ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಶನಿವಾರ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಏರ್ಪಡಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಸಸಿ ನೆಟ್ಟು ಚಾಲನೆ ನೀಡಿ ಅವರು ಮಾತನಾಡಿ, ಪರಿಸರದಲ್ಲಿ ಸಮತೋಲನ ಕಾಪಾಡಲು ಎಲ್ಲರೂ ಸಸಿಗಳನ್ನು ನೆಟ್ಟು ಪೋಷಿಸಬೇಕು. ನಗರದ ಹಸಿರೀಕರಣ ಮತ್ತು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಸೂಡಾ ವತಿಯಿಂದ ವಿವಿಧ ಬಡಾವಣೆಗಳಲ್ಲಿ ಸುಮಾರು 5 ರಿಂದ 6 ಸಾವಿರ ಗಿಡಗಳನ್ನು ನೆಟ್ಟು ಪೋಷಿಸಲಾಗುವುದು ಎಂದರು.
ಪ್ರಾಧಿಕಾರದ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 1000, ಊರುಗಡೂರು ಬಡಾವಣೆಯಲ್ಲಿ 1500 ನಿಧಿಗೆ ಬಡಾವಣೆ, ಭದ್ರಾವತಿಯ ಕುವೆಂಪು ಬಡಾವಣೆ ಸೇರಿದಂತೆ 5 ರಿಂದ 6 ಸಾವಿರ ಗಿಡಗಳನ್ನು ನೆಡಲಾಗುವುದು. ಸುಮಾರು 7 ಅಡಿಯ ಗಿಡಗಳನ್ನು ನೆಡಲಾಗುವುದು. ಅರಣ್ಯ ಇಲಾಖೆ ಯವರು 2 ವರ್ಷಗಳ ಕಾಲ ಗಿಡಗಳ ನಿರ್ವಹಣೆ ಮಾಡಲಿದ್ದಾರೆ ಎಂದು ತಿಳಿಸಿದರು.ಸುಮಾರು 14 ವರ್ಷಗಳಿಂದ ಪ್ರಾಧಿಕಾರ ವ್ಯಾಪ್ತಿಯಲ್ಲಿ ಬಡಾವಣೆ ನಿರ್ಮಾಣ ಆಗಿಲ್ಲ. ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಅನೇಕ ವರ್ಷಗಳಿಂದ ನಿವೇಶನಕ್ಕೆ ಸಂಬಂಧಿಸಿದಂತೆ ತೊಂದರೆಗಳಿದ್ದು, ಬಗೆಹರಿಸುವ ಕೆಲಸ ಮಾಡುತ್ತಿದ್ದೇನೆ. ನಗರದ ಬಡಾವಣೆಗಳಲ್ಲಿ ಒಟ್ಟು 2300 ನಿವೇಶನಗಳು ಖಾಲಿ ಇವೆ. ಇಲ್ಲಿ ಮನೆಗಳನ್ನು ಕಟ್ಟಬೇಕು. ಇಲ್ಲವಾದಲ್ಲಿ ಅವುಗಳನ್ನು ರದ್ದುಗೊಳಿಸಿ ಮನೆ ಅವಶ್ಯಕತೆ ಇರುವವರಿಗೆ ಹಂಚಿಕೆ ಮಾಡಲು ಸುತ್ತೋಲೆ ಹೊರಡಿಸಿರುವ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಹಲವರಿಗೆ ಈ ಸಂಬಂಧ ನೋಟಿಸ್ ನೀಡಲಾಗಿದೆ ಎಂದರು.
ರೈತರು ಖಾಸಗಿಯವರಿಗೆ ತಮ್ಮ ಜಮೀನನ್ನು ಮಾರುವ ಬದಲು ಕಾನೂನುಬದ್ಧವಾಗಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದರೆ ಎಲ್ಲರಿಗೂ ಅನೂಕವಾಗುತ್ತದೆ. ಸೋಗಾನೆ, ಹೊಳೆಹೊನ್ನೋರು, ಭದ್ರಾವತಿ ಭಾಗದಲ್ಲಿ ಜಮೀನು ಮಾರಾಟ ಮಾಡುವವರು ಇದ್ದರೆ 50:50 ಆಧಾರದಲ್ಲಿ ಪ್ರಾಧಿಕಾರಕ್ಕೆ ಮಾರಾಟ ಮಾಡ ಬಹುದು. ಪ್ರಾಧಿಕಾರದ ವತಿಯಿಂದ ಇನ್ನೂ ಅಭಿವೃದ್ದಿ ಕೆಲಸಗಳು ಆಗಬೇಕಿದ್ದು ಮಾಸ್ಟರ್ ಪ್ಲಾನ್ ನ್ನು ತಯಾರಿಸಲಾಗುತ್ತಿದೆ ಎಂದು ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಸೇರಿದಂತೆ ನಿವಾಸಿಗಳ ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಒದಗಿಸಲಾಗುವುದು. ಬಡಾವಣೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯವರ ಸಹಕಾರ ಮತ್ತು ಪಾತ್ರ ಮಹತ್ತರವಾಗಿದ್ದು ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ಸೂಡಾ ಸದಸ್ಯ ಎಚ್.ಎಸ್.ಸಿದ್ದಪ್ಪ, ಅರಣ್ಯ ಇಲಾಖೆ ಎಸಿಎಫ್ ವಿಜಯಕುಮಾರ್, ಸೂಡಾ ಎಇಇ ಬಸವರಾಜ್, ಸಹಾಯಕ ಅಭಿಯಂತರ ಗಂಗಾಧರಸ್ವಾಮಿ, ಆರ್‌ಎಫ್‌ಓ ವಿಜಯಕುಮಾರ್ ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ನಿವಾಸಿಗಳು, ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡಿದ್ದರು.