ಕೊಪ್ಪಳ: ನಮ್ಮಲ್ಲಿ ಯೂರಿಯಾ ಗೊಬ್ಬರ ಇಲ್ಲ...ದಯಮಾಡಿ ಕೇಳಬೇಡಿ.
ಇದು ನಗರದ ರಸಗೊಬ್ಬರ ಮಾರಾಟ ಅಂಗಡಿ ಹಾಗೂ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿ (ಟಿಎಪಿಎಂಸಿ) ಮಳಿಗೆಗೆ ನೇತು ಹಾಕಿರುವ ಬೋರ್ಡ್.
ಜಿಲ್ಲಾದ್ಯಂತ ಯೂರಿಯಾ ರಸಗೊಬ್ಬರ ಅಭಾವ ಮತ್ತೆ ತಲೆದೋರಿದೆ. ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ., ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಅಭಾವವಿಲ್ಲ ಎಂದು ಹೇಳಿಕೆ ನೀಡಿದ ಮರು ದಿನವೇ ಅಂಗಡಿಗಳಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ. ಖುದ್ದು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿಯ ಮಳಿಗೆಯಲ್ಲಿಯೂ ಸಹ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ.
ಯೂರಿಯಾ ರಸಗೊಬ್ಬರ ಖರೀದಿಗೆಂದು ಬಂದಿದ್ದ ರೈತರು ಮಾರುಕಟ್ಟೆ ಮತ್ತು ಟಿಎಪಿಎಂಸಿ ಮಳಿಗೆ ಎದುರು ಕಾದು ಸುಸ್ತಾಗಿ ಮನೆಗೆ ಮರಳಬೇಕಾಯಿತು. ಈಗಷ್ಟೇ ಮಳೆಯಾಗಿದೆ. ಯೂರಿಯಾ ರಸಗೊಬ್ಬರ ಹಾಕಲೇಬೇಕು. ಇಲ್ಲದಿದ್ದರೆ ಬೆಳೆ ಚೆನ್ನಾಗಿ ಬರುವುದಿಲ್ಲ ಎಂದು ರೈತರು ಅಳಲು ತೋಡಿಕೊಂಡರು.
ಮಾರುಕಟ್ಟೆಯಲ್ಲಿಯೂ ಯೂರಿಯಾ ರಸಗೊಬ್ಬರ ಬಹಿರಂಗವಾಗಿ ಸಿಗುತ್ತಿಲ್ಲ. ಆದರೆ, ದೊಡ್ಡವರಿಗೆ ಮಾತ್ರ ಸಿಗುತ್ತದೆ. ಇಲ್ಲವೇ ಕಾಳಸಂತೆಯಲ್ಲಿ ದುಪ್ಪಟ್ಟು ದರಕ್ಕೆ ಸಿಗುತ್ತದೆ. ಅಷ್ಟೊಂದು ದುಡ್ಡು ಕೊಟ್ಟು ನಮಗೆ ಖರೀದಿಸಲು ಸಾಧ್ಯವೇ ಇಲ್ಲ ಎಂದು ರೈತರು ಹೇಳಿದರು. ಗೊಬ್ಬರ ಖರೀದಿಗೆ ಬಂದಿದ್ದ ರೈತರು ಟಿಎಪಿಎಂಎಸ್ ಮಳಿಗೆ ಎದುರು ಗಂಟೆಗಟ್ಟಲೇ ಕಾದು, ಸಕಾಲಕ್ಕೆ ರಸಗೊಬ್ಬರ ಪೂರೈಸದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ಅಭಾವ:
ಯೂರಿಯಾ ರಸಗೊಬ್ಬರ ಕೊಪ್ಪಳ ಸೇರಿದಂತೆ ಜಿಲ್ಲಾದ್ಯಂತ ಅಭಾವ ಎದುರಾಗಿದೆ. ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಗಂಗಾವತಿ, ಕಾರಟಗಿ ಸೇರಿದಂತೆ ಅನೇಕ ಕಡೆ ಯೂರಿಯಾ ರಸಗೊಬ್ಬರ ಖರೀದಿಗಾಗಿ ಬಂದಿದ್ದ ರೈತರು ನೋ ಸ್ಟಾಕ್ ಬೋರ್ಡ್ ನೋಡಿ ತೆರಳಿದ್ದಾರೆ.
ನ್ಯಾನೋ ಯೂರಿಯಾ ಬಳಸಿ:
ರೈತರು ಯೂರಿಯಾ ರಸಗೊಬ್ಬರ ಕೇಳುತ್ತಿದ್ದರೆ ಕೃಷಿ ಇಲಾಖೆ ನ್ಯಾನೋ ಯೂರಿಯಾ ಬಳಕೆ ಮಾಡಿ ಎಂದು ಜಾಗೃತಿ ಮೂಡಿಸುತ್ತಿದೆ. ಯೂರಿಯಾ ರಸಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ. ಹೀಗಾಗಿ, ನ್ಯಾನೋ ಯೂರಿಯಾ ಬಳಕೆ ಮಾಡುವಂತೆ ಕೃಷಿ ಇಲಾಖೆ ಜಿಲ್ಲಾದ್ಯಂತ ಜಾಗೃತಿ ಅಭಿಯಾನ ಪ್ರಾರಂಭಿಸಿದೆ. ಯೂರಿಯಾ ರಸಗೊಬ್ಬರವನ್ನು ಮಿತಿಯಲ್ಲಿ ಬಳಕೆ ಮಾಡಬೇಕು. ಅದನ್ನು ಹಂತ-ಹಂತವಾಗಿ ಕೈಬಿಡಬೇಕಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಸಹ ಜಾಗೃತಿ ಮೂಡಿಸಿದ್ದು, ರೈತರು ನ್ಯಾನೋ ಯೂರಿಯಾ ಬಳಕೆ ಮಾಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳು ಮನವಿ ಮಾಡುತ್ತಿದ್ದಾರೆ.ಯೂರಿಯಾ ರಸಗೊಬ್ಬರ ಅಗತ್ಯವಿರುವಷ್ಟು ಪೂರೈಕೆ ಮಾಡಲಾಗಿದ್ದು ಕೊರತೆ ಸರಿಪಡಿಸಲಾಗುವುದು. ನ್ಯಾನೋ ಯೂರಿಯಾ ರಸಗೊಬ್ಬರ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ರೈತರು ಬಳಸುವಂತೆ ಮನವಿ ಮಾಡುತ್ತಿದ್ದೇವೆ.
ಟಿ. ರುದ್ರೇಶಪ್ಪ ಜೆ.ಡಿ. ಕೃಷಿ ಇಲಾಖೆ ಕೊಪ್ಪಳ