ಕೊಪ್ಪಳ:
ಯೂರಿಯಾ ರಸಗೊಬ್ಬರ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು. ಜಿಲ್ಲಾಡಳಿತ ಎಷ್ಟೇ ಕಸರತ್ತು ಮಾಡಿದರೂ ರೈತರು ಯೂರಿಯಾ ರಸಗೊಬ್ಬರಕ್ಕಾಗಿ ಪರತಪ್ಪಿಸುವುದು ತಪ್ಪುತ್ತಲೇ ಇಲ್ಲ. ಈ ನಡುವೆ ಪೊಲೀಸ್ ಸರ್ವಗಾಲಿನಲ್ಲಿ ಗೊಬ್ಬರ ವಿತರಿಸುವ ಮೂಲಕ ಯಾವುದೇ ಅವಘಡ ನಡೆಯದಂತೆ ಜಿಲ್ಲಾಡಳಿತ ನೋಡಿಕೊಂಡಿತು.ಸೋಮವಾರ ಟಿಎಪಿಎಂಎಸ್‌ಗೆ ಬಂದಿದ್ದ ಯೂರಿಯಾ ರಸಗೊಬ್ಬರ ಖರೀದಿಗಾಗಿ ರೈತರು ಕಿಲೋ ಮೀಟರ್ ಗಟ್ಟಲೇ ಸರದಿಯಲ್ಲಿ ನಿಂತಿದ್ದು ಅಲ್ಲದೆ ಕೊನೆಗೆ ಎಲ್ಲರಿಗೂ ಯೂರಿಯಾ ರಸಗೊಬ್ಬರ ಸಿಗದೆ ಹೋಗಿದ್ದರಿಂದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಯೂರಿಯಾ ರಸಗೊಬ್ಬರ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಪಹಣಿ ಮತ್ತು ಆಧಾರ್ ಕಾರ್ಡ್ ನೋಂದಾಯಿಸಿಕೊಂಡು ಪ್ರತಿಯೊಬ್ಬರಿಗೂ 2 ಚೀಲ್ ವಿತರಣೆ ಮಾಡಲು ಮುಂದಾಗಿದೆ. ಹೀಗೆ ಪಹಣಿ ಮತ್ತು ಆಧಾರ್ ಕಾರ್ಡ್ ನೋಂದಾಯಿಸಲು ಕಿಲೋ ಮೀಟರ್‌ಗಟ್ಟಲೇ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ ರೈತರದ್ದಾಗಿತ್ತು. ಕೊಪ್ಪಳ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆ ಆವರಣದಲ್ಲಿ ಯೂರಿಯಾ ರಸಗೊಬ್ಬರ ವಿತರಣೆ ಮಾಡುತ್ತಾರೆ ಎಂದು ಸುದ್ದಿ ತಿಳಿದು ಬೆಳ್ಳಂಬೆಳಗ್ಗೆಯೇ ರೈತರು ಬಂದಿದ್ದರು. ಆದರೆ, ಅಧಿಕಾರಿಗಳು ತಡವಾಗಿ ಬಂದರು. ಬಳಿಕ ನೋಂದಣಿ ಪ್ರಕ್ರಿಯೆ ನಡೆಯಿತು. ನಂತರ ಚೀಟಿ ಕೊಟ್ಟು ಕಳುಹಿಸಿ ಗೋಡಾನ್ ಮೂಲಕ ವಿತರಿಸಲಾಯಿತು.ಪೊಲೀಸ್ ಸರ್ಪಗಾವಲು:
ಬಂದಿದ್ದ 60 ಟನ್ ಯೂರಿಯಾ ರಸಗೊಬ್ಬರ ವಿತರಿಸಲು ಬಿಗಿಭದ್ರತೆ ಏರ್ಪಡಿಸಲಾಗಿತ್ತು. ಪೊಲೀಸ್ ಸರ್ಪಗಾವಲು ಹಾಕಿ ವಿತರಿಸಲಾಯಿತು. ಆದರೆ, ಸಾವಿರಾರು ರೈತರು ಗೊಬ್ಬರ ಖರೀದಿಗೆ ಆಗಮಿಸಿದ್ದರೂ ಸಿಕ್ಕಿದು ಮಾತ್ರ ನೂರಾರು ರೈತರಿಗೆ ಮಾತ್ರ.ರಸಗೊಬ್ಬರದ ಕೊರತೆಯಾಗದಂತೆ ಕ್ರಮ:ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಕೊರತೆಯಾಗದಂತೆ ನಿಗಾವಹಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಆ. 10ರ ವರೆಗೆ ಯೂರಿಯಾ ರಸಗೊಬ್ಬರದ ಬೇಡಿಕೆ 41,511 ಮೆಟ್ರಿಕ್ ಟನ್ ಆಗಿದ್ದು, 40,851 ಮೆಟ್ರಿಕ್ ಟನ್ ದಾಸ್ತಾನು ಹೊಂದಲಾಗಿದೆ. ಇದರಲ್ಲಿ 38,097 ಮೆಟ್ರಿಕ್ ಟನ್ ವಿತರಿಸಿದ್ದು 2,754 ಮೆಟ್ರಿಕ್ ಟನ್ದಾಸ್ತಾನಾಗಿ ಲಭ್ಯವಿದೆ. ಇಂಡಿಯನ್ ಪೊಟ್ಯಾಶ್ ಲಿಮಿಟೆಡ್ ಜಿಲ್ಲೆಗೆ 1,306 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಹಂಚಿಕೆಯಾಗಿದ್ದು, ಇದರಲ್ಲಿ ಸೊಸೈಟಿಗಳಿಗೆ 544.90 ಮೆಟ್ರಿಕ್ ಟನ್ ಹಾಗೂ ಡೀಲರ್ಸ್‌ಗೆ 761 ಮೆಟ್ರಿಕ್ ಟನ್ ಪೂರೈಸಲಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಟಾರ್ಸ್ಕ್‌ಫೋರ್ಸ್ ಸಮಿತಿ ಸದಸ್ಯರಾದ ತಹಸೀಲ್ದಾರ್, ತಾಪಂ ಇಒ, ಸಹಾಯಕ ಕೃಷಿ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕಾ ನಿರ್ದೇಶಕರ ಉಸ್ತುವಾರಿಯಲ್ಲಿ ರಸಗೊಬ್ಬರ ವಿತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಯೂರಿಯಾ ರಸಗೊಬ್ಬರದ ಪೂರೈಕೆ ಹಂತ-ಹಂತವಾಗಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ 5,000 ಮೆಟ್ರಿಕ್ ಟನ್ ಆರ್‌ಸಿಎಫ್, ಎಂಎಫ್‌ಎಲ್, ಐಪಿಎಲ್, ಜಿಎಸ್‌ಎಫ್‌ಸಿ ಕಂಪನಿಗಳಿಂದ ಹೆಚ್ಚಿನ ಪೂರೈಕೆ ಮಾಡಲು ಕ್ರಮ ವಹಿಸಲಾಗಿದೆ. ರಸಗೊಬ್ಬರಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಅಥವಾ ಅನಧೀಕೃತವಾಗಿ ದಾಸ್ತಾನು ಮಾಡಿದರೆ ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ಪೋಲಿಸ್ ಇಲಾಖೆಗೆ ದೂರು ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.