ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡ ಮೆಟ್ರೋಪಾಲಿಟಿನ್ ಸಿಟಿ ವೇದಿಕೆ ವತಿಯಿಂದ ಇಲ್ಲಿಯ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಾರ್ವಜನಿಕ ಸಂವಾದದಲ್ಲಿ, ಹುಬ್ಬಳ್ಳಿ-ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯ ಅಗತ್ಯವಿಲ್ಲ. ಅಭಿವೃದ್ಧಿಯ ದೂರ ದೃಷ್ಟಿಕೋನ ಹೊಂದಿರುವ ಸಂಘಟಿತ ಮಹಾನಗರ ಪಾಲಿಕೆಯ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾದವು.
ಪ್ರತ್ಯೇಕತೆಯಲ್ಲಿ ರಾಜಕೀಯ ಉದ್ದೇಶವಿದೆಯೇ ಹೊರತು, ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಸ್ಮಾರ್ಟ್‌ಸಿಟಿ ಅನುದಾನ ಹಂಚಿಕೆ ತಾರತಮ್ಯ, ಕೈಗಾರಿಕಾ ವಲಯ ಧಾರವಾಡಕ್ಕೆ ಸಿಕ್ಕಿಲ್ಲ ಎಂಬ ಕೋಪದ ಮಾತುಗಳೇ ಇಲ್ಲಿ ಮೇಳೈಸಿವೆ. ಬೆಂಗಳೂರು ನಂತರದ ಸಿಟಿಯಾಗಿ ಹುಬ್ಬಳ್ಳಿ-ಧಾರವಾಡ ಬೆಳೆಯಬೇಕು ಎಂದರೆ ಪ್ರತ್ಯೇಕ ಮಾತುಗಳು ಮೌನವಾಗಬೇಕು ಎಂಬ ಮುಂದಾಲೋಚನೆಯ ನುಡಿಗಳು ಸಂವಾದದಲ್ಲಿ ಹೊರ ಬಂದವು.ವೇದಿಕೆ ಸಹ ಸಂಯೋಜಕ ಸಂತೋಷ ನರಗುಂದ ಮಾತನಾಡಿ, ದೇಶದಲ್ಲಿ 46 ಮಹಾನಗರಗಳಿವೆ. ಮೆಟ್ರೋಪಾಲಿಟಿನ್ ಸಿಟಿಯಾಗಬೇಕೆಂದರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಹಂತ-ಹಂತವಾಗಿ ಮೂಲ ಸೌಕರ್ಯ ಹೊಂದಬೇಕು. ಜನಸಂಖ್ಯೆ ಆಧಾರಿತವಾಗಿ ಈ ಸ್ಥಾನಮಾನ ಹೊಂದುವ ಸಾಮರ್ಥ್ಯವಿದೆ. ಸಾಮಾಜಿಕ- ಆರ್ಥಿಕ ಕಾರಿಡಾರ್ ಸ್ಥಾಪನೆಗೂ ಆದ್ಯತೆ ಸಿಗಬೇಕು ಎಂದು ಅಭಿಪ್ರಾಯ ಮಂಡಿಸಿದರು.
ಮಾಜಿ ಮೇಯರ್ ಹನುಮಂತ ಡಂಬಳ, ಉದ್ಯಮಿಗಳಾದ ಎಂ.ವಿ. ಕರಮರಿ, ಜಗದೀಶ ಹಿರೇಮಠ, ಪ್ರಕಾಶ ಪಾಟೀಲ ಸೇರಿ ಇತರರು ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.