ಉತ್ಫಾದನಾ ಘಟಕದಲ್ಲಿ ಆಧುನಿಕ ಯಂತ್ರೋಪಕರಣ ಬಳಸಿ: ಡಿಸಿ ಮೀನಾ

KannadaprabhaNewsNetwork | Published : Feb 22, 2024 1:46 AM

ಸಾರಾಂಶ

ಕರಕುಶಲ ಕರ್ಮಿಗಳು ಆಧುನಿಕ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚು ಉತ್ಪಾದಿಸಿ ಲಾಭಗಳಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಪಿ.ಎಂ. ವಿಶ್ವಕರ್ಮ ಯೋಜನೆ ಕಾರ್ಯಾಗಾರ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕರಕುಶಲ ಕರ್ಮಿಗಳು ಆಧುನಿಕ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚು ಉತ್ಪಾದಿಸಿ ಲಾಭಗಳಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಂತ್ರಾಲಯ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪಿಎಂ ವಿಶ್ವಕರ್ಮ ಯೋಜನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪಿ.ಎಂ. ವಿಶ್ವಕರ್ಮ ಯೋಜನೆಯು ನಗರ, ಗ್ರಾಮೀಣ ಪ್ರದೇಶದ ಸಾಂಪ್ರದಾಯಿಕ ಕುಶಲ ಕರ್ಮಿಗಳು ಮತ್ತು ಕರಕುಶಲ ಜನರಿಗೆ ಕೌಶಲ್ಯ ತರಬೇತಿ, ಆಧುನಿಕ ಉಪಕರಣಗಳು ಡಿಜಿಟಲ್ ವಹಿವಾಟು ಮತ್ತು ಮಾರುಕಟ್ಟೆಗೆ ಪ್ರೋತ್ಸಾಹದ ಮೂಲಕ ಸಮಗ್ರ ಮತ್ತು ಅಂತ್ಯದ ಬೆಂಬಲ ಒದಗಿಸುವ ಈ ಯೋಜನೆಯನ್ನು ಕುಶಲ ಕರ್ಮಿ ಫಲಾನುಭವಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಕರಕುಶಲ ಕರ್ಮಿಗಳಿಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿಯೊಂದಿಗೆ ಮಾನ್ಯತೆ ನೀಡಲಾಗುತ್ತದೆ. ಯೋಜನೆ ಪ್ರಯೋಜನವನ್ನು ಪ್ರತಿಯೊಂದು ಕುಶಲ ಕರ್ಮಿಗಳು ಸದುಪಯೋಗ ಪಡಿಸಿಕೊಳ್ಳು ವಂತಾಗಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ, ಕರಕುಶಲ ಕರ್ಮಿಗಳು ಪಿಎಂ ವಿಶ್ವಕರ್ಮ ಯೋಜನೆ ಸದುಪಯೋಗ ಪಡೆದುಕೊಂಡು ವಿಶೇಷ ವಸ್ತುಗಳನ್ನು ತಯಾರಿಸಿ ಮಾರುಕಟ್ಟೆಗೆ ತರುವುದರಿಂದ ತಾವು ತಯಾರಿಸಿದ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿ ಅಧಿಕ ಲಾಭ ಗಳಿಸಲು ಸಾಧ್ಯವಾಗುತ್ತದೆ. ಈ ಯೋಜನೆಯಡಿ 18 ವಿವಿಧ ವೃತ್ತಿ ನಡೆಸುತ್ತಿರುವ ಕುಶಲಕರ್ಮಿಗಳಿಗೆ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದರಾಜು ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆಯಡಿ ನೋಂದಾಯಿಸಿಕೊಂಡ ಫಲಾನುಭವಿಗಳು ಈ ಯೋಜನೆ ಲಾಭ ಪಡೆದು ಆರ್ಥಿಕವಾಗಿ ಮುಂದೆ ಬರಬೇಕು. ಜಿಲ್ಲೆಯಲ್ಲಿ ಈಗಾಗಲೇ 22,512 ಜನರು ನೋಂದಾಯಿಸಿಕೊಂಡಿದ್ದು, ಇವರಲ್ಲಿ ಶೇ. 68 ರಷ್ಟು ಮಹಿಳೆಯರಿದ್ದಾರೆ. ಇದರಡಿ ಆಧಾರರಹಿತ ಸಾಲವನ್ನು ಶೇ. 5 ರ ಬಡ್ಡಿ ದರದಲ್ಲಿ ವಿವಿಧ ಬ್ಯಾಂಕ್‌ಗಳಿಂದ ನೀಡಲಾಗುವುದು. ಮಾರುಕಟ್ಟೆ ಸೌಲಭ್ಯ, ಡಿಜಿಟಲ್ ವಹಿವಾಟಿಗೆ ಸಹಾಯಧನ ಸೌಲಭ್ಯ ನೀಡಲಾಗುತ್ತದೆ ಎಂದರು. ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಪ್ರಶಾಂತ್ ಮಾತನಾಡಿ, ಒಂದು ಕುಟುಂಬಕ್ಕೆ ಒಬ್ಬರಂತೆ ಹಾಗೂ ಆ ಕುಟುಂಬದಲ್ಲಿ ಸರ್ಕಾರಿ ನೌಕರಿಯಲ್ಲಿ ಇಲ್ಲದೆ ಇರುವ ಕುರಿತು ಖಾತರಿ ಪಡಿಸಿಕೊಂಡು ನೋಂದಣಿ ಮಾಡಿ ಕೊಳ್ಳಲಾಗುತ್ತದೆ. ಅವರಿಗೆ ಮೊದಲನೆ ಹಂತದಲ್ಲಿ ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಹಾಗೂ ಡಿಜಿಟಲ್ ಗುರುತಿನ ಚೀಟಿ ನೀಡಲಾಗುತ್ತದೆ. ಐದು ದಿನಗಳ ಕೌಶಲ್ಯ ವರ್ಧನೆಗೆ ಸಂಬಂಧಿಸಿದ ತರಬೇತಿ ನೀಡಿ ತರಬೇತಿ ಅವಧಿಯಲ್ಲಿ ಪ್ರತಿ ದಿನ 500 ರು. ಶಿಷ್ಯ ವೇತನ ನೀಡಲಾಗುವುದಲ್ಲದೆ. ತರಬೇತಿ ಕೊನೆ ದಿನ 15 ಸಾವಿರ ರು. ಮೌಲ್ಯದ ವೃತ್ತಿಗೆ ಸಂಬಂಧಿಸಿದ ಸುಧಾರಿತ ಉಪಕರಣಗಳನ್ನು ಉಚಿತವಾಗಿ ನೀಡಲಾಗುವುದು. ಅವಶ್ಯವಿರುವ ಫಲಾನುಭವಿಗಳಿಗೆ ಒಂದು ಲಕ್ಷದವರೆಗೆ ಯಾವುದೇ ಅಡಮಾನ ಪಡೆಯದೆ ಶೇ. 5 ರ ಬಡ್ಡಿ ದರದಲ್ಲಿ ಬ್ಯಾಂಕಿನ ಮೂಲಕ ಸಾಲ ನೀಡಲಾಗುತ್ತದೆ ಎಂದು ಹೇಳಿದರು. ಕಾರ್ಯಾಗಾರದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮಂತ್ರಾಲಯದ ಕೆ. ಸಾಕ್ರಟೀಸ್, ಉಪ ನಿರ್ದೇಶಕ ಗೋಪಿನಾಥ್ ರಾವ್, ಸಹಾಯಕ ನಿರ್ದೇಶಕ ಬಿ.ಎಸ್. ಹೊಸಮನಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಎನ್. ಚಂದ್ರಶೇಖರ್, ಉಪ ನಿರ್ದೇಶಕ ರವಿಪ್ರಸಾದ್, ಗ್ರಾಮೀಣ ಕೈಗಾರಿಕೆ ಉಪ ನಿರ್ದೇಶಕ ವಿ. ಉಮೇಶ್ ಉಪಸ್ಥಿತರಿದ್ದರು.

ಪೋಟೋ ಫೈಲ್‌ ನೇಮ್‌ 21 ಕೆಸಿಕೆಎಂ 5ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಪಿಎಂ ವಿಶ್ವಕರ್ಮ ಯೋಜನೆ ಕುರಿತ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಉದ್ಘಾಟಿಸಿದರು. ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಪ್ರಶಾಂತ್ ಇದ್ದರು.

Share this article