ಯುಪಿಎಸ್ಸಿ: ಶಿಕ್ಷಕನ ಮಗ ರಾಹುಲ್‌ಗೆ 462ನೇ ರ್‍ಯಾಂಕ್‌

KannadaprabhaNewsNetwork | Published : Apr 23, 2025 12:30 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮಸೂತಿ ಗ್ರಾಮದ ರಾಹುಲ್‌ ಚನ್ನಪ್ಪ ಯರಂತೇಲಿ ತಮ್ಮ 6ನೇ ಪ್ರಯತ್ನದಲ್ಲಿ ೪೬೨ ನೇ ರ್‍ಯಾಂಕ್ ಪಡೆಯುವ ಮೂಲಕ ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ.

ಬಸವರಾಜ ನಂದಿಹಾಳಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮಸೂತಿ ಗ್ರಾಮದ ರಾಹುಲ್‌ ಚನ್ನಪ್ಪ ಯರಂತೇಲಿ ತಮ್ಮ 6ನೇ ಪ್ರಯತ್ನದಲ್ಲಿ ೪೬೨ ನೇ ರ್‍ಯಾಂಕ್ ಪಡೆಯುವ ಮೂಲಕ ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ.ರಾಹುಲ್‌ ಯರಂತೇಲಿ ತಂದೆ ಚನ್ನಪ್ಪ ಯರಂತೇಲಿ ಮುದ್ದೇಬಿಹಾಳ ತಾಲೂಕಿನ ಇಣಚಗಲ್ಲದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು, ಇದೇ ಗ್ರಾಮದಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ ಪೂರೈಸಿದ್ದಾರೆ. ಆರನೇ ತರಗತಿಗೆ ನವೋದಯ ಪರೀಕ್ಷೆ ಬರೆದು ಆಲಮಟ್ಟಿ ನವೋದಯ ಶಾಲೆಗೆ ಆಯ್ಕೆಯಾಗಿ 6 ರಿಂದ ಪಿಯುಸಿವರೆಗೆ ಆಲಮಟ್ಟಿ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಮುಂದೆ ಬೆಂಗಳೂರಿನ ಎಂ.ವ್ಹಿ.ಜಯರಾಂ ಕಾಲೇಜಿನಲ್ಲಿ ಬಿಇ(ಸಿಎಸ್) ಪದವಿ ಪಡೆದು ನಂತರ ೨೦೧೯ರಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಿದ್ದರು. ಮೊದಲ ಪ್ರಯತ್ನದಲ್ಲಿ ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣವಾಗಿ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಬಳಿಕ ೨೦೨೦ರಲ್ಲಿಯೂ ಇದೇ ಫಲಿತಾಂಶ ಬಂದಿತ್ತು. ರಾಹುಲ್‌ ನಿರಾಶೆಯಾಗದೇ ಮತ್ತೆ ೨೦೨೧ ಮತ್ತು ೨೦೨೨ ರಲ್ಲಿಯೂ ಪರೀಕ್ಷೆ ಬರೆದಾಗ ಪೂರ್ವ ಪರೀಕ್ಷೆ ಸಹ ಪಾಸಾಗಿರಲಿಲ್ಲ. ಸತತ ಅಧ್ಯಯನ ಮಾಡಿ ಮತ್ತೆ ೨೦೨೩ರಲ್ಲಿ ಪರೀಕ್ಷೆಗೆ ಕುಳಿತಾಗ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲ. ಮತ್ತೆ 6ನೇ ಬಾರಿಗೆ ೨೦೨೪ರಲ್ಲಿ ಪರೀಕ್ಷೆಗೆ ಹಾಜರಾಗಿ ಪೂರ್ವ, ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನದಲ್ಲಿಯೂ ಉತ್ತೀರ್ಣರಾಗಿದ್ದು, ಪರೀಕ್ಷೆಯಲ್ಲಿ ೪೬೨ನೇ ರ್‍ಯಾಂಕ್ ಪಡೆದು ಕೊನೆಗೂ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.ರಾಹುಲ್‌ ನಿತ್ಯ ೮-೧೦ಗಂಟೆ ಕಾಲ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಬೆಂಗಳೂರಿನ ಡಾ.ರಾಜಕುಮಾರ ಅಕಾಡೆಮಿಯಲ್ಲಿ ಒಂದು ವರ್ಷ ತರಬೇತಿ ಪಡೆದಿದ್ದು, ಬೆಂಗಳೂರಿನಲ್ಲಿದ್ದುಕೊಂಡೆ ಗ್ರಂಥಾಲಯದಲ್ಲಿ ನಿರಂತರವಾಗಿ ಅಧ್ಯಯನ ಮಾಡುತ್ತಿದ್ದರು. ಇವರು ಮಾನವಶಾಸ್ತ್ರ ವಿಷಯವನ್ನು ಐಚ್ಛಿಕವಾಗಿ ತೆಗೆದುಕೊಂಡಿದ್ದರು.----

ಕೋಟ್‌...

ರಾಹುಲ ಬಾಲ್ಯದಿಂದಲೇ ಜಾಣ. ಇವರು ಐಎಎಸ್ ಆಗಬೇಕೆಂಬ ಕನಸು ಕಂಡಿದ್ದನು. ಅದರಂತೆ ಅವನು ಪದವಿ ಮುಗಿದ ನಂತರ ಯಾವುದೇ ಉದ್ಯೋಗಕ್ಕೆ ಹೋಗದೆ ನಿರಂತರವಾಗಿ ಓದಿನೊಂದಿಗೆ ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, ಸಂತಸ ತಂದಿದೆ. ನನಗೆ ರಾಹುಲ ಹಿರಿಯ ಮಗ. ಇನ್ನೊಬ್ಬ ಮಗ ಚೇತನ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದಾನೆ. ಮಗಳು ರೇಖಾ ಬೆಂಗಳೂರಿನ ಅಂಗಡಿ ಕಾಲೇಜಿನಲ್ಲಿ ಬಿಇ (ಸಿಎಸ್) ವ್ಯಾಸಂಗ ಮಾಡುತ್ತಿದ್ದಾಳೆ. ನನಗೆ ಮಗ ಉನ್ನತ ಪರೀಕ್ಷೆ ಪಾಸಾಗಿರುವುದು ಕುಟುಂಬದಲ್ಲಿಯೇ ಸಂತಸ ಇಮ್ಮಡಿಕೊಂಡಿದೆ.

ಚನ್ನಪ್ಪ ಯರಂತೇಲಿ, ರಾಹುಲ್‌ ತಂದೆ-----

ಕೋಟ್‌

ನಾನು ಹೆಚ್ಚಿನ ರ್‍ಯಾಂಕ್ ನಿರೀಕ್ಷೆ ಇಟ್ಟುಕೊಂಡಿದ್ದೆ. ನಾನು ಐಎಎಸ್ ಆಗಬೇಕೆಂಬ ಕನಸು ಬಾಲ್ಯದಿಂದಲೂ ಇತ್ತು. ಈಗಿನ ರ್‍ಯಾಂಕಿಗೆ ಐಪಿಎಸ್ ಸಿಗುತ್ತದೆ. ನಾನು ಜನರ ಸೇವೆ ಮಾಡಲು ಸದಾ ಬದ್ಧ.

ರಾಹುಲ ಯರಂತೇಲಿ, ಯುಪಿಎಸ್ಸಿ ಟಾಪರ್‌

Share this article