ಸಾಮಾಜಿಕ ನ್ಯಾಯದ ಹರಿಕಾರ ಅರಸು: ಎ.ಎನ್.ಮಹೇಶ್

KannadaprabhaNewsNetwork |  
Published : Aug 21, 2026, 01:15 AM IST
 | Kannada Prabha

ಸಾರಾಂಶ

ಚಿಕ್ಕಮಗಳೂರು ಬಡವರು, ಶೋಷಿತರು ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ರಾಜ್ಯದ ಸಾಮಾಜಿಕ ದಿಕ್ಸೂಚಿಯನ್ನೇ ಬದಲಾಯಿಸಿದ ಮಹಾನ್ ನಾಯಕ ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ೧೧೧ನೇ ಜನ್ಮ ದಿನಾಚರಣೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬಡವರು, ಶೋಷಿತರು ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ರಾಜ್ಯದ ಸಾಮಾಜಿಕ ದಿಕ್ಸೂಚಿಯನ್ನೇ ಬದಲಾಯಿಸಿದ ಮಹಾನ್ ನಾಯಕ ಎಂದು ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಅಭಿಪ್ರಾಯಪಟ್ಟರು.

ನಗರದ ಕುವೆಂಪು ಕಲಾಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ೧೧೧ನೇ ಜನ್ಮ ದಿನಾಚರಣೆ ಉದ್ಘಾಟಿಸಿ, ಅರಸು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜಾತೀಯತೆ ಹಾಗೂ ವರ್ಗ ಸಂಘರ್ಷ ಹೆಚ್ಚಾಗಿದ್ದ ಕಾಲಘಟ್ಟದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದೇವರಾಜ ಅರಸು ಪ್ರಧಾನಿ ಇಂದಿರಾ ಗಾಂಧಿಯವರ ೨೦ ಅಂಶಗಳ ಕಾರ್ಯಕ್ರಮ ರಾಜ್ಯದಲ್ಲಿ ಯಥಾವತ್ತಾಗಿ ಜಾರಿಗೆ ತಂದರು ಎಂದರು.

‘ಉಳುವವನೇ ಭೂಮಿ ಒಡೆಯ’ ಎಂಬ ಕ್ರಾಂತಿಕಾರಿ ಭೂಸುಧಾರಣಾ ಕಾಯ್ದೆ ಜಾರಿಗೆ ತರುವ ಮೂಲಕ ಲಕ್ಷಾಂತರ ಬಡ ಕುಟುಂಬಗಳಿಗೆ ಜಮೀನಿನ ಹಕ್ಕು ದೊರೆಯುವಂತೆ ಮಾಡಿದರು. ಶಾಸಕಾಂಗ ಹಾಗೂ ಸ್ವಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತ ವಾದರೂ, ‘ನನ್ನ ಪದವಿ ಹೋದರೂ ಚಿಂತೆಯಿಲ್ಲ, ಈ ಕಾನೂನು ಜಾರಿಗೆ ತಂದೇ ತರುತ್ತೇನೆ ಎಂದು ದಿಟ್ಟ ನಿರ್ಧಾರ ತಳೆದ ಧೀಮಂತ ನಾಯಕ ಎಂದು ಸ್ಮರಿಸಿದರು.

ಮೈಸೂರು ರಾಜ್ಯಕ್ಕೆ ’ಕರ್ನಾಟಕ’ ಎಂದು ಮರು ನಾಮಕರಣ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ‘ಎಲ್.ಜಿ.ಹಾವನೂರು ಆಯೋಗ’ ರಚಿಸಿ, ರಾಜ್ಯದಲ್ಲಿ ಪ್ರಥಮ ಬಾರಿಗೆ ವೈಜ್ಞಾನಿಕ ಮೀಸಲಾತಿ ಜಾರಿಗೆ ತಂದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಂತರ ಸಾಮಾಜಿಕ ಸಮಾನತೆ ಮತ್ತು ಮೀಸಲಾತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ಮತ್ತೊಬ್ಬ ನಾಯಕ ದೇವರಾಜ ಅರಸು ಎಂದು ಹೇಳಿದರು.

ಸಣ್ಣ ಸಣ್ಣ ಜಾತಿ, ಸಮುದಾಯಗಳ ನಾಯಕರನ್ನು ಗುರುತಿಸಿ ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಕೆಲಸ ಅರಸು ಅವರು ಮಾಡಿದರು. ದಲಿತ ಸಮುದಾಯದ ಮೇಲಿದ್ದ ಮಲ ಹೊರುವ ಪದ್ಧತಿ ನಿರ್ಮೂಲನೆ, ಜೀತ ಪದ್ಧತಿ ವಿಮುಕ್ತಿಯಂತಹ ಕ್ರಾಂತಿ ಕಾರಿ ಕಾಯ್ದೆಗಳನ್ನು ತಂದವರು ಅರಸು. ಸಾಹುಕಾರರ ಮನೆಗಳಲ್ಲಿ ವರ್ಷಪೂರ್ತಿ, ಜೀವಮಾನಪೂರ್ತಿ ಕೂಲಿ ಇಲ್ಲದೆ ಊಟಕ್ಕಾಗಿ ದುಡಿಯುತ್ತಿದ್ದ ಜೀತದಾಳುಗಳಿಗೆ ಮುಕ್ತಿ ನೀಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕೆಂಬ ತುಡಿತ ಅವರಲ್ಲಿತ್ತು ಎಂದು ಸ್ಮರಿಸಿದರು.

ಜಿ ಪಂ ಸಿಇಒ ಎಚ್.ಎಸ್.ಕೀರ್ತನಾ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಜನತೆ ಮೊಬೈಲ್‌ನ ಅತಿಯಾದ ಬಳಕೆಯಿಂದ ಹೊರಬಂದು, ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ ಮಹಾನ್ ನಾಯಕರ ಆದರ್ಶ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.

ಹಿಂದುಳಿದ ವರ್ಗಗಳು, ಶೋಷಿತರು ಹಾಗೂ ಬಡಜನರಿಗೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ನೀಡಲು ದೇವರಾಜ ಅರಸು ಅಪಾರ ಕೊಡುಗೆ ನೀಡಿದ್ದಾರೆ.

ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಡಾ.ಎಚ್.ಎಸ್.ಸತ್ಯನಾರಾಯಣ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೆ ಮುನ್ನ ತಹಸೀಲ್ದಾರ್ ಕಚೇರಿ ಆವರಣದಿಂದ ಕುವೆಂಪು ಕಲಾಮಂದಿರದವರೆಗೆ ದೇವರಾಜ ಅರಸು ಭಾವಚಿತ್ರ ದೊಂದಿಗೆ ನಡೆದ ಮೆರವಣಿಗೆಗೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಚಾಲನೆ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡಿ ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿನಿ ಸಾಕಮ್ಮ ಅವರನ್ನು ಸನ್ಮಾನಿಸ ಲಾಯಿತು.

ತಹಸೀಲ್ದಾರ್ ರೇಷ್ಮಾ ಶೆಟ್ಟಿ, ಅರಸು ಸಮಾಜದ ಜಿಲ್ಲಾಧ್ಯಕ್ಷ ಮುಕುಂದರಾಜ್ ಅರಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ತಾಲೂಕು ಹಿಂದುಳಿದ ವರ್ಗಗಳ ಇಲಾಖೆ ಕಲ್ಯಾಣಾಧಿಕಾರಿ ಸತೀಶ್, ನಗರ ಸಭಾ ಸದಸ್ಯ ಪರಮೇಶ್ವರರಾಜ್ ಅರಸ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ನಾಗೇಶ್‌ರಾಜ್ ಅರಸ್, ಮಂಜುನಾಥ್‌ರಾಜ್ ಅರಸ್, ಮುಖಂಡರಾದ ಕೆ.ಟಿ.ರಾಧಾಕೃಷ್ಣ, ದಲಿತ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಕ್ರಾಣಿ: ಬಾವಿಯಲ್ಲಿ ಯುವತಿ ಶವ ಪತ್ತೆ
ಮುದಗಲ್‌: ಈದ್ ಮಿಲಾದ್ ಹಬ್ಬದ ಶಾಂತಿ ಸಭೆ