ಗರ್ಭಿಣಿ, ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರದ ಸೌಲಭ್ಯ ಬಳಸಿ: ಸುನಿಲ್ ಹೊಸಮನಿ

KannadaprabhaNewsNetwork |  
Published : Oct 04, 2024, 01:07 AM IST
೦೩ಕೆಎಲ್‌ಆರ್-೧೬ಕೋಲಾರ ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸುಗಟೂರು ಗ್ರಾಮ ಪಂಚಾಯಿತಿ ಇವರ ಆಶ್ರಯದಲ್ಲಿ ಸುಗಟೂರು ಗ್ರಾಪಂ ಸಭಾಂಗಣದಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ಪೌಷ್ಟಿಕ ಆಹಾರ ಮತ್ತು ಕಾನೂನು ಅರಿವು ಕಾರ್ಯಕ್ರಮಕ್ಕೆ  ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ ಎಸ್.ಹೊಸಮನಿ  ಚಾಲನೆ ನೀಡಿದರು. | Kannada Prabha

ಸಾರಾಂಶ

ಆರೋಗ್ಯವಿದ್ದರೆ ಮಾತ್ರ ಜೀವನದಲ್ಲಿ ನೆಮ್ಮದಿ ಸಾಧ್ಯ ಎಂದ ಅವರು, ಮಕ್ಕಳ ಬೆಳವಣಿಗೆಗೆ ತಕ್ಕಂತೆ ಆಹಾರ ನೀಡಿ, ಅವರನ್ನು ಸಕಾಲಕ್ಕೆ ಶಾಲೆಗೆ ಸೇರಿಸಿ, ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿಸದಿರಿ ಎಂದು ತಾಕೀತು ಮಾಡಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಗರ್ಭಿಣಿಯರಿಗೆ, ಮಕ್ಕಳಿಗೆ, ಬಾಣಂತಿಯರಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರ ಅಂಗನವಾಡಿಗಳ ಮೂಲಕ ಹಲವಾರು ಸೌಲಭ್ಯ ಒದಗಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ, ಆಹಾರ ನೀಡಿಕೆಯಲ್ಲಿ ಯಾವುದೇ ವಂಚನೆಗೆ ಅವಕಾಶ ನೀಡದಿರಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ್ ಎಸ್.ಹೊಸಮನಿ ಎಚ್ಚರಿಸಿದರು.

ತಾಲೂಕಿನ ಸುಗಟೂರು ಗ್ರಾಪಂ ಸಭಾಂಗಣದಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ಪೌಷ್ಟಿಕ ಆಹಾರ ಮತ್ತು ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಗು ಹುಟ್ಟಿದ ೬ ತಿಂಗಳವರೆಗೂ ಕಡ್ಡಾಯವಾಗಿ ತಾಯಿ ಎದೆಹಾಲು ಕುಡಿಸಬೇಕು, ಅದು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದ ಅವರು, ಬೇಕರಿ ತಿನಿಸು ತಿನ್ನದೇ ಕಾಲಕಾಲಕ್ಕೆ ತರಕಾರಿ, ಹಣ್ಣು, ಹಾಲು ಸೇವಿಸುವ ಮೂಲಕ ಉತ್ತಮ ಆರೋಗ್ಯ ಪಡೆಯಿರಿ ಎಂದು ಕಿವಿಮಾತು ಹೇಳಿದರು.

ಆರೋಗ್ಯವಿದ್ದರೆ ಮಾತ್ರ ಜೀವನದಲ್ಲಿ ನೆಮ್ಮದಿ ಸಾಧ್ಯ ಎಂದ ಅವರು, ಮಕ್ಕಳ ಬೆಳವಣಿಗೆಗೆ ತಕ್ಕಂತೆ ಆಹಾರ ನೀಡಿ, ಅವರನ್ನು ಸಕಾಲಕ್ಕೆ ಶಾಲೆಗೆ ಸೇರಿಸಿ, ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿಸದಿರಿ ಎಂದು ತಾಕೀತು ಮಾಡಿದರು.

ಬಾಲ್ಯವಿವಾಹ ಮಾಡುವುದರಿಂದಾಗಿ ಹುಟ್ಟುವ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತವೆ ಮತ್ತು ಮಗು ಹುಟ್ಟುವ ಪೂರ್ವದಲ್ಲಿ ಸಾಯುವ ಸಾಧ್ಯತೆಯೂ ಹೆಚ್ಚಿರುತ್ತದೆ, ಆದ್ದರಿಂದ ಕಾನೂನಿನಲ್ಲೂ ಶಿಕ್ಷಾರ್ಹವಾಗಿರುವ ಬಾಲ್ಯವಿವಾಹ ಮಾಡದಿರಿ ಎಂದರು.

ತಂಬಾಕು,ಮಾದಕ ವಸ್ತು ನಿಯಂತ್ರಣಕ್ಕ ಕೋಟ್ಪಾ ಸಿಗರೇಟು ಹಾಗೂ ಇತರೆ ತಂಬಾಕು ಉತ್ಪನ್ನಗಳ ಕಾಯಿದೆ ಜಾರಿಯಲ್ಲಿದ್ದು, ೧೮ ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಅಪರಾಧವಾಗಿದೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.

ಕಾನೂನಿನ ಅರಿವಿಲ್ಲದೇ ಅಪರಾಧ ಮಾಡಿದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ನಿತ್ಯ ಜೀವನದಲ್ಲಿ ಕಾನೂನುಗಳ ಅರಿವು ಇದ್ದರೆ ನೆಮ್ಮದಿಯ ವಿವಾದ ರಹಿತ ಜೀವನ ನಡೆಸಬಹುದು ಎಂದರು.

ಭ್ರೂಣಲಿಂಗ ಪತ್ತೆ ಮಾಡುವುದು ಸಹ ಅಪರಾಧವಾಗಿದ್ದು, ಕಠಿಣ ಶಿಕ್ಷೆ ಇದೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೂ ಸರ್ಕಾರ ಕಾನೂನು ಮಾಡಿದ್ದು, ಇದರ ಕುರಿತು ನೀವು ಅರಿತು ಸಮಾಜಕ್ಕೂ ತಿಳಿಸಿಕೊಡಿ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಭೂಪತಿಗೌಡ ಮಾತನಾಡಿದರು.

ವೇದಿಕೆಯಲ್ಲಿ ಸುಗಟೂರು ವೈದ್ಯಾಧಿಕಾರಿ ಡಾ.ಕಾವ್ಯ, ಮಕ್ಕಳ ರಕ್ಷಣಾ ಅಭಿವೃದ್ಧಿ ಅಧಿಕಾರಿ ವಿನೋದ್ ಕುಮಾರ್, ಪಿಡಿಒ ರಮೇಶ್, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬೈರೇಗೌಡ, ಗ್ರಾ.ಪಂ ಸದಸ್ಯರಾದ ನಾರಾಯಣಸ್ವಾಮಿ, ಶೋಭಾರಾಣಿ, ಮಂಜುನಾಥ್ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...