ಕುಡಿಯುವ ನೀರಿನ ಸಮಸ್ಯೆಗೆ ತುರ್ತು ಕ್ರಮಕೈಗೊಳ್ಳಲಿ

KannadaprabhaNewsNetwork |  
Published : Apr 04, 2024, 01:03 AM IST

ಸಾರಾಂಶ

ಬೆಳಗಾವಿ: ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಉತ್ತರ ಕರ್ನಾಟಕದ ಜಿಲ್ಲೆಗಳ ಜನತೆಗಾಗಿ ಕೃಷ್ಣಾ ಹಾಗೂ ಭೀಮಾ ನದಿಗಳಿಗೆ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲು ತುರ್ತಾಗಿ ಕ್ರಮಕೈಕೊಳ್ಳುವಂತೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮನವಿ ಮಾಡಿಕೊಂಡಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಉತ್ತರ ಕರ್ನಾಟಕದ ಜಿಲ್ಲೆಗಳ ಜನತೆಗಾಗಿ ಕೃಷ್ಣಾ ಹಾಗೂ ಭೀಮಾ ನದಿಗಳಿಗೆ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲು ತುರ್ತಾಗಿ ಕ್ರಮಕೈಕೊಳ್ಳುವಂತೆ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮನವಿ ಮಾಡಿಕೊಂಡಿದೆ.

ಈ ಕುರಿತು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಮುಖ್ಯಮಂತ್ರಿ, ಉಪಮುಖ್ಯಮುಂತ್ರಿ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳು ಕುಡಿಯುವ ನೀರಿನ ಅಭಾವವನ್ನು ಎದುರಿಸುತ್ತಿವೆ. ಕೃಷ್ಣಾ ಹಾಗೂ ಭೀಮಾ ನದಿಗಳು ಬತ್ತಿ ಹೋಗುವ ಸ್ಥಿತಿಯಲ್ಲಿವೆ. ಈ ಎರಡೂ ನದಿಗಳನ್ನು ಅವಲಂಭಿಸಿದ ನೂರಾರು ಹಳ್ಳಿ ಪಟ್ಟಣಗಳ ಜನರು ಕುಡಿಯುವ ನೀರಿನ ಅಭಾವವನ್ನು ಎದುರಿಸುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಮಹಾರಾಷ್ಟ್ರದ ಕೊಯ್ನಾ ಹಾಗೂ ವಾರಣಾ ಜಲಾಶಯಗಳಿಂದ ಕೃಷ್ಣಾ ನದಿಗೆ, ಉಜನಿ ಜಾಶಯದಿಂದ ಭೀಮಾ ನದಿಗೆ ನೀರು ಬಿಡುವ ಸಂಬಂಧ ಯಾವುದೇ ಗಂಭೀರ ಪ್ರಯತ್ನಗಳು ನಡೆದಿಲ್ಲ. ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ಮುಖಂಡರು ಚುನಾವಣೆಯಲ್ಲಿ ಮಗ್ನರಾಗಿದ್ದಾರೆ. ಆದರೆ, ಸಾಮಾನ್ಯ ಜನರು, ಕೃಷಿಕರು ಕುಡಿಯುವ ನೀರಿಗಾಗಿ ಬಳಲಿ ಬೆಂಡಾಗಿದ್ದಾರೆ ಎಂದು ತಿಳಿಸಿದರು.ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಜಲಾಶಯಗಳಿಂದ ಕುಡಿಯುವುದಕ್ಕಾಗಿ ನೀರು ಬಿಡುಗಡೆ ಮಾಡಿಸುವುದೊಂದೇ ಉಳಿದಿರುವ ಮಾರ್ಗವಾಗಿದೆ. ಮಹಾರಾಷ್ಟ್ರ ಸರ್ಕಾರ ಕಳೆದ ಆರೇಳು ವರ್ಷಗಳಿಂದ ನೀರು ವಿನಿಮಯ ಒಪ್ಪಂದಕ್ಕೆ ಒತ್ತಾಯಿಸುತ್ತಿದೆ. ಈ ಸಂಬಂಧ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಮಾತುಕತೆಗಳು ಬಹುತೇಕ ನಿಂತೇ ಹೋಗಿವೆ ಎಂದು ದೂರಿದರು.

ಕೃಷ್ಣಾ ನದಿಗೆ ತಾನು ಬಿಡುವಷ್ಟು ಪ್ರಮಾಣದ ನೀರನ್ನು ವಿಜಯಪುರ ಜಿಲ್ಲೆಯ ತುಬಚಿ ಬಬೇಶ್ವರ ಏತನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಜತ್ತ ತಾಲೂಕಿನ ಹಳ್ಳಿಗಳಿಗೆ ನೀರು ಪೂರೈಸಬೇಕೆಂದು ಪಟ್ಟು ಹಿಡಿದಿರುವ ಮಹಾರಾಷ್ಟ್ರ ಸರ್ಕಾರ ವಿಜಯಪುರದ ತಿಕೋಟಾ ನೀರು ವಿತರಣಾ ಕೇಂದ್ರದಿಂದ ಮಹಾರಾಷ್ಟ್ರದ ಗಡಿಯವರೆಗಿನ 30 ಕಿಮೀ ದೂರದವರೆಗೂ ಪೈಪ್‌ಲೈನ್‌ ಹಾಕುವ ವೆಚ್ಚವನ್ನೂ ಸಹ ಕರ್ನಾಟಕ ಸರ್ಕಾರವೇ ಭರಿಸಬೇಕೆಂದು ಷರತ್ತು ವಿಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಾತುಕತೆಗಳು ಸ್ಥಗಿತಗೊಂಡಿದ್ದು ಈ ಸಂಬಂಧ ಕರ್ನಾಟಕ ಸರ್ಕಾರ ಮಹಾರಾಷ್ಟ್ರದೊಂದಿಗೆ ಚರ್ಚೆಯನ್ನು ಮುಂದುವರೆಸುವ ಮೂಲಕ ನೀರು ಬಿಡುಗಡೆಯಲ್ಲಿರುವ ಸಮಸ್ಯೆಯನ್ನು ಪರಿಹರಿಸುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಸಲಹೆ ನೀಡಿದರು.

ನೀರಿನ ಅಭಾವ ನೀಗಿಸುವ ವಿಷಯ ನೀತಿಸಂಹಿತೆ ವ್ಯಾಪ್ತಿಯಲ್ಲಿ ಬರಾರದು. ಆದ್ದರಿಂದ ತಾವು ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಸರ್ವಪಕ್ಷಿಯ ನಿಯೋಗವೊಂದನ್ನು ಮುಂಬಯಿಗೆ ಕಳಿಸುವ ಮೂಲಕ ಅಲ್ಲಿಯ ಜಾಶಯಗಳಿಂದ ನೀರು ಬಿಡುಗಡೆಗಾಗಿ ಅಲ್ಲಿಯ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ