ಮೈಕ್ರೋ ಫೈನಾನ್ಸ್ ಕಂಪನಿಗಳು ಗೂಂಡಾಗಳ ಮೂಲಕ ಸಾಲ ವಸೂಲಾತಿ ನೆಪದಲ್ಲಿ ಬಡವರ ಮೇಲೆ ದಬ್ಬಾಳಿಕೆ ಅಥವಾ ಶೋಷಣೆ ಮಾಡಿದರೆ ನಮ್ಮ ಸರ್ಕಾರ ಸುಮ್ಮನಿರಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಮೈಕ್ರೋ ಫೈನಾನ್ಸ್ ಕಂಪನಿಗಳು ಗೂಂಡಾಗಳ ಮೂಲಕ ಸಾಲ ವಸೂಲಾತಿ ನೆಪದಲ್ಲಿ ಬಡವರ ಮೇಲೆ ದಬ್ಬಾಳಿಕೆ ಅಥವಾ ಶೋಷಣೆ ಮಾಡಿದರೆ ನಮ್ಮ ಸರ್ಕಾರ ಸುಮ್ಮನಿರಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದರು.ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಮಾರುತಿ ಕುಟುಂಬಸ್ಥರಿಗೆ ಧೈರ್ಯ ತುಂಬಿ ೫೦ಸಾವಿರ ವೈಯಕ್ತಿಕ ಧನ ಸಹಾಯ ಮಾಡಿ ಮಾತನಾಡಿದರು.ರಾಜ್ಯದಲ್ಲಿ ಲಕ್ಷಾಂತರ ಜನರಿಗೆ ಫೈನಾನ್ಸ್ ಕಂಪನಿಯವರು ಸಾಲ ನೀಡಿದ್ದಾರೆ. ವಸೂಲಿ ಮಾಡುವಾಗ ಗೂಂಡಾಗಳನ್ನು ಕಳಿಸುವುದು, ಮನೆಗೆ ಬೀಗ ಹಾಕಿ ಬೈಯ್ಯುವುದು, ನಾಮಫಲಕ ಹಾಕುವುದು, ಹಲ್ಲೆ ನಡೆಸುವುದು ಸೇರಿದಂತೆ ವಿವಿಧ ರೀತಿಯ ಕಿರುಕುಳ ನೀಡಿರುವುದು ನಮ್ಮ ಸರ್ಕಾರದ ಗಮನಕ್ಕೆ ಬಂದಿದೆ. ಸಿಎಂ ಸಹ ಈ ವಿಚಾರವನ್ನು ಗಂಭೀರವಾಗಿ ಪರಿಗಣನೆ ಮಾಡಿದ್ದಾರೆ ಎಂದರು. ಸಿಎಂ ಸಿದ್ದರಾಮಯ್ಯ ಸಲಹೆಯಂತೆ ಕಂದಾಯ, ಸಹಕಾರಿ ಮತ್ತು ಗೃಹ ಸಚಿವಾಲಯ ಪ್ರಕರಣಗಳನ್ನು ಅತಿ ಸೂಕ್ಷ್ಮವಾಗಿ ಪರಿಗಣಿಸಿ ಹೊಸ ಕಾನೂನು ರಚಿಸಲು ಮುಂದಾಗಿದ್ದೇವೆ. ಕಾನೂನು ಬಾಹಿರವಾಗಿ ಹಣ ವಸೂಲಿ ಮಾಡಿದರೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಡಿಸಿ ಮತ್ತು ಎಸ್ಪಿಗಳ ಮೂಲಕ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದರು.ಕುರಂಕೋಟೆಯ ಮಾರುತಿಗೆ 2.5 ಲಕ್ಷ ಸಾಲ ನೀಡಿ ಆತನಿಂದ 4.5 ಲಕ್ಷ ಹಣ ವಸೂಲಿ ಮಾಡಲಾಗಿದೆ. ನಂತರವು ಕಿರುಕುಳ ನೀಡಿ ಮನೆಗೆ ಬೀಗ ಹಾಕಿ ಅಡಮಾನದ ಗೋಡೆ ಬರಹ ಬರೆದು ಅವಮಾನ ಮಾಡಿ ಮನೆಯ ಪತ್ರ ಪಡೆದಿದ್ದಾರೆ. ವ್ಯವಸ್ಥಾಪಕ ಮತ್ತು ಮೇಲ್ವಿಚಾರಕನ ಮೇಲೆ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ವಿಚಾರ ಸರ್ಕಾರದ ಗಮನದಲ್ಲಿದೆ ಎಂದರು.ಈ ವೇಳೆ ತುಮಕೂರು ಜಿಪಂ ಸಿಇಒ ಡಾ.ಜಿ. ಪ್ರಭು, ಎಸ್ಪಿ ಕೆ.ವಿ.ಅಶೋಕ್, ಮಧುಗಿರಿ ಎಸಿ ಕೊಟ್ಟೋರು ಶಿವಪ್ಪ, ಕೊರಟಗೆರೆ ತಹಸೀಲ್ದಾರ್ ಮಂಜುನಾಥ, ಕೆ, ಸಿಪಿಐ ಅನಿಲ್, ಪಿಎಸೈ ಚೇತನ್ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.