ಗದಗ: ಡಾ. ಅಂಬೇಡ್ಕರ ಆಶಯದಂತೆ ಅಸ್ಪೃಶ್ಯ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕಾದರೆ ಸುಪ್ರೀಂಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟದಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ನ್ಯಾಯದ ಅಸ್ಮಿತೆಯಾದ ನ್ಯಾ. ಸದಾಶಿವ ಆಯೋಗದ ವರದಿ ಅಂಗೀಕರಿಸದೆ ಅಥವಾ ತಿರಸ್ಕರಿಸದೆ ಅತಂತ್ರ ಸ್ಥಿತಿಯಲ್ಲಿಟ್ಟು ಒಳಮೀಸಲಾತಿ ವರ್ಗೀಕರಣ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವುದನ್ನು ಒಕ್ಕೂಟವು ಖಂಡಿಸುತ್ತದೆ. ಇಲ್ಲಿಯವರೆಗೂ ನಮ್ಮನ್ನು ಆಳಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸರ್ಕಾರಗಳು ಚುನಾವಣೆಗೆ ಬಂದಾಗ ನಿಮಗೆ ನ್ಯಾಯ ಕೊಡಿಸುತ್ತೇವೆ ಎಂದು ಹೇಳಿ ತಮ್ಮ ಸಮುದಾಯಗಳ ಮತ ಪಡೆದುಕೊಂಡು ನಮ್ಮನ್ನು ಮರೆತುಬಿಡುತ್ತಾ ಬಂದಿರುತ್ತಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಚುನಾವಣೆಯಲ್ಲಿ ಒಳಮೀಸಲಾತಿ ಜಾರಿಗೆ ಮಾಡಲಾಗುವುದು ಎಂಬ ಭರವಸೆ ನೀಡಿದ್ದರಿಂದ ಎಲ್ಲ ಅಸ್ಪೃಶ್ಯ ಜನಾಂಗದವರು ಕಾಂಗ್ರೆಸ್ ಗೆ ಮತ ನೀಡಿ ಬಹುಮತ ಸರ್ಕಾರ ಬಂದಿದೆ. ಆದರೂ ರಾಜ್ಯ ಸರ್ಕಾರ ಇನ್ನೂವರೆಗೂ ಜಾರಿಗೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ ಆದೇಶದಂತೆ ಸೂಕ್ತ ದತ್ತಾಂಶ ಪರಿಗಣಿಸಿ ವಿಳಂಬ ನೀತಿ ಅನುಸರಿಸದೆ ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿಗೊಳಿಸಬೇಕು. ನ್ಯಾ.ನಾಗಮೋಹನ ದಾಸರವರ ಸಮಿತಿಗೆ ಈ ಹಿಂದೆ 7 ವರ್ಷಗಳ ಕಾಲ ಅಧ್ಯಯನ ನಡೆಸಿದ ನ್ಯಾ ಎ.ಜೆ. ಸದಾಶಿವರವರ ಆಯೋಗದ ದತ್ತಾಂಶಗಳಿರುವ ವರದಿ ಶಿಫಾರಸ್ಸುಗಳನ್ನು ಬಳಸಿಕೊಂಡು ವರದಿ ತಯಾರಿಸಲು ಸರ್ಕಾರ ಆದೇಶ ನೀಡಬೇಕೆಂದು ಒತ್ತಾಯಿಸಿದರು.ಸಮಾಜ ಕಲ್ಯಾಣ ಇಲಾಖೆ ಬಜೆಟ್‌ನಲ್ಲಿ ಮತ್ತು ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನದಲ್ಲಿ ಮಾದಿಗ, ಸಮಗಾರ, ಡೋಹರ, ಮಚಗಾರ ಜಾತಿಗಳ ಜನಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕವಾಗಿ ಅನುದಾನ ಮೀಸಲಿಟ್ಟು ಅದೇ ವರ್ಷ ವೆಚ್ಚ ಮಾಡಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಮನವಿಯಲ್ಲಿ ತಿಳಿಸಿದರು.
ಈ ವೇಳೆ ಮುಖಂಡರಾದ ಅಶೋಕ ಕುಡತಿನ್ನಿ, ಡಿ.ಜಿ.ಕಟ್ಟಿಮನಿ, ರಾಘವೇಂದ್ರ ಪರಸಪ್ಪ ಪರಾಪೂರ, ಗಣೇಶ ಹುಬ್ಬಳ್ಳಿ, ಮಂಜು ಬುರಡಿ, ಮಂಜುನಾಥ ಗಜಕೋಶ, ಮಾರುತಿ ಗುಡಿಮನಿ, ಯಮನೂರಪ್ಪ ಹರಿಜನ, ಯಮನೂರಪ್ಪ ಅಬ್ಬಿಗೇರಿ, ಉಮೇಶ ಪೂಜಾರ, ಚಂದ್ರಶೇಖರ ಕೋಟ್ನಿಕಲ್, ಪೂಜಾ ಎಂ.ಬೇವೂರ, ಯಲ್ಲಪ್ಪ ಮಾದರ, ಚಂದ್ರು ಮಾದರ, ಬಸವಂತ ಕಡಕೋಳ,ರಾಮು ಪಿ.ಬಳ್ಳಾರಿ, ಪ್ರವೀಣ ತೆಗ್ಗಿನಮನಿ, ಪ್ರಕಾಶ ಕೇಲೂರ ಸೇರಿದಂತೆ ಮುಂತಾದವರು ಇದ್ದರು.