ಸೋಮರಡ್ಡಿ ಅಳವಂಡಿ
ರಾಜ್ಯಾದ್ಯಂತ ಯೂರಿಯಾ ರಸಗೊಬ್ಬರಕ್ಕಾಗಿ ಪರದಾಟ ನಡೆದಿರುವ ಬೆನ್ನಲ್ಲೇ ರೈತರ ಹೆಸರಿನಲ್ಲಿ ಯೂರಿಯಾವನ್ನು ಲೂಟಿ ಹೊಡೆಯಲಾಗಿರುವ ವದಂತಿ ದಟ್ಟವಾಗಿದೆ. ರೈತರ ಆಧಾರ್ ಕಾರ್ಡ್‌ಗೆ ಯೂರಿಯಾ ವಿತರಣೆಯಾಗಿರುವ ಲೆಕ್ಕಚಾರವೇ ಈ ಅನುಮಾನಕ್ಕೆ ಕಾರಣವಾಗಿದೆ.
ಹೌದು, ರೈತರಿಗೆ ಬೇಕಾಗಿದ್ದು ನಾಲ್ಕಾರು ಚೀಲವಾಗಿದ್ದರೂ, ಅದೇ ಆಧಾರ್ ಕಾರ್ಡ್‌ನಲ್ಲಿ 50 ಚೀಲದ ವರೆಗೂ ರಸಗೊಬ್ಬರ ಪಡೆಯಲಾಗಿದೆ ಎನ್ನುವುದೇ ಅನುಮಾನಕ್ಕೆ ಕಾರಣವಾಗಿದೆ.ಕೊಪ್ಪಳ ಜಿಲ್ಲೆಯೊಂದರಲ್ಲಿಯೇ 1,36,550 ರೈತರು 7,16,230 ಯೂರಿಯಾ ರಸಗೊಬ್ಬರ ಪಡೆದಿದ್ದಾರೆ. ಆದರೆ, ಇದರಲ್ಲಿ ಬಹುತೇಕ ರೈತರ ಹೆಸರಿನ ಆಧಾರ್ ಕಾರ್ಡ್‌ನಲ್ಲಿ 50 ಚೀಲಗಳಷ್ಟು ಯೂರಿಯಾ ರಸಗೊಬ್ಬರವನ್ನು ಖರ್ಚು ಹಾಕಲಾಗಿದೆ.
30ರಿಂದ 50 ಚೀಲ್ ರೈತರ ಆಧಾರ್ ಕಾರ್ಡ್‌ಗೆ ಯೂರಿಯಾ ಬಳಕೆಯ ಖರ್ಚು ಬಿದ್ದಿರುವ ರೈತರನ್ನು ಪರಿಶೀಲನಗೆ ಒಳಪಡಿಸಿದರೆ ಇದರ ಬಣ್ಣ ಬಯಲಾಗುತ್ತದೆ. ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಅಧಿಕ ಯೂರಿಯಾ ರಸಗೊಬ್ಬರವನ್ನು ಏಪ್ರಿಲ್‌ನಿಂದ ಜುಲೈ ಅಂತ್ಯದ ವರೆಗೂ ವಿತರಿಸಿದ ಲೆಕ್ಕಚಾರವಿದೆ. ಆದರೂ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಮಾತ್ರ ಪರಿತಪಿಸುತ್ತಲೇ ಇದ್ದಾರೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿಯೇ ಬರೋಬ್ಬರಿ 32 ಸಾವಿರ ಟನ್ ಯೂರಿಯಾ ರಸಗೊಬ್ಬರ ಮಾರಾಟವಾಗಿದೆ. ಇದು ಈ ಹಿಂದಿನ ಎಲ್ಲ ವರ್ಷಗಳ ದಾಖಲೆ ಮೀರಿದೆ.
ಜಿಲ್ಲೆಯಲ್ಲಿ ಯೂರಿಯಾ ಸಮಸ್ಯೆ ಕುರಿತು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳೇ ಈ ಅನುಮಾನ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಯೂರಿಯಾ ಖರೀದಿಸಿರುವ ಆಧಾರ್ ಕಾರ್ಡ್ ಮಾಹಿತಿಯನ್ನು ಬೆನ್ನಟ್ಟಿದ್ದಾರೆ.
ರಸಗೊಬ್ಬರ ಅಕ್ರಮ ತಡೆಯಲು ಖರೀದಿಗೆ ರೈತರ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಆಧಾರ್ ಸಂಖ್ಯೆ ನೋಂದಾಯಿಸಿದ ಬಳಿಕ ರೈತರ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಇದರ ಆಧಾರದಲ್ಲಿಯೇ ಹಂಚಿಕೆ ಮಾಡಲಾಗುತ್ತದೆ. ಆದರೆ, ಅಂಗಡಿ ಮಾಲೀಕರು ಮಾತ್ರ ಹೆಚ್ಚುವರಿ ಚೀಲ ನಮೂದಿಸಿ ರೈತರಿಂದ ಒಟಿಪಿ ಪಡೆದಿದ್ದಾರೆ. ಹೀಗಾಗಿಯೇ ಯೂರಿಯಾ ಸಮಸ್ಯೆಗೂ ಕಾರಣವಾಗಿದೆ ಎನ್ನಲಾಗುತ್ತದೆ.