾಗಿ ಮಾಡಲು ಜಾಥಾ, ವಿಚಾರ ಸಂಕಿರಣ, ಪ್ರಬಂಧ ಸ್ಪರ್ಧೆ ಹೆಚ್ಚಾಗಿ ಮಾಡುವ ಮೂಲಕ ಮಾದಕ ವಸ್ತುಗಳ ತಡೆಗಟ್ಟಿ ವ್ಯಸನಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾದಕ ವಸ್ತುಗಳ ಮಾರಾಟ, ಕಳ್ಳ ಸಾಗಾಣೆಯ ಬೇರು ಸಮೇತ ಕಿತ್ತೊಗೆಯಲು ಪೊಲೀಸ್-ಅಬಕಾರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ನಾರ್ಕೋಟಿಕ್ಸ್‌ ತಡೆ ಸಮನ್ವಯ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಾದಕ ವಸ್ತು ಮಾರಾಟ, ಸಾಗಾಣೆ ತಡೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾದಕ ವಸ್ತುಗಳು ಯುವ ಜನರ ಭವಿಷ್ಯದ ಜೊತೆಗೆ ಮಾನವ ಸಂಪತ್ತು ನಾಶಪಡಿಸುವ ವಸ್ತುಗಳಾಗಿವೆ ಎಂದರು.

ಮಾದಕ ವಸ್ತುಗಳ ವ್ಯಾಮೋಹದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಅದರಲ್ಲೂ ಇಂಜಿನಿಯರಿಂಗ್‌, ವೈದ್ಯಕೀಯ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ವಿರುದ್ಧ ಜಾಗೃತರಾಗಿ ಮಾಡಲು ಜಾಥಾ, ವಿಚಾರ ಸಂಕಿರಣ, ಪ್ರಬಂಧ ಸ್ಪರ್ಧೆ ಹೆಚ್ಚಾಗಿ ಮಾಡುವ ಮೂಲಕ ಮಾದಕ ವಸ್ತುಗಳ ತಡೆಗಟ್ಟಿ ವ್ಯಸನಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಇಂತಹ ಮಾದಕ ವಸ್ತುಗಳ ಮಾರಾಟದ ಜಾಲ ಮತ್ತು ಕಳ್ಳ ಸಾಗಾಟ ಮಾಡುವುದನ್ನು ತಡೆಯಬೇಕು. ಮಾದಕ ವಸ್ತುಗಳಿಗೆ ಪ್ರೋತ್ಸಾಹ, ಮಾರಾಟ ಮಾಡುವ ಜಾಲವನ್ನು ಬೇರು ಸಹಿತ ಕಿತ್ತು ಹಾಕಬೇಕು. 2011ರಿಂದ 26.2.2024ರವರೆಗೆ 230 ಪ್ರಕರಣವನ್ನು ಎನ್‌ಡಿಪಿಎಸ್‌ನಡಿ ದಾಖಲಿಸಿದ್ದು, 2023ರಲ್ಲಿ 90 ಪ್ರಕರಣ ವರದಿಯಾಗಿವೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಕೇವಲ 2 ತಿಂಗಳಲ್ಲೇ 21 ಪ್ರಕರಣ ದಾಖಲಾಗಿದ್ದು, ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಣೆಗೆ ಸಂಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ವರೆಗಿನ 230 ಪ್ರಕರಣದಲ್ಲಿ 32 ತನಿಖೆ ಹಂತದಲ್ಲಿದ್ದು, 141 ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. 35ರಲ್ಲಿ ಶಿಕ್ಷೆಯಾಗಿದ್ದು, 20 ಪ್ರಕರಣದಲ್ಲಿ ಬಿಡುಗಡೆಯಾಗಿವೆ ಎಂದು ತಿಳಿಸಿದರು.

ಅಬಕಾರಿ ಇಲಾಖೆಯೂ ಮಾದಕ ವಸ್ತುಗಳ ಮಾರಾಟ, ಸಾಗಾಣೆ ಬಗ್ಗೆ ನಿಗಾವಹಿಸಿದ್ದು, 6 ಕೇಸ್‌ನಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದು, 6 ಪ್ರಕರಣ ದಾಖಲಿಸಿದೆ. ಇವು ಸಾಸ್ವೇಹಳ್ಳಿ, ದಾವಣಗೆರೆ ಬನಶಂಕರಿ ಬಡಾವಣೆ, ಬೂದಿಹಾಳ್ ರಸ್ತೆ, ಮುಬಾರಕ್ ಪ್ಯಾಲೇಸ್ ಎದುರು, ಬಿ.ಕಲ್ಪನಹಳ್ಳಿ ವೃತ್ತದ ಬಳಿ, ಆನಗೋಡು ಪಾರ್ಕ್‌ ಸರ್ವೀಸ್ ರಸ್ತೆ, ದೇವರಾಜ ಅರಸ್ ಬಡಾವಣೆ ಸಿ ಬ್ಲಾಕ್‌, ಚನ್ನಗಿರಿ ತಾಲೂಕು ಕಚೇರಿ ಬಳಿ, ಬೇತೂರು ರಸ್ತೆಯ ದೊಡ್ಡ ಹಳ್ಳದ ಸೇತುವೆ, ಹೊನ್ನಾಳಿ ಮಾರಿಕೊಪ್ಪ ಬಾರ್‌ ಲೈನ್ ಕೂಡು ರಸ್ತೆ, ಹೊನ್ನಾಳಿ ತುಂಗಭದ್ರಾ ಬಡಾವಣೆ, ದಾವಣಗೆರೆ ಆಂಜನೇಯ ಬಡಾವಣೆಯಲ್ಲಿ ಕೇಸ್ ವರದಿಯಾಗಿವೆ. ಇವು ಮಾದಕ ವಸ್ತುಗಳ ಸೇವನೆ, ಗಾಂಜಾ ಪ್ರಕರಣಗಳಾಗಿವೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.2 ತಿಂಗಳಲ್ಲಿ 21 ಪ್ರಕರಣಗಳು ದಾಖಲು

ಜನವರಿ, ಫೆಬ್ರವರಿಯಲ್ಲಿ ದಾವಣಗೆರೆ ಆಜಾದ್ ನಗರ ಠಾಣೆ ವ್ಯಾಪ್ತಿಯಲ್ಲಿ 5 ಪ್ರಕರಣ, ಕೆಟಿಜೆ ನಗರ ಠಾಣೆ ವ್ಯಾಪ್ತಿಯ 3, ಸಿಇಎನ್ ಅಪರಾಧ ಠಾಣೆಯ 3, ನ್ಯಾಮತಿ ಠಾಣೆಯ 2, ಹೊನ್ನಾಳಿ, ಹರಿಹರ, ಜಗಳೂರು, ದಾವಣಗೆರೆ ವಿದ್ಯಾನಗರ, ಬಡಾವಣೆ ಠಾಣೆಗಳ ವ್ಯಾಪ್ತಿಯಲ್ಲಿ ತಲಾ 1 ಪ್ರಕರಣ ದಾಖಲಾಗಿವೆ. ಮೂವರು ಮಾರಾಟಗಾರರ ಮೇಲೆ ಪ್ರಕರಣ ದಾಖಲಾಗಿದೆ. ಚನ್ನಗಿರಿ ಕೇಸ್‌ನಲ್ಲಿ ಹಸಿ ಗಾಂಜಾದ 1 ಕೇಸ್‌, ಆಜಾದ್ ನಗರ ಠಾಣೆಯಲ್ಲಿ 349 ಗ್ರಾಂ ಒಣ ಗಾಂಜಾ, ಹರಿಹರ ಗ್ರಾಮಾಂತರ 200 ಗ್ರಾಂ ಒಣ ಗಾಂಜಾ ಪ್ರಕರಣ ದಾಖಲಿಸಿ, ಮೂವರ ಬಂಧಿಸಲಾಗಿದೆ ಎಂದು ಎಸ್‌ಪಿ ಉಮಾ ಪ್ರಶಾಂತ್ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ