ಕನ್ನಡಪ್ರಭ ವಾರ್ತೆ ಖಾನಾಪುರ
ತಾಲೂಕಿನ ಶೇಡೇಗಾಳಿ ತೋಟಗಾರಿಕೆ ಕ್ಷೇತ್ರಕ್ಕೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಹಾಗೂ ಖಾನಾಪುರ ತಾಪಂ ಇ.ಒ. ದಿನೇಶಕುಮಾರ ಮೀನಾ ಗುರುವಾರ ಭೇಟಿ ನೀಡಿದರು.ತೋಟಗಾರಿಕೆ ಕ್ಷೇತ್ರದಲ್ಲಿ ಮಂತುರ್ಗಾ ಗ್ರಾಮ ಪಂಚಾಯಿತಿ ವತಿಯಿಂದ ಮನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ವೀಕ್ಷಿಸಿದ ಅವರು, ಬಳಿಕ ಅಧಿಕಾರಿಗಳಿಂದ ಕ್ಷೇತ್ರದ ಕುರಿತು ಮಾಹಿತಿ ಪಡೆದರು.
ತೋಟಗಾರಿಕೆ ಕ್ಷೇತ್ರದ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಮಾತನಾಡಿ, ಕ್ಷೇತ್ರದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು, ಹೊಸ ತಳಿಗಳ ಸಸಿಗಳನ್ನು ಅಚ್ಚುಕಟ್ಟಾಗಿ ಬೆಳೆಸಲಾಗಿದೆ. ರೈತರಿಗೆ ವಿತರಿಸಲು ವಿವಿಧ ತೋಟಗಾರಿಕೆ ಸಸಿಗಳನ್ನು ಸಿದ್ಧಪಡಿಸಲಾಗಿದೆ. ಎರೆಹುಳು ಗೊಬ್ಬರ ಘಟಕ, ಜೇನು ಪೆಟ್ಟಿಗೆ, ಗ್ರೀನ್ ಹೌಸ್, ಪಾಲಿ ಹೌಸ್ ಗಳಲ್ಲಿ ಸುಧಾರಿತ ಪದ್ಧತಿಯಡಿ ವಿವಿಧ ಬೆಳೆ ಬೆಳೆಸಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಇದನ್ನು ಮಾದರಿ ತರಬೇತಿ ಘಟಕವನ್ನಾಗಿಸಲು ಪ್ರಸ್ತಾವನೆ ನೀಡಲಾಗಿದೆ. ಕ್ಷೇತ್ರದಲ್ಲಿ ಕೈಗೊಂಡ ಕೆಲಸಗಳ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.ಬಳಿಕ ಮಾತನಾಡಿದ ದಿನೇಶಕುಮಾರ ಮೀನಾ, ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿಯಿಂದ ಶೇಡೇಗಾಳಿ ತೋಟಗಾರಿಕಾ ಕ್ಷೇತ್ರದವರೆಗಿನ ಸಂಪರ್ಕ ರಸ್ತೆ ದುರಸ್ತಿ, ಕ್ಷೇತ್ರದಲ್ಲಿರುವ ಅಮೃತ ಸರೋವರ ಕೆರೆ ಅಭಿವೃದ್ಧಿ ಸೇರಿದಂತೆ ಮನರೇಗಾ ಯೋಜನೆಯಡಿ ಅಗತ್ಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ ತೋಟಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನ ಮಾಡಲಾಗುವುದು. ಈ ಕ್ಷೇತ್ರಕ್ಕೆ ಅಗತ್ಯವಿರುವ ಸೌಲಭ್ಯ ಒದಗಿಸಲು ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದು. ಶೇಡೇಗಾಳಿ ತೋಟಗಾರಿಕಾ ಕ್ಷೇತ್ರವನ್ನು ಖುದ್ದಾಗಿ ವೀಕ್ಷಿಸಿದ್ದು, ಕ್ಷೇತ್ರದ ನಿರ್ವಹಣೆ ತೃಪ್ತಿಕರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕಿ ರೂಪಾಲಿ ಬಡಕುಂದ್ರಿ, ವಿಜಯಕುಮಾರ ಕೋತಿನ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಿರಣ ಉಪಾಳೆ, ಮಂತುರ್ಗಾ ಗ್ರಾಪಂ ಪಿಡಿಒ ದೀಪಾ ಕರವೀರನವರ ಹಾಗೂ ಇತರರು ಇದ್ದರು.