ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿವಿಲ್ ನ್ಯಾಯಾಲಯ ಸಂಕೀರ್ಣದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅರಸೀಕೆರೆಯನ್ನು ಜಿಲ್ಲಾ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಹಲವು ಅವಕಾಶಗಳಿದ್ದು, ನ್ಯಾಯಾಂಗ ವ್ಯವಸ್ಥೆಯ ವಿಸ್ತರಣೆಯೂ ಅದರ ಪ್ರಮುಖ ಭಾಗವಾಗಿದೆ ಎಂದು ಹೇಳಿದರು. ಹಾಸನದಿಂದ ಸುಮಾರು 50 ಕಿ. ಮೀ. ದೂರದಲ್ಲಿರುವ ಅರಸೀಕೆರೆ, ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಮಹತ್ವದ ತಾಲೂಕು ಕೇಂದ್ರವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರವಾಗುವ ಸಾಮರ್ಥ್ಯ ಹೊಂದಿರುವುದರಿಂದ ಇಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಯ ಅಗತ್ಯವಿದೆ. ತಾಲೂಕಿನ ಜನತೆಯ ಪರವಾಗಿ ಈ ಬೇಡಿಕೆಯನ್ನು ನ್ಯಾಯಮೂರ್ತಿಗಳ ಮುಂದಿಡುತ್ತಿದ್ದು, ಸಕಾರಾತ್ಮಕವಾಗಿ ಪರಿಗಣಿಸುವಂತೆ ಕೋರಿದರು.ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಸರ್ಕಾರದ ವತಿಯಿಂದ ಕಲ್ಪಿಸಲು ತಾವು ಸಿದ್ಧರಿರುವುದಾಗಿ ತಿಳಿಸಿದ ಸಚಿವರು, ನ್ಯಾಯಾಲಯಗಳ ಕಟ್ಟಡ ಮೂಲಸೌಕರ್ಯ ಸಮಿತಿಯ ಮುಖ್ಯಸ್ಥರಾಗಿರುವ ನ್ಯಾಯಮೂರ್ತಿಗಳು ಈ ಬೇಡಿಕೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಅರಸೀಕೆರೆ ಸಿದ್ಧರ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಧಾರ್ಮಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ತನ್ನದೇ ಆದ ಮಹತ್ವ ಹೊಂದಿದೆ. ಸುಮಾರು 60 ಎಕರೆ ಪ್ರದೇಶದಲ್ಲಿ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮದ ಮಂಟಪವಿರುವುದು ವಿಶೇಷ. ಚಿಕ್ಕತಿರುಪತಿ ಎಂದೇ ಪ್ರಸಿದ್ಧವಾಗಿರುವ ದೇವಸ್ಥಾನವೂ ಇಲ್ಲಿನ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ. ಇಂತಹ ಹಿನ್ನೆಲೆಯಿರುವ ಅರಸೀಕೆರೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ನ್ಯಾಯಾಲಯ ಸ್ಥಾಪನೆಯೂ ಪೂರಕವಾಗಲಿದೆ ಎಂದು ಹೇಳಿದರು.ನೂತನ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಹಾಗೂ ಹಾಸನ ಜಿಲ್ಲಾ ಆಡಳಿತ ನ್ಯಾಯಾಧೀಶ ಅಶೋಕ್ ಎಸ್. ಕಿನಗಿ, ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ಹಾಗೂ ಅತ್ಯಾಧುನಿಕ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗಿರುವುದು ಸಂತಸದ ಸಂಗತಿ. ಹಾಸನ ಜಿಲ್ಲೆಯ ಪ್ರಮುಖ ನ್ಯಾಯಾಲಯ ಸಂಕೀರ್ಣಗಳ ಪೈಕಿ ಅರಸೀಕೆರೆಯ ನೂತನ ಸಂಕೀರ್ಣವೂ ಒಂದಾಗಿದೆ ಎಂದರು.ಕಳೆದ ಎರಡು ವರ್ಷಗಳಲ್ಲಿ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೂಲಸೌಕರ್ಯವನ್ನು ವಿಸ್ತರಿಸುವ ಅಗತ್ಯವಿದೆ. ನೂತನ ಕಟ್ಟಡವು ಪ್ರಕರಣಗಳ ವಿಚಾರಣೆ ನಡೆಸಲು ಹಾಗೂ ಬಾಕಿ ಇರುವ ವ್ಯಾಜ್ಯಗಳ ಇತ್ಯರ್ಥಕ್ಕೆ ಅಗತ್ಯ ವಾತಾವರಣ ಕಲ್ಪಿಸಲಿದೆ ಎಂದು ಹೇಳಿದರು.ನ್ಯಾಯಾಲಯಕ್ಕೆ ಬರುವುದು ಅಪರಾಧದ ಸಂತ್ರಸ್ತರು ಮಾತ್ರ ಎಂಬ ಮನೋಭಾವ ಬದಲಾಗಬೇಕು. ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗುವ ಹಕ್ಕು ಹೊಂದಿದ್ದಾನೆ. ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವೇ ಪ್ರಜಾಪ್ರಭುತ್ವದ ಪ್ರಮುಖ ಶಕ್ತಿಯಾಗಿದೆ ಎಂದು ತಿಳಿಸಿದರು. ನ್ಯಾಯಾಲಯದ ಕಟ್ಟಡಗಳು ಕೇವಲ ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಾಣಗೊಂಡ ಕಟ್ಟಡಗಳಲ್ಲ. ಅವು ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ನೀಡಿರುವ ನ್ಯಾಯದ ಹಕ್ಕಿನ ಪ್ರತೀಕವಾಗಿವೆ. ದೇಶದಾದ್ಯಂತ ನ್ಯಾಯಾಂಗ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಇನ್ನೂ ಹಲವು ನ್ಯಾಯಾಲಯಗಳು ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಳವಳಕಾರಿ ಸಂಗತಿ ಎಂದರು.ಹೈಕೋರ್ಟ್ ನ್ಯಾಯಮೂರ್ತಿ ಎಚ್.ಕೆ. ಸಂದೇಶ್ ಮಾತನಾಡಿ, ನ್ಯಾಯಾಂಗದ ಮೇಲಿನ ಜನರ ನಂಬಿಕೆ ಪ್ರಜಾಪ್ರಭುತ್ವದ ಪ್ರಮುಖ ಆಧಾರವಾಗಿದೆ. ಕಾನೂನಿನ ಆಡಳಿತವನ್ನು ಬಲಪಡಿಸುವಲ್ಲಿ ನ್ಯಾಯಾಲಯಗಳ ಪಾತ್ರ ಮಹತ್ವದ್ದಾಗಿದ್ದು, ನಾಗರಿಕರ ಹಕ್ಕುಗಳನ್ನು ಸಂರಕ್ಷಿಸುವ ಸಂವಿಧಾನದ ಭರವಸೆಯಾಗಿ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತವೆ ಎಂದರು. ನ್ಯಾಯಾಂಗದ ಮೂಲಸೌಕರ್ಯಕ್ಕೆ ಹಲವು ಸಂದರ್ಭಗಳಲ್ಲಿ ನಿರೀಕ್ಷಿತ ಆದ್ಯತೆ ದೊರೆಯುತ್ತಿಲ್ಲ. ಇದರಿಂದ ದೇಶದ ವಿವಿಧೆಡೆ ನ್ಯಾಯಾಲಯಗಳು ಹಳೆಯ ಹಾಗೂ ಶಿಥಿಲ ಕಟ್ಟಡಗಳಲ್ಲಿಯೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ನ್ಯಾಯಾಂಗ ಮೂಲಸೌಕರ್ಯ ಅಭಿವೃದ್ಧಿಗೆ ಕೈಗೊಳ್ಳುತ್ತಿರುವ ಕ್ರಮಗಳು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಮೂರ್ತಿ ಕಿರಣ್ ಕುಮಾರ್ ಡಿ. ವಡಿಗೇರ, ನ್ಯಾಯಾಧೀಶರಾದ ವೀಣಾ ಕೊಲೆಕರ್, ಪೂಜಾ, ದೀಪಿಕಾ, ಲೋಕೋಪಯೋಗಿ ಇಲಾಖೆ ಹಾಸನ ವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್ ಜ್ಯೋತಿ ಜಿ.ಕೆ., ಹಾಸನ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ಆರ್., ತಾಲೂಕು ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್, ಅರಸೀಕೆರೆ ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ಎಚ್.ಎಸ್. ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.=======
ಶೀಘ್ರ ಕ್ರಮಕ್ಕೆ ನ್ಯಾಯಮೂರ್ತಿಗಳ ಭರವಸೆ ಅರಸೀಕೆರೆಯಲ್ಲಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲೆಯಿಂದ ಶಿಫಾರಸು ಬಂದಿರುವುದನ್ನು ತಿಳಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಎಸ್. ಕಿನಗಿ ಹಾಗೂ ಎಚ್. ಕೆ. ಸಂದೇಶ್, ತಾವು ನ್ಯಾಯಾಲಯಗಳ ಕಟ್ಟಡ ಮೂಲಸೌಕರ್ಯ ಸಮಿತಿಯ ಸದಸ್ಯರಾಗಿದ್ದು, ಜಿಲ್ಲಾ ನ್ಯಾಯಾಲಯ ಮಂಜೂರಾತಿಗೆ ಅಗತ್ಯ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.