ಕುಂದಾಪುರ: ಕೃತಕ ಬುದ್ಧಿಮತ್ತೆ (ಎಐ) ಕಾನೂನು ವೃತ್ತಿಗೆ ಸವಾಲಲ್ಲ. ಅದನ್ನು ಸಮರ್ಪಕವಾಗಿ ಬಳಸಿಕೊಂಡರೆ ವಕೀಲರ ಕಾರ್ಯಕ್ಷಮತೆ ಹೆಚ್ಚಲಿದೆ ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತ ನ್ಯಾಯಾಧೀಶ ಎಂ.ಐ. ಅರುಣ್ ಹೇಳಿದರು.
ಹೊಸ ವಕೀಲರಿಗೆ ನ್ಯಾಯಾಲಯದ ಜೊತೆಗೆ ತಹಸೀಲ್ದಾರ್ ಕಚೇರಿ, ಪೊಲೀಸ್ ಠಾಣೆ ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಪ್ರಾಯೋಗಿಕ ತರಬೇತಿ ನೀಡುವ ವ್ಯವಸ್ಥೆ ರೂಪಿಸಬೇಕು. ಮಧ್ಯಸ್ಥಿಕೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ದೀರ್ಘ ಕಾಲ ಬಾಕಿ ಉಳಿದಿರುವ ಅನೇಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸಾಧ್ಯವಾಗುತ್ತದೆ ಎಂದರು.ವಕೀಲರು ಮತ್ತು ನ್ಯಾಯಾಧೀಶರು ಜೀವನಪೂರ್ತಿ ವಿದ್ಯಾರ್ಥಿಗಳಾಗಿಯೇ ಇರಬೇಕು. ಹೊಸ ಕಾನೂನುಗಳು, ನ್ಯಾಯಾಲಯಗಳ ಮಹತ್ವದ ತೀರ್ಪುಗಳು ಹಾಗೂ ಇತ್ತೀಚಿನ ಬೆಳವಣಿಗೆಗಳ ಕುರಿತು ಆನ್‌ಲೈನ್ ಮತ್ತು ಆಫ್‌ಲೈನ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಿರಂತರ ಕಾನೂನು ಶಿಕ್ಷಣಕ್ಕೆ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ನ್ಯಾಯಾಂಗದ ಮೇಲೆ ಸಮಾಜದ ವಿಶ್ವಾಸ ಉಳಿಯಬೇಕಾದರೆ ಬದ್ಧತೆ ಮತ್ತು ಪಾರದರ್ಶಕತೆ ಅತ್ಯಗತ್ಯ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಾದರೆ ಅಪರಾಧಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟ ಅವರು, ಸಮಾಜದ ಎಲ್ಲ ಕ್ಷೇತ್ರಗಳಲ್ಲಿರುವ ಸಮರ್ಥ ನಾಯಕರನ್ನು ಗುರುತಿಸುವ ಮನೋಭಾವ ಬೆಳೆಯಬೇಕು ಎಂದು ಹೇಳಿದರು.ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ನಾಲ್ಕು ದಶಕಗಳ ಕಾಲ ವೃತ್ತಿ ಬದ್ಧತೆಯಿಂದ ಸೇವೆ ಸಲ್ಲಿಸಿರುವ ಶ್ಯಾಮಲಾ ಭಂಡಾರಿ ಅವರು ರಾಜ್ಯ ವಕೀಲರ ಪರಿಷತ್ತಿಗೆ ಆಯ್ಕೆಯಾಗಿರುವುದು ಕುಂದಾಪುರಕ್ಕೆ ಹೆಮ್ಮೆಯ ಸಂಗತಿ ಎಂದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಮಾತನಾಡಿ, ಮಾನವೀಯ ಮೌಲ್ಯಗಳು ಹಾಗೂ ವೃತ್ತಿ ನಿಷ್ಠೆಯ ಮೂಲಕ ಶ್ಯಾಮಲಾ ಭಂಡಾರಿ ಅವರು ವಕೀಲ ವೃತ್ತಿಯ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಶ್ಲಾಘಿಸಿದರು.ಸನ್ಮಾನ ಸ್ವೀಕರಿಸಿದ ಶ್ಯಾಮಲಾ ಭಂಡಾರಿ ಮಾತನಾಡಿ, ವಕೀಲರ ಕಲ್ಯಾಣಕ್ಕೆ ಆದ್ಯತೆ ನೀಡಲಾಗುವುದು. ಮೃತಪಟ್ಟ ವಕೀಲರ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ಹಾಗೂ ಆರೋಗ್ಯ ಸಮಸ್ಯೆ ಎದುರಿಸುವ ವಕೀಲರಿಗೆ ತುರ್ತು ಆರ್ಥಿಕ ನೆರವು ದೊರಕಿಸುವ ನಿಟ್ಟಿನಲ್ಲಿ ರಾಜ್ಯ ವಕೀಲರ ಪರಿಷತ್ತಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಶ್ಯಾಮಲಾ ಭಂಡಾರಿ ಹಾಗೂ ನ್ಯಾಯಮೂರ್ತಿ ಎಂ.ಐ. ಅರುಣ್ ಅವರನ್ನು ಸನ್ಮಾನಿಸಲಾಯಿತು.ನ್ಯಾಯಾಧೀಶರಾದ ಕುಮಾರ್ ಜಿ., ನಿತಿನ್ ಎಸ್. ರಾವ್, ಮಂಜುಳಾ, ಶ್ರೀನಿವಾಸ ಕೆ.ಎಲ್., ಮಣಿಕಂಠ ಎಂ.ಎಸ್., ಸರ್ಕಾರಿ ಅಭಿಯೋಜಕಿ ಇಂದಿರಾ ನಾಯ್ಕ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಉದಯ್ ಕುಮಾರ್ ಮತ್ತು ಉಮಾ ನಾಯ್ಕ್, ಹಿರಿಯ ವಕೀಲರಾದ ಎ.ಬಿ. ಶೆಟ್ಟಿ, ಬಾರ್ ಅಸೋಸಿಯೇಶನ್ ಉಪಾಧ್ಯಕ್ಷ ಸುಮನ್ ಕೆ. ಸುವರ್ಣ, ಜಂಟಿ ಕಾರ್ಯದರ್ಶಿ ಚರಣ್‌ರಾಜ್ ಸೇರಿದಂತೆ ಪದಾಧಿಕಾರಿಗಳು ಹಾಗೂ ವಕೀಲರು ಉಪಸ್ಥಿತರಿದ್ದರು.