ಎಐ ತಂತ್ರಜ್ಞಾನ ಜವಾಬ್ದಾರಿಯುತವಾಗಿ ಬಳಸಿ: ಪ್ರೊ.ಕೆ.ಚಿದಾನಂದಗೌಡ

KannadaprabhaNewsNetwork |  
Published : Nov 09, 2026, 01:45 AM IST
೭ಕೆಎಂಎನ್‌ಡಿ-೩ಮಂಡ್ಯದ ಇಎಸ್ ಇಂಜಿನಿಯರಿಂಗ್ ಕಾಲೇಜಿನ ಹೆಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ನಡೆದ ತಾಂತ್ರಿಕ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ತಾಂತ್ರಿಕ ಕ್ಷೇತ್ರ ನಾಗಾಲೋಟದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಪದವಿ ಗಳಿಸುವುದೇ ಶಿಕ್ಷಣದ ಅಂತ್ಯವಲ್ಲ, ಪದವಿ ಪಡೆದು ಉದ್ಯೋಗ ಗಳಿಕೆಯೇ ಮುಖ್ಯ ಗುರಿಯೂ ಅಲ್ಲ. ಪದವಿ ಪಡೆದ ಬಳಿಕ ನಿರಂತರ ಕಲಿಕೆಯ ಆರಂಭವಾಗಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಮಾನಗಳಲ್ಲಿ ತಾಂತ್ರಿಕ ಪದವಿ ಗಳಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ತಾಂತ್ರಿಕ ಜ್ಞಾನ ಮತ್ತು ಮೂಲಭೂತ ಪರಿಕಲ್ಪನೆಗಳಲ್ಲಿ ಪರಿಣಿತಿ ಗಳಿಸುವುದರ ಜೊತೆಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವುದರಲ್ಲಿ ಕೌಶಲ್ಯ ಸಾಧಿಸಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಕೆ.ಚಿದಾನಂದ ಗೌಡ ಸಲಹೆ ನೀಡಿದರು.

ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ತಾಂತ್ರಿಕ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ತಾಂತ್ರಿಕ ಕ್ಷೇತ್ರ ನಾಗಾಲೋಟದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಪದವಿ ಗಳಿಸುವುದೇ ಶಿಕ್ಷಣದ ಅಂತ್ಯವಲ್ಲ, ಪದವಿ ಪಡೆದು ಉದ್ಯೋಗ ಗಳಿಕೆಯೇ ಮುಖ್ಯ ಗುರಿಯೂ ಅಲ್ಲ. ಪದವಿ ಪಡೆದ ಬಳಿಕ ನಿರಂತರ ಕಲಿಕೆಯ ಆರಂಭವಾಗಲಿದೆ. ವೈಫಲ್ಯಗಳಿಂದ ಪಾಠ ಕಲಿಯುವ ಮನೋಭಾವ, ನೈತಿಕ ಮೌಲ್ಯಗಳು, ವೃತ್ತಿಪರ ಪ್ರಾಮಾಣಿಕತೆ, ಸಂವಹನ ಕೌಶಲ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ವಿದ್ಯಾರ್ಥಿಗಳು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಿರಂತರ ಕಲಿಕೆಯ ಜೊತೆಗೆ ಸಂಶೋಧನೆಯತ್ತ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಹೊಸ ಹೊಸ ಆವಿಷ್ಕಾರಗಳನ್ನು ಅರಿತುಕೊಂಡು ಅದಕ್ಕೆ ಪೂರಕವಾಗಿ ಜ್ಞಾನ ಸಂಪಾದಿಸಿ ತಂತ್ರಜ್ಞಾನ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಮಾತನಾಡಿ, ತಂತ್ರಜ್ಞಾನವು ಕಾಲಕ್ಕೆ ತಕ್ಕಂತೆ ನಿರಂತರವಾಗಿ ಬದಲಾಗುತ್ತಿದ್ದರೂ, ನಮ್ಮ ಸಂಸ್ಕೃತಿ, ಪರಂಪರೆ, ನೈತಿಕ ಮೌಲ್ಯಗಳು ಹಾಗೂ ಮಾನವೀಯ ಗುಣಗಳು ಎಂದಿಗೂ ಬದಲಾಗಬಾರದು ಎಂದು ಅಭಿಪ್ರಾಯಪಟ್ಟರು.

ಆಧುನಿಕ ತಂತ್ರಜ್ಞಾನ ಮತ್ತು ನವೀನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಜೊತೆಗೆ ನಮ್ಮ ಸಾಂಸ್ಕೃತಿಕ ಬೇರುಗಳು ಮತ್ತು ಮೌಲ್ಯಗಳನ್ನು ಉಳಿಸಿಕೊಂಡು ಮುನ್ನಡೆಯುವುದು ಇಂದಿನ ಯುವಜನತೆಯ ಜವಾಬ್ದಾರಿಯಾಗಿದೆ. ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಕ್ಷಿಪ್ರ ಬದಲಾವಣೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ಸಂಶೋಧನೆ, ನವೀನ ಆವಿಷ್ಕಾರ, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಉದ್ಯಮಗಳೊಂದಿಗೆ ಶೈಕ್ಷಣಿಕ ಸಹಭಾಗಿತ್ವ, ಹೊಸ ತಂತ್ರಜ್ಞಾನಗಳ ಅಳವಡಿಕೆ ಹಾಗೂ ಪ್ರಾಯೋಗಿಕ ಕಲಿಕೆಗೆ ಸಂಸ್ಥೆ ಹೆಚ್ಚಿನ ಒತ್ತು ನೀಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಸಾಮರ್ಥ್ಯವನ್ನು ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸಮಾರಂಭದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಎಸ್.ಎಲ್. ಶಿವಪ್ರಸಾದ್ ಹಾಗೂ ಪ್ರಾಂಶುಪಾಲ ಡಾ.ಎಸ್.ವಿನಯ್, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಅಧ್ಯಾಪಕರು, ಸಿಬ್ಬಂದಿ, ಪೋಷಕರು ಹಾಗೂ ಪದವೀಧರ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ರ್‍ಯಾಂಕ್ ವಿಜೇತರಿಗೆ ಅಭಿನಂದನೆ:

೨೦೨೫- ೨೬ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ಪ್ರಥಮ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ