ಕನಕಪುರ: ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ಎಲ್ಲಾ ವರ್ಗಗಳ ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ಅಭಿವೃದ್ಧಿಯ ಹರಿಕಾರರು ಎಂದು ತಹಸೀಲ್ದಾರ್ ಸಂಜಯ್ ತಿಳಿಸಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಶ್ರಯದಲ್ಲಿ ದಿ.ದೇವರಾಜ ಅರಸು 110ನೇ ಜನ್ಮದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇವರಾಜ ಅರಸು ಒಂದೇ ವರ್ಗದ ನಾಯಕರಾಗದೆ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸ್ವತಂತ್ರವಾಗಿ ಜೀವನ ಸಾಗಿಸಬೇಕೆಂಬ ಉದ್ದೇಶದಿಂದ ಭೂ ಸುಧಾರಣೆ ತರುವ ಮೂಲಕ ಉಳುವವನೇ ಭೂ ಒಡೆಯ ಕಾಯ್ದೆಯನ್ನ ಕಟ್ಟುನಿಟ್ಟಾಗಿ ಜಾರಿಗೆ ತಂದು ನಾಡಿನ ಲಕ್ಷಾಂತರ ಜನರ ಬಾಳಿಗೆ ಬೆಳಕು ನೀಡಿದರು. ಮಲ ಹೊರುವ ಅನಿಷ್ಟ ಪದ್ದತಿಯನ್ನು ತೆಗೆದು ಹಾಕಿದರು. ಹಿಂದುಳಿದ ಹಾಗೂ ಬಡವರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದ ವಿಶ್ವಮಾನವರು ಎಂದರು.
ನಗರದ ಧಮ್ಮ ದೇವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ದೇವರಾಜ ಅರಸು ರಾಷ್ಟ್ರಮಟ್ಟದಲ್ಲಿ ಯಾವ ಸರ್ಕಾರಗಳು ಮಾಡಲಾಗದ ಅನೇಕ ಯೋಜನೆಗಳನ್ನು ಜಾರಿಗೆ ತಂದ ಛಲವಂತ ಮುಖ್ಯಮಂತ್ರಿ. ಉಳುವವನೇ ಭೂ ಒಡೆಯ ಪದ್ಧತಿ ಜಾರಿಗೆ ತಂದು ಜೀತ ಪದ್ಧತಿಗೆ ಮುಕ್ತಿ ಹಾಡಿದರು. ಇವರ ಕಲ್ಯಾಣ ಕಾರ್ಯಕ್ರಮಗಳನ್ನು ಕಂಡೇ ಇವರ ಹೆಸರಿನಲ್ಲಿ ಹಿಂದುಳಿದ ವರ್ಗಗಳ ಇಲಾಖೆಯನ್ನು ರಚಿಸಲಾಯಿತು ಎಂದರು.
ಸಮಾರಂಭದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿ ಮೀನಾಕ್ಷಿ, ತಾಪಂ ಸಹಾಯಕ ನಿರ್ದೇಶಕ ಮೋಹನ ಬಾಬು, ತಾಲೂಕು ಅರಸು ಸಂಘದ ಪದಾಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.(ಫೋಟೋ ಕ್ಯಾಫ್ಷನ್)ಕನಕಪುರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಶ್ರಯದಲ್ಲಿ ದಿ. ದೇವರಾಜ ಅರಸು 110ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಸಂಜಯ್ ಚಾಲನೆ ನೀಡಿದರು. ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿ ಮೀನಾಕ್ಷಿ, ತಾಪಂ ಸಹಾಯಕ ನಿರ್ದೇಶಕ ಮೋಹನ ಬಾಬು ಇತರರು ಪಾಲ್ಗೊಂಡಿದ್ದರು.