ಕೊಪ್ಪಳ:
ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು ಬುಧವಾರ ನಗರದ ಟಿಎಪಿಎಂಸಿಯಲ್ಲಿ ಯೂರಿಯಾ ಖರೀದಿಗೆ ಮುಂಗಡ ಚೀಟಿ ಪಡೆಯಲು ರೈತರು ಮುಗಿ ಬಿದ್ದಿದ್ದರಿಂದ ಭಾರೀ ಗದ್ದಲ ಉಂಟಾಯಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.ಗುರುವಾರ ಬರಬಹುದಾದ ಯೂರಿಯಾ ರಸಗೊಬ್ಬರಕ್ಕೆ ಟಿಎಪಿಎಂಎಸ್‌ನಲ್ಲಿ ಬುಧವಾರ ಚೀಟಿ ವಿತರಿಸುತ್ತಾರೆಂಬ ಮಾಹಿತಿ ಅರಿತ ರೈತರು ಹಳ್ಳಿಯಿಂದ ತಂಡೋಪತಂಡವಾಗಿ ಆಗಮಿಸಿದ್ದರಿಂದ ಭಾರಿ ಗದ್ದಲವೇ ಉಂಟಾಯಿತು. ಟಿಎಪಿಎಂಎಸ್ ಎದುರಿಗೆ ಕಿಲೋಮೀಟರ್ ಗಟ್ಟಲೇ ಸರತಿ ನಿಂತಿದ್ದರಿಂದ ಪರಸ್ಪರ ನೂಗಾಟ, ತಳ್ಳಾಟ ನಡೆಯಿತು. ಈ ವೇಳೆ ರೈತರು ಪರಸ್ಪರ ಕೈಕೈ ಮಿಲಾಯಿಸುವಂತಾಯಿತು. ಸ್ಥಳದಲ್ಲಿದ್ದ ಕೆಲವೇ ಕೆಲವು ಪೊಲೀಸರು ರೈತರನ್ನು ನಿಯಂತ್ರಿಸುವುದು ಸಾಧ್ಯವಾಗಲಿಲ್ಲ. ಆಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ತಕ್ಷಣ ಸ್ಥಳಕ್ಕೆ ಎಸ್ಪಿ ಡಾ. ರಾಮ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಎಸಿ ಕ್ಯಾ. ಮಹೇಶ ಮಾಲಗಿತ್ತಿ ಸೇರಿದಂತೆ ಅನೇಕ ಅಧಿಕಾರಿಗಳ ಆಗಮಿಸಿದರು. ಬ್ಯಾರಿಕೇಡ್‌ಗಳನ್ನು ತಂದು ಅದನ್ನು ಅಲ್ಲಲ್ಲಿ ಇಟ್ಟು ರೈತರು ಸರತಿಯಲ್ಲಿ ಸರಾಗವಾಗಿ ನಿಲ್ಲಲು ಅವಕಾಶ ಮಾಡಿಕೊಟ್ಟರು.
ವಾಗ್ವಾದ:ರೈತರು ಸರತಿಯಲ್ಲಿ ನಿಲ್ಲುವ ವೇಳೆ ಉಂಟಾದ ಗದ್ದಲದಲ್ಲಿ ಅಧಿಕಾರಿಗಳು ಮತ್ತು ರೈತರ ನಡುವೆ ವಾಗ್ವಾದವಾಯಿತು. ಪೊಲೀಸರು ನಿಯಂತ್ರಣ ಮಾಡಲು ಹರಸಾಹಸ ಮಾಡಬೇಕಾಯಿತು. ಕೊಪ್ಪಳ ನಗರದ ಟಿಎಪಿಎಂಎಸ್ ಎದುರಿಗೆ ಸೇರಿದ್ದ ರೈತ ಸಮುದಾಯ ಸರ್ಕಾರದ ವಿರುದ್ಧ ಘೋಷಣೆ ಕೂಗಿತು. ಯೂರಿಯಾ ರಸಗೊಬ್ಬರ ಕೊಡಿ, ರೈತರ ಬೆಳೆ ಉಳಿಸಿ ಎಂದು ಘೋಷಣೆ ಕೂಗಿದರು.
ಇಂದು ಬರುವ ಗೊಬ್ಬರಕ್ಕೆ ನಿನ್ನೆ ಸರದಿ:ಬರುವ ಅಲ್ವಸ್ಪಲ್ಪ ಯೂರಿಯಾ ರಸಗೊಬ್ಬರ ವಿತರಿಸುವುದು ದೊಡ್ಡ ಸವಾಲಾಗಿದೆ. 500ರಿಂದ 600 ಚೀಲ ಯೂರಿಯಾ ರಸಗೊಬ್ಬರ ಬಂದರೆ ಸಾವಿರಾರು ಸಂಖ್ಯೆಯಲ್ಲಿ ಬರುವ ರೈತರಿಗೆ ಅದನ್ನು ವಿತರಿಸಲು ಆಗುವುದಿಲ್ಲ. ಹೀಗಾಗಿ ಪರದಾಡುವಂತೆ ಆಗುತ್ತದೆ. ಇದನ್ನು ನಿಯಂತ್ರಣ ಮಾಡಲು ಯೂರಿಯಾ ರಸಗೊಬ್ಬರ ಬರುವ ಮುನ್ನವೇ ರೈತರಿಗೆ ಚೀಟಿ ನೀಡಲಾಗುತ್ತದೆ. ಆ. 21ರಂದು ಬರಬಹುದಾದ ಯೂರಿಯಾ ರಸಗೊಬ್ಬರಕ್ಕೆ ಬುಧವಾರ ಚೀಟಿ ವಿತರಿಸಲಾಯಿತು. ಗೊಬ್ಬರ ಚೀಟಿ ಪಡೆಯವುದಕ್ಕಾಗಿಯೇ ರೈತರು ಪರದಾಡಿದರು.
ರೈತರ ಆಕ್ರೋಶ:ಯೂರಿಯಾ ರಸಗೊಬ್ಬರ ಇಲ್ಲದೆ ಮಳೆಯಿಂದ ತೇವಾಂಶ ಹೆಚ್ಚಳವಾಗಿ ಬೆಳೆಗಳು ಬೆಳ್ಳಗಾಗುತ್ತಿವೆ. ಪ್ರತಿ ಬಾರಿಯೂ ಕೆಲವೇ ಕೆಲವು ರೈತರಿಗೆ ಮಾತ್ರ ಯೂರಿಯಾ ರಸಗೊಬ್ಬರ ಸಿಗುತ್ತದೆ. ಎಲ್ಲರಿಗೂ ಸಾಕಾಗುವಷ್ಟು ಯೂರಿಯಾ ರಸಗೊಬ್ಬರ ಏಕೆ ವಿತರಿಸುತ್ತಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.