ಗ್ರಾಮೀಣ ಅಂಚೆ ನೌಕರರ ಕಾಯಂ ಮಾಡುವಂತೆ ಒತ್ತಾಯ

KannadaprabhaNewsNetwork | Published : Oct 7, 2023 2:00 AM

ಸಾರಾಂಶ

ಕಮಲೇಶನ್ ಸಮಿತಿ ಶಿಫಾರಸ್ಸು ಮಾಡಿರುವ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಗುರುಮಠಕಲ್: ಗ್ರಾಮೀಣ ಅಂಚೆ ನೌಕರರನ್ನು ಕಾಯಂ ಮಾಡುವಂತೆ ಹಾಗೂ ಕಮಲೇಶನ್ ಸಮಿತಿ ಶಿಫಾರಸ್ಸು ಮಾಡಿರುವ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ (ಎಐಜಿಡಿಎಸ್‌ಯು) ವತಿಯಿಂದ ಗುರುಮಠಕಲ್ ಪಟ್ಟಣದ ಮುಖ್ಯ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಪಟ್ಟಣದಲ್ಲಿ ಗ್ರಾಮೀಣ ಅಂಚೆ ನೌಕರರು ಕೆಲಸಕ್ಕೆ ಹಾಜರಾಗದೆ ಮುಖ್ಯ ಅಂಚೆ ನೌಕರರ ಕಚೇರಿ ಮುಂದೆ ಪ್ರತಿಭಟನಾ ಮುಷ್ಕರ ನಡೆಸಿದರು. ಗ್ರಾಮೀಣ ಅಂಚೆ ನೌಕರರ ಪ್ರಮುಖ ಬೇಡಿಕೆಗಳಾದ 8 ಗಂಟೆಗಳ ಕೆಲಸ ನೀಡುವುದು ಮತ್ತು ಪಿಂಚಣಿ ಸೇರಿದಂತೆ ಎಲ್ಲ ಸವಲತ್ತುಗಳನ್ನು ಒದಗಿಸಬೇಕು. ಸೇವಾ ಹಿರಿತನದ ಆಧಾರದ ಮೇಲೆ ಸೇವೆ ಸಲ್ಲಿಸಿದ ಜಿಡಿಎಸ್ ನೌಕರರಿಗೆ ವಿಶೇಷ ಇನ್‌ಕ್ರಿಮೆಂಟ್ ನೀಡುವುದು, ಗುಂಪು ವಿಮೆ ಕವರೇಜ್‌ 5 ಲಕ್ಷ ರು.ಗಳ ವರೆಗೆ ಹೆಚ್ಚಿಸಬೇಕು. ಅವೈಜ್ಞಾನಿಕ ಗುರಿ ಸಾಧಿಸದಿರುವ ಜಿಡಿಎಸ್ ನೌಕರರಿಗೆ ನೀಡುತ್ತಿರುವ ಕಿರುಕುಳವನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಜಿಡಿಎಸ್ ಗ್ರಾಚ್ಯುಟಿ ಹಣವನ್ನು 5 ಲಕ್ಷ ರು.ಗಳ ವರೆಗೆ ಹೆಚ್ಚಿಸಿ ಹಾಗೂ 180 ದಿನಗಳ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಿ, ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ತಮ್ಮ ಬೇಡಿಕೆಗಳನ್ನು ಮುಂದಿಟ್ಟರು. ಪ್ರತಿಭಟನೆಯಲ್ಲಿ ಅಂಚೆ ಸೇವಕರಾದ ಸುಭಾಶ ಗೌಡ, ಸಾಯಿಬಣ್ಣಾ, ಪದ್ಮಾಕರಾವ ಕುಲಕರ್ಣಿ, ಶ್ರೀನಿವಾಸ, ಮಹೇಂದ್ರರೆಡ್ಡಿ ಚಪೆಟ್ಲಾ, ಈಶ್ವರ್ ಲಾಲ್, ಭೀಮರೆಡ್ಡಿ, ಜೈನೇಶ, ಚಂದ್ರಶೇಖರ ಅವಂಟಿ, ನವಾಬ ಖಾನ್ ಮಹಮ್ಮದ್ ಮೌಲಾನಾ, ಮೌನೇಶ, ಮಾಣಿಕಪ್ಪ, ಕವಿತಾ, ಶಿವಕುಮಾರ ಸೇರಿದಂತೆ ಇತರರಿದ್ದರು.

Share this article