ಆಧುನಿಕ ತಂತ್ರಜ್ಞಾನ ಬಳಸಿ, ಶೈಕ್ಷಣಿಕ ಪ್ರಗತಿಗೆ ಸಮಯ ಮೀಸಲಿಡಿ: ಸಂಕನೂರ

KannadaprabhaNewsNetwork |  
Published : Sep 07, 2026, 02:45 AM IST
ಕಾರ್ಯಕ್ರಮವನ್ನ ವಿಪ ಸದಸ್ಯ ಎಸ್‌.ವಿ. ಸಂಕನೂರ ಉದ್ಘಾಟಿಸಿದರು. | Kannada Prabha

ಸಾರಾಂಶ

ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಸಮಯ ಮೀಸಲಿಡುವಂತಾಗಬೇಕು.

ಕನ್ನಡಪ್ರಭ ವಾರ್ತೆ ಗದಗ

ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಸಮಯ ಮೀಸಲಿಡುವಂತಾಗಬೇಕು. ಬೋಧನಾ ಕಾರ್ಯಕ್ಕೆ ಆದ್ಯತೆ ನೀಡುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ವಿಧಾನಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿದರು.

ನಗರದ ಡಾ. ಬಿ .ಆರ್. ಅಂಬೇಡ್ಕರ್‌ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದ ಸರಾಸರಿ ಫಲಿತಾಂಶ ಶೇ.93 ರಷ್ಟಿದ್ದರೆ, ಗದಗ ಜಿಲ್ಲೆ ಶೇ.94ರಷ್ಟು ಫಲಿತಾಂಶ ದಾಖಲಿಸಿ ರಾಜ್ಯದ ಸರಾಸರಿಯನ್ನು ಮೀರಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಜಿಲ್ಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರಂತರ ಪರಿಶ್ರಮ ಕಾರಣವಾಗಿದೆ ಎಂದರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ, ಜ್ಞಾನ ಮತ್ತು ಶೈಕ್ಷಣಿಕ ಸೇವೆ ಪ್ರತಿಯೊಬ್ಬ ಶಿಕ್ಷಕರಿಗೂ ಪ್ರೇರಣೆಯಾಗಿದೆ. ಉಪನ್ಯಾಸಕರಾಗಿ ಸೇವೆ ಆರಂಭಿಸಿ, ವಿಶ್ವವಿದ್ಯಾಲಯದ ಕುಲಪತಿ, ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿ ಹುದ್ದೆಗೇರಿದ ಅವರ ಜ್ಞಾನ, ಸರಳತೆ ಹಾಗೂ ನಿರಂತರ ಕಲಿಕೆಯ ಮನೋಭಾವವನ್ನು ಶಿಕ್ಷಕರು ತಮ್ಮ ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಶಿಕ್ಷಕ ವೃತ್ತಿಯು ಸಮಾಜ ನಿರ್ಮಾಣದ ಪ್ರಮುಖ ಕೊಂಡಿಯಾಗಿದೆ. ಶಿಕ್ಷಕರ ಗೌರವ ಮತ್ತು ಘನತೆಯನ್ನು ಎತ್ತಿಹಿಡಿಯುವುದರ ಮೂಲಕ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯ. ಶಿಕ್ಷಕರು ಕೇವಲ ಪಠ್ಯ ಬೋಧನೆಗೆ ಸೀಮಿತವಾಗದೆ, ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳು, ಶಿಸ್ತು, ಜವಾಬ್ದಾರಿ ಹಾಗೂ ಆತ್ಮವಿಶ್ವಾಸ ಬೆಳೆಸುವ ಕಾರ್ಯದಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ನಡೆಯುವ ಆನ್‌ಲೈನ್ ಹಾಗೂ ಡಿಜಿಟಲ್ ಕಾರ್ಯಗಳನ್ನು ಸುಗಮಗೊಳಿಸಲು ಅಗತ್ಯ ಸಹಾಯಕ ಸಿಬ್ಬಂದಿಯನ್ನು ಒದಗಿಸುವ ಕುರಿತು ಸರ್ಕಾರ ಗಮನ ಹರಿಸಬೇಕು. ಶಾಲೆಗಳಲ್ಲಿ ಕಂಪ್ಯೂಟರ್ ಅಥವಾ ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಒದಗಿಸುವುದರಿಂದ ಡಿಜಿಟಲ್ ಕಾರ್ಯಗಳು ವ್ಯವಸ್ಥಿತವಾಗಿ ನಡೆಯುವುದರ ಜೊತೆಗೆ, ಶಿಕ್ಷಕರು ವಿದ್ಯಾರ್ಥಿಗಳ ಬೋಧನೆ, ಮಾರ್ಗದರ್ಶನ ಹಾಗೂ ಕಲಿಕಾ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ಮೀಸಲಿಡಲು ಸಾಧ್ಯವಾಗುತ್ತದೆ ಎಂದರು.

ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳ ಉದ್ದೇಶ ಶಿಕ್ಷಕರ ಕಾರ್ಯವನ್ನು ಸುಲಭಗೊಳಿಸುವುದು ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಾಗಿರಬೇಕು. ಡಿಜಿಟಲ್ ವ್ಯವಸ್ಥೆಗಳನ್ನು ಸಹಕಾರ ಮತ್ತು ಪಾರದರ್ಶಕತೆಯ ದೃಷ್ಟಿಕೋನದಿಂದ ಬಳಸುವ ಮೂಲಕ ಶಿಕ್ಷಕರ ಆತ್ಮವಿಶ್ವಾಸ ಹೆಚ್ಚಿಸುವ ಹಾಗೂ ಬೋಧನೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದರು.

ಈ ವೇಳೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಿ ಶಿಕ್ಷಕರನ್ನು ಗೌರವಿಸಲಾಯಿತು. ನಿವೃತ್ತ ಶಿಕ್ಷಕರನ್ನ ಸನ್ಮಾನಿಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಾಬರ್ಚಿ, ಸಿದ್ದು ಪಾಟೀಲ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ, ಬಸವರಾಜ ಬಳ್ಳಾರಿ, ಎಸ್.ಎನ್. ಬಳ್ಳಾರಿ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಇದ್ದರು. ಕೆ.ಡಿ. ಬಡಿಗೇರ ಸ್ವಾಗತಿಸಿದರು. ಎಂ.ಎಂ. ಮೇಗಲಮನಿ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾವ್ಯಕ್ಕಿದೆ ಅಮಂಗಳ ನಾಶ ಮಾಡುವ ಶಕ್ತಿ: ಸ್ವರ್ಣವಲ್ಲೀ ಶ್ರೀ
ಪ್ಲಾಸ್ಟಿಕನಲ್ಲಿ ಸಂಗ್ರಹಿಸಿದ ನೀರು ಆರೋಗ್ಯಕ್ಕೆ ಮಾರಕ: ರಾಘವೇಶ್ವರ ಶ್ರೀ