ರಮೇಶ್ ಬಿದರಕೆರೆ
ಸತತವಾಗಿ 53 ವರ್ಷದಿಂದ ನಗರದ ಜನರ ಭಕ್ತಿ ಮತ್ತು ಭಾವನೆಗಳಿಗೆ ನೆಲೆಯಾಗಿ ನಿಂತ ನಗರದ ನೆಹರೂ ಮೈದಾನದ ಶಕ್ತಿ ಗಣಪತಿ ವಿಸರ್ಜನೆಯ ಅದ್ಧೂರಿ ಶೋಭಾಯಾತ್ರೆ ಭಾನುವಾರ ವಿಜೃಂಭಣೆಯಿಂದ ಜರುಗಲಿದೆ. ಶಕ್ತಿ ಗಣಪತಿಯು ನಗರ ಭಾಗದವರನ್ನಷ್ಟೇ ಅಲ್ಲದೇ ಗ್ರಾಮೀಣ ಭಾಗದ ನೂರಾರು ಹಳ್ಳಿಗಳ ಜನರನ್ನು ಮೊದಲಿಂದಲೂ ಸೆಳೆಯುತ್ತಿದೆ.
1971 ರ ಸುಮಾರಿಗೆ ಐದಾರು ಜನರು ಸೇರಿ ಶುರು ಮಾಡಿದ ಗಣೇಶ ಪ್ರತಿಷ್ಠಾಪನೆಯ ಅಭಿಯಾನ, ಸತತವಾಗಿ 53 ವರ್ಷದ ನಂತರವೂ ಹಾಗೆಯೇ ಸಾಗಿದೆ. 52 ವರ್ಷದ ಹಿಂದೆ ಸತ್ಯನಾರಾಯಣ ಸ್ವಾಮಿ ದೇಗುಲದ ಬಳಿ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಆನಂತರ ನಗರದ ನೆಹರೂ ಮೈದಾನದ ಆವರಣದಲ್ಲಿ ಸುಮಾರು 40 ವರ್ಷದಿಂದಲೂ ಪ್ರತಿಷ್ಠಾಪಿಸಲಾಗುತ್ತಿದೆ. ಶಕ್ತಿ ಗಣಪತಿ ಪೂಜಾ ಸಮಿತಿಯಿಂದ ಪ್ರತಿ ವರ್ಷವೂ ನಡೆಸುತ್ತಿದ್ದ ಗಣೇಶೋತ್ಸವಕ್ಕೆ ಈ ಬಾರಿ ನಗರಸಭೆಯವರು ಸಹ ಸಾಥ್ ನೀಡಿ ಅದ್ಧೂರಿಯ ಗಣೇಶೋತ್ಸವಕ್ಕೆ ಕಾರಣರಾಗಿದ್ದಾರೆ.ಅ.6ರ ಭಾನುವಾರ ಶಕ್ತಿ ಗಣಪತಿಯ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಾಡಿನ ವಿವಿಧ ಸಂಸ್ಕೃತಿ ಬಿಂಬಿಸುವ ಕಲಾ ಪ್ರಕಾರಗಳ ಮೆರವಣಿಗೆ ಇರುತ್ತದೆ. ಸುಮಾರು 15 ಕ್ಕೂ ಹೆಚ್ಚು ಕಲಾ ಪ್ರಕಾರಗಳ ಸಾಂಗತ್ಯದಲ್ಲಿ ವಿಜೃಂಭಣೆಯ ಮೆರವಣಿಗೆ ನಡೆಯಲಿದೆ. ಸರ್ವ ಧರ್ಮಗಳ ಜನರೂ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೀಗ ಅ.6 ರಂದು ಗಣೇಶ ವಿಸರ್ಜನೆ ಶೋಭಾಯಾತ್ರೆಯಲ್ಲಿ ನಾಸಿಕ್ ನ ಡೊಳ್ಳು ಕಲಾವಿದರು ಸೇರಿದಂತೆ ಸ್ಥಳೀಯ ಕೋಲಾಟ, ಡೊಳ್ಳು, ಗೊಂಬೆ ಕುಣಿತ, ವೀರಗಾಸೆ ಮುಂತಾದ ಹತ್ತಕ್ಕೂ ಹೆಚ್ಚು ಕಲಾ ತಂಡಗಳ ಸಮ್ಮುಖದಲ್ಲಿ ಗಣೇಶನ ಅದ್ಧೂರಿ ಮೆರವಣಿಗೆ ನಡೆಯಲಿದೆ.
ಸರ್ವ ಧರ್ಮದ ಭಾವೈಕ್ಯತೆಯ ಗಣೇಶೋತ್ಸವ ನಡೆಸಿದ ತೃಪ್ತಿಯಿದ್ದು ಎಲ್ಲಾ ಧರ್ಮದ ಜನರೂ ಪ್ರತಿದಿನದ ಈ ಯಶಸ್ವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಒಗ್ಗಟ್ಟಿನ ಸಂಕೇತದಂತಿತ್ತು. ಅ.06 ರಂದು ನಡೆಯುವ ಗಣೇಶನ ಬೃಹತ್ ಶೋಭಾಯಾತ್ರೆಯಲ್ಲಿ ಸಹ ಎಲ್ಲಾ ನಾಗರೀಕರು ಖುದ್ದಾಗಿ ಭಾಗವಹಿಸಿ ಶಕ್ತಿ ಗಣಪತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ವಿಘ್ನ ವಿನಾಯಕನ ಪ್ರತಿಷ್ಠಾಪನೆಯ ದಿನದಿಂದ ಪ್ರತಿದಿನವೂ ಒಂದೊಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಿನನಿತ್ಯ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಅದಲ್ಲದೆ ಕುರುಕ್ಷೇತ್ರ ನಾಟಕ, ದಾಸವಾಣಿ, ಭಜನೆ, ಶಾಸ್ತ್ರೀಯ ಸಂಗೀತ, ಮಿಮಿಕ್ರಿ, ಹರಿಕಥೆ, ಭಕ್ತಿಗೀತೆ, ರಸಮಂಜರಿ, ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದರಿಂದ ನೆಹರೂ ಮೈದಾನ ದಿನವೂ ಹಬ್ಬದ ಸಡಗರ ಹೊಂದುತ್ತಿತ್ತು. ಇದೀಗ ಅ.6ರಂದು ಮಹಾಗಣಪತಿಯ ಅದ್ಧೂರಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ.