ಎಸ್ಸಿ, ಎಸ್ಟಿ ಮೀಸಲಾತಿ ಕಡಿತಗೊಳಿಸಿದ ಸರ್ಕಾರ

KannadaprabhaNewsNetwork |  
Published : May 21, 2026, 03:15 AM IST
5 | Kannada Prabha

ಸಾರಾಂಶ

ಸರ್ಕಾರ ಎಸ್ಸಿ, ಎಸ್ಟಿಗಳನ್ನು ಕಂಡರೆ ಆಗದೆ, ಹೊಟ್ಟೆ ಕಿಚ್ಚಿನಿಂದ ಮೀಸಲಾತಿ ಸೌಲಭ್ಯ ಕಸಿದುಕೊಳ್ಳುತ್ತಿದೆ ಸರ್ಕಾರದ ಈ ಎಡವಟ್ಟಿನಿಂದ ಬೇಸತ್ತು ಈಗಾಗಲೇ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ

ಕನ್ನಡಪ್ರಭ ವಾರ್ತೆ ಮೈಸೂರುಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪ.ಜಾತಿ ಮೀಸಲಾತಿಯನ್ನು ಶೇ. 15 ರಿಂದ ಶೇ. 17ಕ್ಕೆ ಮತ್ತು ಪ.ಪಂಗಡ ಮೀಸಲಾತಿಯನ್ನು ಶೇ. 3 ರಿಂದ ಶೇ. 7ಕ್ಕೆ ಹೆಚ್ಚಿಸಿತ್ತು. ಈ ನಿರ್ಧಾರಕ್ಕೆ ಸರ್ವಪಕ್ಷಗಳೂ ಒಮ್ಮತದ ಬೆಂಬಲ ಸೂಚಿಸಿದ್ದವು. ಆದರೆ, ನರಿಬುದ್ದಿಯ ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಟಿಗಳನ್ನು ಕಂಡರೆ ಆಗದೆ, ಹೊಟ್ಟೆ ಕಿಚ್ಚಿನಿಂದ ಮೀಸಲಾತಿ ಸೌಲಭ್ಯ ಕಸಿದುಕೊಳ್ಳುತ್ತಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳದ ವಿರುದ್ಧ ರಾಯಚೂರಿನ ಕಾಂಗ್ರೆಸ್ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದಾಗ, ರಾಜ್ಯ ಸರ್ಕಾರದ ಪರ ವಕೀಲರು ಸಮರ್ಪಕವಾಗಿ ವಾದ ಮಂಡಿಸದ ಹಿನ್ನೆಲೆಯಲ್ಲಿ ಹೈಕೋರ್ಟ್‌ ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿದೆ. ಇದರ ಬೆನ್ನಲ್ಲೇ ಎಸ್ಟಿ ಸಮುದಾಯದ ಮೀಸಲಾತಿಯನ್ನು ರಾತ್ರೋರಾತ್ರಿ ಮತ್ತೆ ಶೇ. 3ಕ್ಕೆ ಇಳಿಸುವ ಗೊಂದಲಕಾರಿ ಆದೇಶವನ್ನು ಸರ್ಕಾರ ಹೊರಡಿಸಿದೆ. ಇದರಿಂದಾಗಿ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಪ್ರವೇಶ ಪಡೆದಿದ್ದ ನೂರಾರು ಬಡ ವಿದ್ಯಾರ್ಥಿಗಳ ಭವಿಷ್ಯ ಕತ್ತಲಿಗೆ ದೂಡಲ್ಪಟ್ಟಿದೆ ಎಂದು ದೂರಿದರು.ಸರ್ಕಾರದ ಈ ಎಡವಟ್ಟಿನಿಂದ ಬೇಸತ್ತು ಈಗಾಗಲೇ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಾವುಗಳಿಗೆ ಸರ್ಕಾರವೇ ನೇರ ಹೊಣೆ. ಕಳೆದ 30 ವರ್ಷಗಳ ನಿರಂತರ ಹೋರಾಟ ಹಾಗೂ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯ ಆಧಾರದ ಮೇಲೆ ನಮ್ಮ ಸರ್ಕಾರ ಮೀಸಲಾತಿ ಹೆಚ್ಚಿಸಿತ್ತು. ಬೆಳಗಾವಿ ಅಧಿವೇಶನದಲ್ಲಿ ಒಳಮೀಸಲಾತಿಗಾಗಿ 6- 6- 5 ಮಾದರಿಯ ವರ್ಗೀಕರಣದ ಮಸೂದೆ ಅಂಗೀಕರಿಸಿ, ಡಿಸೆಂಬರ್ 2025ರಲ್ಲಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಯಿತು. ತದನಂತರ ರಾಜ್ಯಪಾಲರ ಬಳಿ ಹೋಗಿ ಶೇ. 17ರ ವರ್ಗೀಕರಣಕ್ಕೆ ಸಹಿ ಮಾಡಿಸಿಕೊಂಡು ಬಂದ ಸರ್ಕಾರ, ಅದೇ ದಿನ ಸಂಜೆ ಸಚಿವ ಸಂಪುಟ ಸಭೆ ಕರೆದು ಸುಪ್ರೀಂ ಕೋರ್ಟ್ ಮಿತಿಯಾದ ಶೇ. 50ರ ಒಳಗಡೆಯೇ ಮೀಸಲಾತಿ ನಿರ್ವಹಿಸುತ್ತೇವೆ ಎಂದು ಉಲ್ಟಾ ಹೊಡೆಯಿತು. ರಾಜಭವನಕ್ಕೆ ಒಂದು ಮಾಹಿತಿ ನೀಡಿ, ಕ್ಯಾಬಿನೆಟ್‌ ನಲ್ಲಿ ಮತ್ತೊಂದು ತೀರ್ಮಾನ ಮಾಡುವ ಮೂಲಕ ಇಡೀ ಪ್ರಕ್ರಿಯೆಯನ್ನು ಕಗ್ಗಂಟಾಗಿಸಿದ್ದಾರೆ ಎಂದು ಆವರು ಆರೋಪಿಸಿದರು.ಹಿಂದುಳಿದ ವರ್ಗಗಳ ಸ್ವಯಂ ಘೋಷಿತ ಚಾಂಪಿಯನ್ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮುದಾಯದ ಮೇಲೆ ನಿಜವಾದ ಕಳಕಳಿ ಇದ್ದರೆ, ಕೂಡಲೇ ಹೈಕೋರ್ಟ್‌ನಲ್ಲಿರುವ ತಾತ್ಕಾಲಿಕ ತಡೆಯಾಜ್ಞೆ ತೆರವುಗೊಳಿಸುವ ಕೆಲಸ ಮಾಡಲಿ. ಅದು ಬಿಟ್ಟು ತಮಿಳುನಾಡಿನ ಮಾದರಿಯಲ್ಲಿ ಮೀಸಲಾತಿಯನ್ನು ಸಂವಿಧಾನದ 9ನೇ ಶೆಡ್ಯೂಲ್‌ ಗೆ ಸೇರಿಸಬೇಕು ಎಂದು ಹೇಳುತ್ತಾ ಕಾಂಗ್ರೆಸ್ ನಾಯಕರು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಈ ಗಂಭೀರ ಸಮಸ್ಯೆಯ ಕುರಿತು ಚರ್ಚಿಸಲು ಮಾಜಿ ಸಚಿವರು, ಸಂಸದರು ಮತ್ತು ಶಾಸಕರನ್ನು ಒಳಗೊಂಡ ಬಿಜೆಪಿಯ ಉನ್ನತ ಮಟ್ಟದ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ. ಒಂದು ವೇಳೆ ಸರ್ಕಾರ ಸಮಸ್ಯೆ ಬಗೆಹರಿಸದಿದ್ದರೆ, ನಾವು ರಕ್ತದಲ್ಲಿ ಬರೆದುಕೊಡುತ್ತೇವೆ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದ್ದು, ಎಸ್ಸಿ, ಎಸ್ಟಿ ಸಮುದಾಯಗಳಿಗೆ ಸಿಗಬೇಕಾದ ಹಕ್ಕನ್ನು ಯಥಾವತ್ತಾಗಿ ಜಾರಿಗೊಳಿಸಲಿದೆ ಎಂದು ಅವರು ಎಚ್ಚರಿಸಿದರು.ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ, ಸಿದ್ದರಾಮಯ್ಯ ಅವರೇ ಮೀಸಲಾತಿ ಕಡಿತದ ಮೂಲಕ ಸಾಮಾಜಿಕ ಅನ್ಯಾಯದ ಕಳನಾಯಕರಾಗಬೇಡಿ. ಶಾಸನಬದ್ಧವಾಗಿ ಇರುವುದನ್ನು ಕಡಿತಗೊಳಿಸಿ ಸಂವಿಧಾನಕ್ಕೆ ಅಪಚಾರ ಎಸಗಿದ್ದೀರಿ. ಈ ನಿರ್ಧಾರವನ್ನು ತಕ್ಷಣವೇ ಹಿಂದಕ್ಕೆ ಪಡೆಯಿರಿ ಎಂದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕರಾದ ಎನ್. ಮಹೇಶ್, ಹರ್ಷವರ್ಧನ್, ಎಲ್. ನಾಗೇಂದ್ರ, ಸಿದ್ದರಾಜು, ಮಾಜಿ ಮೇಯರ್‌ ಗಳಾದ ಶಿವಕುಮಾರ್, ಸಂದೇಶ್‌ ಸ್ವಾಮಿ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಮಿಕರ ಸುರಕ್ಷತೆಯತ್ತ ಗಮನ ಹರಿಸಿ
ಪುತ್ರನಿಂದಲೇ ಪೆಟ್ರೋಲ್ ಬಂಕ್ ನಾಶ