ಆಲೂರು: ಸರ್ಕಾರಿ ನೌಕರರು ದಕ್ಷತೆ, ಪ್ರಾಮಾಣಿಕತೆ, ವಿಧೇಯತೆ ಮತ್ತು ವಿನಯತೆಯಿಂದ ಜನಸಾಮಾನ್ಯರ ಕೆಲಸ ಮಾಡಬೇಕು ಎಂದು ತಹಸೀಲ್ದಾರ್ ನಂದಕುಮಾರ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಟೀಪನ್ ಪ್ರಕಾಶ್ ಮತ್ತು ಸಮುದಾಯ ಸಂಘಟನಾಧಿಕಾರಿ ಬಿ. ಎ. ಕೃಷ್ಣೇಗೌಡರವರ ಸೇವಾ ನಿವೃತ್ತಿ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಪೌರ ಸನ್ಮಾನ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಸರ್ಕಾರಿ ಕೆಲಸ ಎಂದರೆ ದೇವರ ಕೆಲಸ. ಜನಸಾಮಾನ್ಯರ ಕೆಲಸ ಮಾಡಲು ಅವಕಾಶ ಸಿಗುವುದು ಅಪರೂಪ, ಅದೃಷ್ಟ ಮತ್ತು ಆಕಸ್ಮಿಕ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಯಮದ ಚೌಕಟ್ಟಿನಲ್ಲಿ ಸಾರ್ವಜನಿಕರ ಕೆಲಸ ಮಾಡಬೇಕು. ನಿಯಮ ಮೀರಿದರೆ ಅದರ ಪ್ರತಿಫಲವನ್ನು ನಾವೇ ಉಣಬೇಕಾಗುತ್ತದೆ. ಕೆಲಸದ ಒತ್ತಡದ ನಡುವೆ ಸಾರ್ವಜನಿಕರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ ಪರಿಹರಿಸಿದರೆ ಆರೋಗ್ಯಕರ ಕೌಟುಂಬಿಕ ಜೀವನ ನಡೆಸಬಹುದು ಎಂದರು.ಪೌರಸನ್ಮಾನ ಸ್ವೀಕರಿಸಿ ಸ್ಟೀಫನ್ ಪ್ರಕಾಶ್ ಮತ್ತು ಕೃಷ್ಣೇಗೌಡ ರವರು ಮಾತನಾಡಿ, ನೌಕರರು ಯಾವಾಗಲೂ ಕಚೇರಿ ಸಿಬ್ಬಂದಿ ತಮ್ಮ ಕುಟುಂಬದವರೆಂದು ಭಾವಿಸಿ, ಆತ್ಮವಿಶ್ವಾಸಕ್ಕೆ ಧಕ್ಕೆಯಾಗದಂತೆ ಸಾರ್ವಜನಿಕರ ಕೆಲಸ ಮಾಡಿದರೆ, ಸೇವೆಯಿಂದ ನಿವೃತ್ತಿಯಾದರೂ ತಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದರು.
ಸಮಾರಂಭದಲ್ಲಿ ಗ್ರೇಡ್-೨ ತಹಸೀಲ್ದಾರ್ ಪೂರ್ಣಿಮ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹಿರಾ ಬೇಗಂ, ತಾಲೂಕು ಆರೋಗ್ಯಾಧಿಕಾರಿ ಡಾ. ನಿಸಾರ್ ಫಾತಿಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿ ಎ. ಟಿ. ಮಲ್ಲೇಶ್, ಎಂಜಿನಿಯರ್ ಕವಿತಾ, ಸಕಲೇಶಪುರ ಪ್ರಭಾರ ಮುಖ್ಯಾಧಿಕಾರಿ ನಟರಾಜ್, ಅರಕಲಗೂಡು ಪ.ಪಂ. ಮುಖ್ಯಾಧಿಕಾರಿ ಶಿಗ್ಗಾವಿ, ಸಕಲೇಶಪುರ ಪುರಸಭೆ ಅಧ್ಯಕ್ಷೆ ಜ್ಯೋತಿರಾಜ್, ಉಪಾಧ್ಯಕ್ಷೆ ಜರೀನ, ಸದಸ್ಯರಾದ ವನಜಾಕ್ಷಿ, ವರಲಕ್ಷ್ಮೀ, ಮೋಹನ್, ಹರೀಶ್, ಧರ್ಮ, ಸಂತೋಷ್, ಪ್ರೇಮ ಸ್ಟೀಫನ್ ಪ್ರಕಾಶ್ ಉಪಸ್ಥಿತರಿದ್ದರು.