ಡಾ.ವೀಣಾ ಶಾಂತೇಶ್ವರ, ಪ್ರೊ. ಎಸ್‌.ಜಿ. ಸಿದ್ದರಾಮಯ್ಯಗೆ ಅಂಬಿಕಾತಯನದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Feb 01, 2025, 12:03 AM IST
31ಡಿಡಬ್ಲೂಡಿ13ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ದ.ರಾ. ಬೇಂದ್ರೆ ಅವರ 129ನೇ ಜನ್ಮದಿನದ ಅಂಗವಾಗಿ ಡಾ.ವೀಣಾ ಶಾಂತೇಶ್ವರ ಹಾಗೂ ಪ್ರೊ.ಎಸ್‌.ಜಿ. ಸಿದ್ದರಾಮಯ್ಯನವರಿಗೆ ಧಾರವಾಡದಲ್ಲಿ ಅಂಬಿಕಾತಯನದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಪ್ರಸ್ತುತ ಸಂದರ್ಭದಲ್ಲಿ ಬೇಂದ್ರೆ ಮರುಕಳಿಕೆ ಆಗಲು ಬೇಂದ್ರೆ ಟ್ರಸ್ಟ್‌ ಅವರ ಮೂಲ ಕೃತಿಗಳನ್ನು ಪ್ರಕಟಿಸಬೇಕು. ಜತೆಗೆ ಬೇರೆ ಬೇರೆ ಭಾಷೆಗಳಿಗೂ ಬೇಂದ್ರೆ ಮತ್ತಷ್ಟು ಹೆಚ್ಚು ಪರಿಚಿತವಾಗಲು ಅವರ ಕೆಲವಾದರೂ ಕಾವ್ಯಗಳು ಅನುವಾದ ಆಗುವ ರೀತಿಯಲ್ಲಿ ಟ್ರಸ್ಟ್‌ ಪ್ರಯತ್ನಿಸಬೇಕು.

ಧಾರವಾಡ:

ಕುವೆಂಪು ಅವರ ಎಲ್ಲ ಕೃತಿಗಳು ಪ್ರಕಟಣೆ ಆಗಿರುವ ರೀತಿಯಲ್ಲಿ ವರಕವಿ ಡಾ. ದ.ರಾ. ಬೇಂದ್ರೆ ಅವರ ಮೂಲಕೃತಿಗಳು ಪ್ರಕಟಣೆಯಾಗುವ ಮೂಲಕ ಸಾರ್ವಜನಿಕರಿಗೆ ಮುಕ್ತವಾಗಬೇಕು ಎಂದು ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.

ಬೇಂದ್ರೆ ಅವರ 129ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಸಾಧನಕೇರಿಯ ಬೇಂದ್ರೆ ಭವನದಲ್ಲಿ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವತಿಯಿಂದ ಡಾ. ವೀಣಾ ಶಾಂತೇಶ್ವರ ಹಾಗೂ ಪ್ರೊ. ಎಸ್‌.ಜಿ. ಸಿದ್ದರಾಮಯ್ಯನವರಿಗೆ ಅಂಬಿಕಾತಯನದತ್ತ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಬೇಂದ್ರೆ ಮರುಕಳಿಕೆ ಆಗಲು ಬೇಂದ್ರೆ ಟ್ರಸ್ಟ್‌ ಅವರ ಮೂಲ ಕೃತಿಗಳನ್ನು ಪ್ರಕಟಿಸಬೇಕು. ಜತೆಗೆ ಬೇರೆ ಬೇರೆ ಭಾಷೆಗಳಿಗೂ ಬೇಂದ್ರೆ ಮತ್ತಷ್ಟು ಹೆಚ್ಚು ಪರಿಚಿತವಾಗಲು ಅವರ ಕೆಲವಾದರೂ ಕಾವ್ಯಗಳು ಅನುವಾದ ಆಗುವ ರೀತಿಯಲ್ಲಿ ಟ್ರಸ್ಟ್‌ ಪ್ರಯತ್ನಿಸಬೇಕು. ಜತೆಗೆ ಆಕಾಶವಾಣಿಯಲ್ಲಿ ಬೇಂದ್ರೆ ಧ್ವನಿ ಇದ್ದು ಧ್ವನಿಮುದ್ರಿಕೆಯನ್ನು ಸಿಡಿ ರೂಪದಲ್ಲಿ ಟ್ರಸ್ಟ್‌ ಹೊರ ತರಬೇಕು. ಹಂಪಿ ವಿಶ್ವವಿದ್ಯಾಲಯವು ಕುವೆಂಪು ಅವರ ಎಲ್ಲ ಕೃತಿಗಳನ್ನು ಪ್ರಕಟಿಸಿದ್ದು, ಬೇಂದ್ರೆ ಹೆಸರಿನಲ್ಲಿ ಸ್ಥಾಪಿತ ಸರ್ಕಾರದ ಟ್ರಸ್ಟ್‌ಗೆ ಯಾವ ಪರವಾನಗಿ ಬೇಕು ಎಂದು ಪ್ರಶ್ನಿಸಿದರು.

ಹೊರಗೂ ಪರಿಚಿತವಾಗಲಿ:

ಬೇಂದ್ರೆ ಅವರನ್ನು ನಾಡಿನ ಹೊರಗೂ ಪರಿಚಯಿಸಲು ಡಾ. ಎಂ.ಎಂ. ಕಲಬುರ್ಗಿ ಅವರು ಅಧ್ಯಕ್ಷರಿದ್ದಾಗ ಬೇಂದ್ರೆ ಹೆಸರಿನ ಪ್ರಶಸ್ತಿಯನ್ನು ಬಂಗಾಲಿ ಸಾಹಿತಿಗೆ ನೀಡಿದ್ದರು. ಅದೇ ರೀತಿ ಸದ್ಯ ಕುವೆಂಪು ಪ್ರತಿಷ್ಠಾನ ಪ್ರತಿ ವರ್ಷ ಬೇರೆ ಭಾಷೆಯ ಸಾಹಿತಿ, ಲೇಖಕಕರಿಗೆ ಕುವೆಂಪು ಗೌರವ ಸಲ್ಲಿಸುತ್ತಿದ್ದು, ಇದೇ ಮಾದರಿಯನ್ನು ಬೆಂದ್ರೆ ಟ್ರಸ್ಟ್‌ ಏತಕ್ಕೆ ಮಾಡಬಾರದು? ಎಂದು ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರಶ್ನಿಸಿದರು.

ಮೊದಲ ಮಹಿಳೆ:

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಥೆಗಾರ್ತಿ ಡಾ. ವೀಣಾ ಶಾಂತೇಶ್ವರ, ಬೇಂದ್ರೆ ಅವರು ಕನ್ನಡದ ಸತ್ವ-ಸಾಧ್ಯತೆ, ಹಿರಿಮೆಯನ್ನು ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸಿದ್ದು ಮಹತ್ವದ ಕೊಡುಗೆ. ಕನ್ನಡಕ್ಕೆ ಮಾತ್ರ ಮನಸ್ಸಿನ ಎಲ್ಲ ಹಸಿವೆ, ಬಾಯಾರಿಕೆ ತೃಪ್ತಿ ಪಡೆಸುವ ಸಾಮರ್ಥ್ಯ ಇದೆ ಎಂದು ಬೇಂದ್ರೆ ಹೇಳುತ್ತಿದ್ದರು. ಕವಿ ಗೋಪಾಲಕೃಷ್ಣ ಅಡಿಗ ಅವರು ಹೇಳುವಂತೆ, ಪಂಪ ಮತ್ತು ಕುಮಾರವ್ಯಾಸರ ನಂತರ ಕನ್ನಡದ ಬೇರೆ ಯಾವ ಕವಿಯೂ ಬೇಂದ್ರೆ ಅವರ ರೀತಿಯ ಕನ್ನಡ ಭಾಷೆಯ ಜೀವನಾಡಿಯ ಮಿಡಿತಕ್ಕೆ ಸ್ಪಂದಿಸುವ ರೀತಿ ಕಾವ್ಯ ರಚನೆ ಮಾಡಲಿಲ್ಲ. ಇಂತಹವರ ಹೆಸರಿನ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎನ್ನುವುದು ಖುಷಿಯ ಸಂಗತಿ ಎಂದರು. ಅಲ್ಲದೇ, ಬೇಂದ್ರೆ ಟ್ರಸ್ಟ್‌ ಕಾರ್ಯವ್ಯಾಪ್ತಿ ಇನ್ನೂ ವಿಸ್ತಾರವಾಗಲಿ ಎಂಬುದೇ ನನ್ನ ಆಶಯ ಎಂದರು.

ಪ್ರಶಸ್ತಿ ಪುರಸ್ಕೃತ ಇನ್ನೊರ್ವ ಸಾಹಿತಿ ಪ್ರೊ. ಎಸ್‌.ಜಿ. ಸಿದ್ದರಾಮಯ್ಯ, ಕುವೆಂಪು ಹಾಗೂ ಬೇಂದ್ರೆ ಅವರ ಕಾವ್ಯದ ಧಾರೆಯಲ್ಲಿಯೇ ಬೆಳೆದ ನನಗೆ ಇವರಿಬ್ಬರೂ ಪ್ರಜ್ಞಾಧಾರೆಯಾಗಿ ಕಾಣುತ್ತಾರೆ. ಇಬ್ಬರೂ ವ್ಯಕ್ತಿಯ ನೆಲಯ ಅನುಭವದಲ್ಲಿಯೇ ಸಾಹಿತ್ಯ ರಚಿಸಿದ್ದು ವಿಸ್ಮಯ. ಇಬ್ಬರೂ ನೆಲಕ್ಕಂಟಿದ ಅನುಭಾವದ ವಿಚಾರಗಳನ್ನು ಸಾಹಿತ್ಯದ ಮೂಲಕ ನೀಡಿದ್ದು ಹೆಮ್ಮೆ ಎಂದರು.

ಡಾ. ವೀಣಾ ಅವರ ಕುರಿತಾಗಿ ಡಾ. ಬಸವರಾಜ ಡೋಣೂರ ಹಾಗೂ ಪ್ರೊ. ಸಿದ್ದರಾಮಯ್ಯ ಕುರಿತಾಗಿ ಡಾ. ಎಚ್‌.ಬಿ. ಕೋಲ್ಕಾರ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ಕೆ.ಎಚ್‌. ಚೆನ್ನೂರ, ಮಲ್ಲಿಕಾರ್ಜುನ ಸೊಲಗಿ ವೇದಿಕೆ ಮೇಲಿದ್ದರು. ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದು 50 ವರ್ಷಗಳು ಕಳೆದವು. ಈ ಪ್ರಶಸ್ತಿ ಬರಲು ಕಾರಣವಾದ ನಾಕುತಂತಿ ಕೃತಿ ಪ್ರಕಟವಾಗಿ 60 ವರ್ಷಗಳಾಗಿವೆ. ಈ ನಿಟ್ಟಿನಲ್ಲಿ ಬೇಂದ್ರೆ ಟ್ರಸ್ಟ್‌ ಈ ವಿಷಯಗಳ ಕುರಿತು ಯೋಜನೆ ರೂಪಿಸಲಿ ಎಂದು ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!