ಮಹದಾಯಿ ಯೋಜನೆಯಡಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ 3.9 ಟಿಎಂಸಿ ನೀರನ್ನು ಮೊದಲು ಹು-ಧಾ ಅವಳಿ ನಗರದ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು.
ಹುಬ್ಬಳ್ಳಿ:
ಮಹದಾಯಿ ಯೋಜನೆಯಡಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ 3.9 ಟಿಎಂಸಿ ನೀರನ್ನು ಮೊದಲು ಹು-ಧಾ ಅವಳಿ ನಗರದ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲು ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾಗಿರುವ ಕಾನೂನು ಪ್ರಕ್ರಿಯೆ ಬಗೆಹರಿಸಲು ವಕೀಲರ ತಂಡದ ಮುಖ್ಯಸ್ಥ ಮೋಹನ ಕಾತರಕಿ ಅವರನ್ನು ಬದಲಿಸಿ ಸಮರ್ಥ ವಕೀಲರನ್ನು ನೇಮಿಸಬೇಕು ಎಂದು ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 19ರಂದು ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಮಹದಾಯಿ ಯೋಜನೆ ಹಾಗೂ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ ನಡೆಯಲಿದೆ. ಪಾಲಿಕೆಯ ಎಲ್ಲ 82 ಸದಸ್ಯರು, ಅಧಿಕಾರಿಗಳು ಹಾಗೂ ರೈತರು ಪಾಲ್ಗೊಳ್ಳಬೇಕು. ಸಭೆಯಲ್ಲಿ ಮಲಪ್ರಭಾ ಜಲಾಶಯದಿಂದ ಅವಳಿ ನಗರಕ್ಕೆ ಯಾವ ವರ್ಷದಿಂದ ನೀರು ಪೂರೈಸಲಾಗುತ್ತಿದೆ, ಈವರೆಗೆ ಎಷ್ಟು ಟಿಎಂಸಿ ಬಳಕೆಯಾಗಿದೆ, 24X7 ಯೋಜನೆಯಡಿ ಯಾವ ಪ್ರದೇಶಗಳಿಗೆ ನೀರು ನೀಡಲಾಗಿದೆ ಎಂಬ ಮಾಹಿತಿ ಒದಗಿಸಬೇಕು ಎಂದರು.
ಜಲಾಶಯದಿಂದ ನೀರು ಪೂರೈಕೆ ಆರಂಭವಾದಾಗಿನಿಂದ ಸಂಗ್ರಹಿಸಿರುವ ನೀರಿನ ತೆರಿಗೆ ಹಾಗೂ ಕೈಗಾರಿಕಾ ಕಂಪನಿಗಳಿಂದ ವಸೂಲಿ ಮಾಡಿರುವ ತೆರಿಗೆಯ ವಿವರಗಳನ್ನೂ ಬಹಿರಂಗಪಡಿಸಬೇಕು. ಚುನಾವಣೆ ಸಂದರ್ಭದಲ್ಲಿ ವಾರ್ಡ್ಗಳಿಗೆ ನಿರಂತರ ನೀರು ಪೂರೈಸುವ ಭರವಸೆ ನೀಡಿರುವ ಪಾಲಿಕೆ ಸದಸ್ಯರು ತಮ್ಮ ಜವಾಬ್ದಾರಿ ನಿಭಾಯಿಸಬೇಕು. ಯೋಜನೆ ವಿಳಂಬಕ್ಕೆ ಪಾಲಿಕೆಯ ನಿರ್ಲಕ್ಷ್ಯವೂ ಕಾರಣವಾಗಿದೆ ಎಂದು ಆರೋಪಿಸಿದರು.
ವಕೀಲರ ತಂಡ ಬದಲಾಯಿಸಿ:
ಮಹದಾಯಿ ನ್ಯಾಯಾಧಿಕರಣದ ತೀರ್ಪನ್ನು ಮೂರು ರಾಜ್ಯಗಳು ಒಪ್ಪಿಕೊಂಡಿದ್ದರೂ, ಗೋವಾ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿರುವುದರಿಂದ ವನ್ಯಜೀವಿ ಮತ್ತು ಪರಿಸರ ಪರವಾನಗಿ ಪ್ರಕ್ರಿಯೆ ವಿಳಂಬವಾಗಿದೆ. ಕರ್ನಾಟಕದ ಪರ ವಾದಿಸುತ್ತಿರುವ ವಕೀಲರ ತಂಡ ಪ್ರಕರಣವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಪ್ರಕರಣ ಹಿಂಪಡೆದರೆ ಅಧಿಕಾರಿಗಳಿಗೆ ಮೂರು ವರ್ಷ ಶಿಕ್ಷೆಯಾಗಬಹುದು ಎಂದು ಎಚ್ಚರಿಸಿರುವುದು ಸರಿಯಲ್ಲ. ಹೀಗಾಗಿ ಮೋಹನ ಕಾತರಕಿ ನೇತೃತ್ವದ ತಂಡವನ್ನು ಬದಲಿಸಿ ಸಮರ್ಥ ವಕೀಲರನ್ನು ನೇಮಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು.
ನ.19ರ ಸಭೆಗೆ ಮಹಾನಗರ ಪಾಲಿಕೆ ಸದಸ್ಯರು ಗೈರಾದರೆ ಸಮನ್ವಯ ಸಮಿತಿ ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಿದೆ. ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಜನಪ್ರತಿನಿಧಿಗಳ ಜವಾಬ್ದಾರಿ. ಸಭೆಗೆ ಹಾಜರಾಗದಿದ್ದರೆ ಅವರ ಹೊಣೆಗಾರಿಕೆಯನ್ನು ಮತದಾರರ ಮುಂದೆ ಪ್ರಶ್ನಿಸಬೇಕಾಗುತ್ತದೆ. ಸಭೆಯಲ್ಲಿ ಸುಮಾರು 100 ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಮಲ್ಲಣ್ಣ ಅಲೇಕರ್, ರಾಜ್ಯ ವಕ್ತಾರ ಗುರು ರಾಯನಗೌಡ್ರ, ರಾಜ್ಯ ಸಮಿತಿ ಸದಸ್ಯ ವಿರೂಪಾಕ್ಷಪ್ಪ ಪಾಯಣ್ಣವರ ಸೇರಿದಂತೆ ಹಲವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.